Site icon Vistara News

Nigama Mandali : ನಿಗಮ ಮಂಡಳಿ ಪಟ್ಟಿ ಫೈನಲ್‌; ಶಾಸಕರಿಗೇ ಮಣೆ, ಕಾರ್ಯಕರ್ತರಿಗಿಲ್ಲ ಅವಕಾಶ

Siddaramaiah DK Shivakumar board and Corporation

ಬೆಂಗಳೂರು: ರಾಜ್ಯದಲ್ಲಿ ನಿಗಮ ಮತ್ತು ಮಂಡಳಿಗಳ (Nigama Mandali) ನೇಮಕಾತಿಯ ಪಟ್ಟಿ ಫೈನಲ್‌ ಆಗಿದೆ. ಆದರೆ, ಈ ಬಾರಿಯೂ ಕಾರ್ಯಕರ್ತರು ಅವಕಾಶ ಮಿಸ್‌ ಮಾಡಿಕೊಂಡಿದ್ದಾರೆ. ಒಟ್ಟು 30 ಮಂದಿಯ ಹೆಸರು ಫೈನಲ್‌ ಆಗಿದ್ದು, ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಶಾಸಕರೇ (MLAs got lion Share) ಆಗಿದ್ದಾರೆ, ಉಳಿದವರು ಪ್ರಭಾವಿಗಳು ಎಂದು ತಿಳಿದುಬಂದಿದೆ.

ರಾಜ್ಯ ಸಚಿವ ಸಂಪುಟದಲ್ಲಿ (State Cabinet) ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಉಳಿದ ಶಾಸಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಬಹುತೇಕ ಬಂದ್‌ ಆಗಿದೆ. ಆದರೆ ಮಂತ್ರಿ ಸ್ಥಾನ ಇಲ್ಲವೇ ಅಧಿಕಾರ ಬೇಕೇಬೇಕು ಎಂದು ಹಠ ಹಿಡಿದಿರುವ ಶಾಸಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಕೆಲವರನ್ನಾದರೂ ಸಮಾಧಾನ ಮಾಡುವ ಉದ್ದೇಶದಿಂದ ಇದೀಗ ಸುಮಾರು 20 ಮಂದಿಯನ್ನು ನಿಗಮ ಮತ್ತು ಮಂಡಳಿಗಳ (Board and Corporation) ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ನಿಗಮ-ಮಂಡಳಿಗೆ ಆದಷ್ಟು ಬೇಗನೆ ನೇಮಕಾತಿ ಮಾಡಬೇಕು ಎನ್ನುವುದು ಪಕ್ಷದ ನಿರ್ಧಾರವಾಗಿತ್ತು. ಇದರ ಅನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ 3೦ ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

ಸುಮಾರು 20 ಶಾಸಕರಿಗೆ ಆಯಕಟ್ಟಿನ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು, ಶುಕ್ರವಾರ ಒಂದು ಸುತ್ತಿನ ಚರ್ಚೆ ಆಗಿದೆ. ಮೊದಲು ಯಾರು ಯಾರಿಗೆ ಕೊಡಬೇಕೆಂದು ನಾವು ಪಟ್ಟಿ ಮಾಡಿದ್ದೇವೆ. ಹಿರಿಯ ನಾಯಕರಿಗೆ ಅವಕಾಶ ಕೊಡಬೇಕಿದೆ. ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳು ಕರ್ನಾಟಕಕ್ಕೆ ಬಂದಾಗ ನಿಗಮ ಮಂಡಳಿ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Politics: ಡಿಕೆಶಿ ಹೊರಗಿಟ್ಟು ಕೈ ನಾಯಕರ ಡಿನ್ನರ್ ಪಾಲಿಟಿಕ್ಸ್; ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

ಹಾಗಿದ್ದರೆ ಯಾರಿಗೆಲ್ಲ ಒಲಿಯಲಿದೆ ನಿಗಮ ಮಂಡಳಿ?

ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ನರೇಂದ್ರಸ್ವಾಮಿ, ಬಸವರಾಜ ರಾಯರೆಡ್ಡಿ, ಎ.ಆರ್. ಕೃಷ್ಣಮೂರ್ತಿ, ಬಂಗಾರಪೇಟೆ ನಾರಾಯಣಸ್ವಾಮಿ, ಕೋಲಾರ ನಂಜೇಗೌಡ, ಬಿ.ಕೆ.ಸಂಗಮೇಶ್,ಬಿ.ಆರ್. ಪಾಟೀಲ್,ಎಂ.ವೈ.ಪಾಟೀಲ್, ಬಿ.ಜಿ ಗೋವಿಂದಪ್ಪ, ರಾಘವೇಂದ್ರ ಹಿಟ್ನಾಳ್, ಪ್ರಸಾದ್ ಅಬ್ಬಯ್ಯ,, ಶಿವಲಿಂಗೇಗೌಡ, ರೂಪ ಶಶಿಧರ್, ರಾಜೇಗೌಡ, ರಘುಮೂರ್ತಿ, ಗಣೇಶ್ ಹುಕ್ಕೇರಿ, ಅನಿಲ್ ಚಿಕ್ಕಮಾದು, ಷಡಕ್ಷರಿ, ಪ್ರಿಯಾಕೃಷ್ಣ, ಮಾಗಡಿ ಬಾಲಕೃಷ್ಣ ಅವರಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ.

ಯಾವ ಆಧಾರದಲ್ಲಿ ಮಣೆ ಹಾಕಲಾಗಿದೆ.

ಮೊದಲ ಪಟ್ಟಿಯಲ್ಲಿ ಮೂವತ್ತು ಮಂದಿಗೆ ಅವಕಾಶ ನೀಡಿರುವ ಸಿಎಂ, ಡಿಸಿಎಂ ಅವರು ಕೆಲವೊಂದು ಮಾನದಂಡಗಳನ್ನು ಇಟ್ಟುಕೊಂಡಿದ್ದರು. ಪಟ್ಟಿಯಲ್ಲಿ ಸಿಎಂ ಹಾಗೂ ಡಿಸಿಎಂ ತಮ್ಮ ಆಪ್ತ ಶಾಸಕರಿಗೆ ಮಣೆ ಹಾಕಿದ್ದಾರಾದರೂ ಎರಡಕಿಂತಲೂ ಹೆಚ್ಚು ಬಾರಿ ಗೆದ್ದವರಿಗೆ, ಜಿಲ್ಲೆವಾರು ಮತ್ತು ಜಾತಿವಾರು ಲೆಕ್ಕಾಚಾರವನ್ನೂ ಮಾಡಲಾಗಿದೆ.

Exit mobile version