Site icon Vistara News

Narendra Modi: ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಸ್ನೇಹ ಮಿಲನ; ನಾವೆಲ್ಲರೂ ಒಂದೇ ಕುಟುಂಬ ಎಂದು ಬಣ್ಣಿಸಿದ ಪ್ರಧಾನಿ

Narendra Modi

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ದೆಹಲಿಯ ಬಿಜೆಪಿ (BJP) ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ನೆರವಾದ ಪ್ರತಿಯೊಬ್ಬರಿಗೂ ಮೋದಿ ಧನ್ಯವಾದ ಅರ್ಪಿಸಿದರು. ‘ಸ್ನೇಹ ಮಿಲನ್‌’ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶೇಷ ಎಂದರೆ ಮೂರನೇ ಬಾರಿ ಪ್ರದಾನಿ ಪಟ್ಟಕ್ಕಲೇರಿದ ಬಳಿಕ ಕಾರ್ಯಕರ್ತರೊಂದಿಗೆ ಮೋದಿ ನಡೆಸಿದ ಮೊದಲ ಸಮಾಲೋಚನೆ ಇದಾಗಿದೆ.

ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಮೋದಿ ಅವರನ್ನು ಪಕ್ಷದ ಕಚೇರಿಗೆ ಸ್ವಾಗತಿಸಿದರು. ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್, ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಮೋದಿ ಬಣ್ಣಿಸಿದರು. ತವರು ರಾಜ್ಯ ಗುಜರಾತ್ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡ ದಿನಗಳನ್ನು ನೆನಪಿಸಿಕೊಂಡ ಅವರು, ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಸೀಮಿತ ಸಂಪನ್ಮೂಲಗಳೊಂದಿಗೆ ಪಕ್ಷವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ರಜಾಗಳಿಲ್ಲದೆ ಮೂರು ತಿಂಗಳ ಕಾಲ ಕೆಲಸ ಮಾಡಲು ಎಲ್ಲವನ್ನೂ ತ್ಯಾಗ ಮಾಡಿದ್ದಕ್ಕಾಗಿ ಪಕ್ಷದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ ಅವರು, ಪಕ್ಷದ ಸಂಘಟನೆಗಿಂತ ದೊಡ್ಡದು ಯಾವುದೂ ಇಲ್ಲ ಮತ್ತು ಎಲ್ಲ ಸಿಬ್ಬಂದಿ ಅದರ ಕೇಂದ್ರ ಬಿಂದು ಎಂದು ಒತ್ತಿ ಹೇಳಿದರು. ತಮ್ಮೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಹಿರಿಯ ಕಾರ್ಯಕರ್ತರನ್ನು ಮುಂದೊಂದು ದಿನ ಭೇಟಿಯಾಗುವುದಾಗಿ ಅವರು ತಿಳಿಸಿದರು.

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. “ಪ್ರಧಾನಿ ಮೋದಿ ಅವರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಈ ಪೈಕಿ ಅನೇಕರು ದಶಕಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷವು 2 ಸ್ಥಾನಗಳಿಂದ 303ಕ್ಕೆ ಏರಿರುವುದನ್ನು ಅವರು ನೋಡಿದ್ದಾರೆʼʼ ಎಂದು ತಿಳಿಸಿದ್ದಾರೆ. ಅವರನ್ನು ಪಕ್ಷ ಗುರುತಿಸಿದ್ದಕ್ಕೆ ಭಾವುಕರಾಗಿದ್ದರು ಎಂದು ಹೇಳಿದ್ದಾರೆ.

ವಿಶೇಷವೆಂದರೆ ಜುಲೈ ಅಂತ್ಯದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರಲಿದ್ದಾರೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಸರ್ಕಾರ ಮತ್ತು ಸಂಘಟನೆಯ ನಡುವಿನ ಸಮನ್ವಯತೆ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ಜುಲೈ 14ರಂದು, ಉತ್ತರ ಪ್ರದೇಶ ಬಿಜೆಪಿ ಘಟಕವು ತನ್ನ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಲಖನೌ ಡಾ.ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆಸಿತ್ತು. ಈ ಸಭೆಯಲ್ಲಿ 2024ರ ಲೋಕಸಭೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಲಾಗಿತ್ತು. 

Exit mobile version