Site icon Vistara News

Nikhil Kumaraswamy: ಎಚ್‌ಡಿಕೆ ಆರೋಗ್ಯ ನೆನೆದು ಮಂಡ್ಯ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾವುಕ

Nikhil Kumaraswamy

ಮಂಡ್ಯ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ನೆನಪಿಸಿಕೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ತೀವ್ರ ಭಾವುಕರಾಗಿರುವುದು ಶುಕ್ರವಾರ ಕಂಡುಬಂದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನನ್ನ ಆಯುಸ್ಸನ್ನು ಕೂಡ ಧಾರೆ ಎರೆದು ಆ ಧರ್ಮಸ್ಥಳದ ಮಂಜುನಾಥ ಸ್ವಾಮಿ, ತಂದೆಯವರ ಆರೋಗ್ಯ ಕಾಪಾಡಲಿ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ನಾಲ್ಕೈದು ದಿನಗಳಲ್ಲಿ ಕುಮಾರಣ್ಣ ಅವರು ಮತ್ತೆ ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರು ಕ್ಷೇಮವಾಗಿ ಆಸ್ಪತ್ರೆಯಿಂದ ವಾಪಸ್ ಬರುತ್ತಾರೆ. ಅದಕ್ಕಾಗಿ ನನ್ನ ಇಷ್ಟದೈವ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ಬೇಡಿಕೊಂಡಿದ್ದೇನೆ. ನನ್ನ ಆಯುಸ್ಸು ಧಾರೆ ಎರೆದು ಆ ಮಂಜುನಾಥ ಸ್ವಾಮಿ ತಂದೆಯವರ ಆಯುಸ್ಸು ಹೆಚ್ಚಿಸಲಿ. ನಾನು ಮಂಜುನಾಥಸ್ವಾಮಿಯ ಭಕ್ತ, ನಮ್ಮ ತಂದೆಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ, ಅವಕಾಶ ಕೊಡು ಎಂದು ಆ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಅವರು ಭಾರವಾದ ದನಿಯಲ್ಲಿ ಹೇಳಿದರು.

ಇದನ್ನೂ ಓದಿ Lok Sabha Election 2024: ಜೆಡಿಎಸ್‌ಗೆ 2 ಕ್ಷೇತ್ರ ಮಾತ್ರ! ಕೋಲಾರದಲ್ಲೂ ಬಿಜೆಪಿ ಅಭ್ಯರ್ಥಿ?

ಶಸ್ತ್ರಚಿಕಿತ್ಸೆಯ ನಂತರ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಉದ್ದಗಲಕ್ಕೂ ಪ್ರವಾಸ ಮಾಡುತ್ತಾರೆ. ನಾನು ಕೂಡ ಹಳ್ಳಿ ಹಳ್ಳಿಗೂ ಹೋಗುತ್ತೇನೆ. ಜನರ ಕಾಲು ಕಟ್ಟುತ್ತೇನೆ. ನಾವು ಏನು ತಪ್ಪು ಮಾಡಿದ್ದೇವೆ ಎಂದು ಕೇಳುತ್ತೇನೆ ಎಂದು ಹೇಳಿದರು. ಪುತ್ರನ ಮಾತುಗಳು ಕೇಳಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಣ್ಣಾಲಿಗಳು ಒದ್ದೆಯಾದವು.

ಶಾಂತವಾಗಿ ಚುನಾವಣೆ ನಡೆಸೋಣ ಎಂದ ನಿಖಿಲ್

ಜಿಲ್ಲೆಯ ಒಡನಾಟದಿಂದ ಈ ನೆಲದ ನಾಡಿಮಿಡಿತ ನನಗೆ ಹಾಗೂ ಕುಮಾರಸ್ವಾಮಿ ಅವರಿಗೆ ಅರ್ಥವಾಗಿದೆ. ನಾವು ಈ ಬಾರಿ ಶಾಂತಿಯುತವಾಗಿ, ಸಾತ್ವಿಕವಾಗಿ ಮಂಡ್ಯ ಚುನಾವಣೆ ನಡೆಸೋಣ. ನಾನು ಇಡೀ ಜಿಲ್ಲೆಯಲ್ಲಿ ಸಂಚಾರ ಮಾಡುತ್ತೇನೆ. ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸಲು ನಾನು ಕಾಯ ವಾಚಾ ಮನಸಾ ಕೆಲಸ ಮಾಡುತ್ತೇನೆ. ಕಳೆದ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಉತ್ತರವಾಗಿ ಈ ಚುನಾವಣೆ ನಡೆಸೋಣ ಎಂದು ಅವರು ಒತ್ತಿ ಹೇಳಿದರು.

ಕಾಂಗ್ರೆಸ್ ದ್ವಿಮುಖ ನಾಲಿಗೆ ರಾಜಕಾರಣ

ಕಾಂಗ್ರೆಸ್ ಪಕ್ಷ ಎರಡು ನಾಲಿಗೆಯ ರಾಜಕಾರಣ ಮಾಡುತ್ತಿದೆ. ಮಂಡ್ಯದ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಹೇಳಿಕೆಗಳನ್ನು ಗಮನಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಮತಗಳೇ ಕಾರಣ ಎಂದು ಸಿಎಂ ಹೇಳುತ್ತಾರೆ. ಅದೇ ವೇದಿಕೆಯಲ್ಲಿ ಇದ್ದ ಡಿಸಿಎಂ ಅವರು, ನಾನು ಕುಮಾರಸ್ವಾಮಿ ಅವರ ಕೈ ಎತ್ತಿ ಅವರ ಕೈ ಬಲಪಡಿಸಿದೆ ಎಂದು ನುಡಿಯುತ್ತಾರೆ. ಯಾಕೆ ಇಂಥ ದ್ವಿಮುಖ ರಾಜಕಾರಣ. ಆಗಿದ್ದು ಆಗಿ ಹೋಯಿತು. ಮತ್ತೆ ಅದನ್ನು ಕೆದಕಿ ಜನರನ್ನು ದಿಕ್ಕು ತಪಿಸುವುದು ಯಾಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ತಂದೆ ಅವರಿಗೆ ಮೊದಲಿನಷ್ಟು ಒತ್ತಡ ಕೊಡಲು ಆಗಲ್ಲ. ನಾನು ಇಡೀ ರಾಜ್ಯ ಸುತ್ತಬೇಕು. ಬೇರೆ ಕ್ಷೇತ್ರಗಳಿಗೆ ಹೋಗಬೇಕು. ಎಲ್ಲರ ಮುಖಂಡರ ಅಭಿಪ್ರಾಯ ಪಡೆದಿದ್ದೇವೆ. ಕುಮಾರಣ್ಣ ರಾಜ್ಯದಲ್ಲಿಯೇ ಇರಬೇಕಾ? ಕೇಂದ್ರಕ್ಕೆ ಹೋಗಬೇಕಾ ಎಂಬ ಪ್ರಶ್ನೆ ಇದೆ. ಅವರು ಅಥವಾ ನಾನು ಬರಲೇಬೇಕು ಎಂದು ನೀವು ಹೇಳುತ್ತಿದ್ದೀರಿ. ನಾನು ಎಂಪಿ, ಶಾಸಕ ಯಾವಾಗ ಆಗಬೇಕೋ ಆಗ ಆಗುತ್ತೇನೆ. ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಗೊತ್ತಿಲ್ಲ. ಒಬ್ಬ ಯುವಕನಾಗಿ ನಾನು ಪಕ್ಷದ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಅವರು ಹೇಳಿದರು.

ಇದನ್ನೂ ಓದಿ | Lok Sabha Election 2024: ಈಶ್ವರಪ್ಪಗೆ ಮೋಸ ಮಾಡಿಲ್ಲ, ವರಿಷ್ಠರ ಆದೇಶ ಪಾಲಿಸಿದ್ದೇನೆ: ಬಸವರಾಜ ಬೊಮ್ಮಾಯಿ

2019ರ ಲೋಕಸಭೆ ಚುನಾವಣೆ ಕಾಲದಲ್ಲಿ ನನಗೆ ರಾಜಕೀಯ ಅನುಭವ ಇರಲಿಲ್ಲ. ಸಣ್ಣ ಹುಡುಗ ನಾನು. ಐದು ಮುಕ್ಕಾಲು ಲಕ್ಷ ಜನ ನನಗೆ ಮತ ಆಶೀರ್ವಾದ ಮಾಡಿದ್ದರು. ಮಂಡ್ಯದಿಂದ ನಿಲ್ಲುವಂತೆ ನನ್ನ ಮೇಲೆ ಒತ್ತಡ ಇದೆ. ನನ್ನ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದಿರಿ ಎಂದು ಅವರು ಭಾವುಕರಾದರು.

Exit mobile version