ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಗುರುವಾರ (ಡಿ. 21) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಈ ವೇಳೆ ಮೈತ್ರಿ ಮಾತುಕತೆ (BJP JDS Alliance) ಹಾಗೂ ಸೀಟು ಹಂಚಿಕೆ ಬಗ್ಗೆ ಚರ್ಚೆಗಳು ನಡೆದಿವೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಧಾನಿ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ (Karnataka Lok Sabha constituency) 28ಕ್ಕೆ 28 ಕ್ಷೇತ್ರ ಗೆಲ್ಲಬೇಕು ಅನ್ನೋದು ನಮ್ಮ ಗುರಿ ಎಂದು ಹೇಳಿದರು.
ನಮ್ಮ ಎನ್‌ಡಿಎ ಮೈತ್ರಿಕೂಟ ಈ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಂಸತ್‌ನಲ್ಲಿ ಭದ್ರಾತಾ ಲೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಪಾಸ್ ಕೊಡೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವೇ ಸಾಮಾನ್ಯ. ಪಾಸ್ ಕೊಡಬೇಕಿದ್ದರೆ ಪ್ರತಾಪ್ ಸಿಂಹ ಅವರಿಗೆ ಏನು ಕನಸು ಬಿದ್ದಿತ್ತಾ? ಈ ಹುಡುಗ ಪಾಸ್ ತಗೊಂಡು ಈ ರೀತಿ ಮಾಡುತ್ತಾನಾ ಅಂತ ಅವರಿಗೇನು ಗೊತ್ತಿತ್ತಾ? ನಾನು ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದನ್ನು ಕೇಳಿದ್ದೇನೆ. ಆದರೆ, ಅವರು ರಾಜ್ಯ ವಿಧಾನಸಭೆಯಲ್ಲಾದ ಘಟನೆಯನ್ನು ಮರೆತಿದ್ದಾರಾ? ರಾಜ್ಯದಲ್ಲಿ ವಿಧಾನಸಭಾ ಕಲಾಪ ನಡೆಯುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ಶಾಸಕರ ಆಸನದಲ್ಲಿ ಕುಳಿತಿದ್ದ. ಆತ ಅಲ್ಲಿ ಒಂದೂವರೆ ಗಂಟೆ ಕಾಲ ಕಳಿತಿದ್ದ. ಹಾಗಂತ ಅದು ಭದ್ರಾತಾ ಲೋಪ ಅಂತ ನಾವು ಗಲಾಟೆ ಮಾಡಿದ್ದೆವಾ? ಇದರ ಬಗ್ಗೆ ಯಾಕೆ ಸಿದ್ದರಾಮಯ್ಯ ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.
ದೇವೇಗೌಡ ಜತೆ ಮೋದಿಯದ್ದು ಭಾವನಾತ್ಮಕ ಸಂಬಂಧ
ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು, ಎಚ್.ಡಿ. ದೇವೇಗೌಡ, ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಎಲ್ಲರೂ ಸೇರಿ ಭೇಟಿಯಾಗಿದ್ದೇವೆ. ನಂತರ ನಾನು ಹಾಗೂ ದೇವೇಗೌಡರು ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರ ಜತೆ ಮೋದಿ ಅವರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಮೋದಿ ಪ್ರಧಾನಿ ಆದಾಗಿಂದ ದೇವೇಗೌಡರಿಗೆ ಅದೇ ಗೌರವವನ್ನು ಕೊಟ್ಟಿದ್ದಾರೆ. ನಾನು ಮುಖ್ಯಮಂತ್ರಿ ಆದಾಗ 7-8 ಬಾರಿ ಭೇಟಿಯಾಗಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನೀನು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಯಾಕೆ ನೀವು ಹೀಗೆ ಮಾಡುತ್ತಾ ಇದ್ದೀರಾ ಎಂಬುದು ಗೊತ್ತಾಗುತ್ತಿಲ್ಲ ಎಂದು ನಾನು 2018ರಲ್ಲಿ ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಹೇಳಿದ್ದರು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: Yuva Nidhi Scheme: ಜ. 12ಕ್ಕೆ ಖಾತೆಗೆ ಯುವ ನಿಧಿ ಹಣ ಜಮೆ; ಸುಳ್ಳು ಹೇಳಿ ಪಡೆದರೆ ಕಾಸು ರಿಕವರಿ, ಕೇಸ್!
ಕೊಬ್ಬರಿಗೆ ಬೆಂಬಲ ಬೆಲೆ; ಪ್ರಧಾನಿಗೆ ವಿವರಿಸಿದ್ದೇನೆ
ಕಾಡುಗೊಲ್ಲ ಸಮಾಜಕ್ಕೆ ಮೀಸಲಾತಿ ದೊರಕಬೇಕು ಅಂತ ದೇವೇಗೌಡರು ಮನವಿ ಮಾಡಿದ್ದಾರೆ. ರಾಜ್ಯದ ನೀರಾವರಿಗೆ ಸಂಬಂಧಪಟ್ಟಂತೆ ಮಾತುಕತೆ ಮಾಡಿದ್ದಾರೆ. ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಅಂತ ಮನವಿ ಮಾಡಿದ್ದೇವೆ. ನಾನು ಆರ್ಥಿಕ ಹೊರೆ ಬಗ್ಗೆ ಅವರಿಗೆ ವಿವರಿಸಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.