ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಅಕ್ರಮ ನಡೆದಿರುವ ಪ್ರಕರಣವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನೀಟ್ ರದ್ದು ಪಡಿಸಬೇಕು ಎಂದು ಕೋರಿ ಇಂದು ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ನಿರ್ಣಯ ಮಂಡಿಸಲಿದ್ದಾರೆ (Karnataka Assembly Session).
ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಜುಲೈ 22ರಂದು ನಡೆದ ನಡೆದ ಸಂಪುಟ ಸಭೆಯಲ್ಲಿ ನೀಟ್ ಪರೀಕ್ಷೆಯನ್ನು ವಿರೋಧಿಸಲು ನಿರ್ಧರಿಸಲಾಗಿತ್ತು. ಹೀಗಾಗಿ ಇಂದು ಶರಣು ಪ್ರಕಾಶ್ ಪಾಟೀಲ್ ನಿರ್ಣಯ ಮಂಡಿಸಲಿದ್ದಾರೆ. ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಹಾಗೂ ಶಾಲಾ ಸಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುವುದು ಮಾತ್ರವಲ್ಲದೆ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ಇದನ್ನು ರದ್ದು ಪಡಿಸಬೇಕು ಎನ್ನುವುದು ಸರ್ಕಾರದ ವಾದ.
ಈ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕೆಂದು ಹಾಗೂ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಡೆಸುವು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡಬೇಕೆಂದು ಸರ್ಕಾರ ಆಗ್ರಹಿಸಿದೆ. ನೀಟ್ ಪರೀಕ್ಷೆಗಳಲ್ಲಿ ಆಗುತ್ತಿರುವ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆಯನ್ನು ರದ್ದು ಪಡಿಸುವ ಜತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಸಹ ಮಾಡುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಏನಿದು ನೀಟ್ ಅಕ್ರಮ ಕೇಸ್?
ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್ ಮಾರ್ಕ್ಸ್ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್ ಮೈಂಡ್ ಅಮಿತ್ ಆನಂದ್ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: NEET UG 2024: ನೀಟ್ ಮರು ಪರೀಕ್ಷೆ ನಡೆಸುವುದಿಲ್ಲ; ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು
ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.