Site icon Vistara News

Nirmala Sitharaman: ಮೋದಿ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

Nirmala Sitharaman

ಬೆಂಗಳೂರು: “ನಮ್ಮ ತೆರಿಗೆ ನಮ್ಮ ಹಕ್ಕು” ಎಂಬ ಘೋಷಣೆ ಚೆನ್ನಾಗಿದೆ.‌ ಚುನಾವಣೆಗೆ ಮುನ್ನಾ ಗ್ಯಾರಂಟಿ ಘೋಷಿಸುವಾಗ ಈ ಮಾತು ನೆನಪಿರಲಿಲ್ಲವೇ? ಕೊಟ್ಟಿರುವ ಭರವಸೆ ಈಡೇರಿಸಲು ಎಲ್ಲಿಂದ ಹಣ ತರುತ್ತಾರೆ? ಇವರ ಘೋಷಣೆ ಸರಿಯಿದೆ, ಆದರೆ ಅದನ್ನು ಹೇಳುತ್ತಿರುವವರ ಉದ್ದೇಶ ಸರಿಯಿಲ್ಲ. ಮೋದಿ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಇಲ್ಲಿನ ಜನರು ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳ ಆರೋಪಗಳಿಗೆ ಕಿವಿಗೊಡುವುದಿಲ್ಲ ಎಂಬ ವಿಶ್ವಾಸವಿದೆ. ಹಣಕಾಸು ಅವ್ಯವಹಾರ ಪ್ರಕರಣಗಳಲ್ಲಿ ಬೇಲ್‌ ಪಡೆದು ಹೊಗಿರುವ ಕಾಂಗ್ರೆಸ್‌ ನಾಯಕರು ತನಿಖಾ ಸಂಸ್ಥೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ, ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡದಿರುವುದೇ ಕಾರಣ. ಅಂತರ ಸಚಿವಾಲಯ ಅಧಿಕಾರಿಗಳ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಕೃಷಿ ಮತ್ತು ಗೃಹ ಸಚಿವಾಲಯಗಳು ಪರಿಶೀಲನೆ ನಡೆಸಿದ್ದವು. ಆದರೆ, ಅಷ್ಟರಲ್ಲೇ ಚುನಾವಣೆ ಘೋಷಣೆಯಾಯಿತು. ಆಯೋಗದ ಅನುಮತಿ ದೊರಕದೇ ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Smriti Irani: ಕೇರಳದಲ್ಲಿ ಬೆಗ್ಗಿಂಗ್‌, ಕರ್ನಾಟಕದಲ್ಲಿ ಥಗ್ಗಿಂಗ್;‌ ಕಾಂಗ್ರೆಸ್‌ಗೆ ಸ್ಮೃತಿ ಇರಾನಿ ಟಾಂಗ್!‌

ಕರ್ನಾಟಕ ಮಾತ್ರವಲ್ಲ, ತೆಲಂಗಾಣ, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿಯಡಿ ನೆರವು ನೀಡುವ ಪ್ರಸ್ತಾವಗಳು ಉನ್ನತಾಧಿಕಾರ ಸಮಿತಿ ಮುಂದಿವೆ. ಚುನಾವಣಾ ಆಯೋಗದ ಅನುಮತಿ ದೊರಕಿದ ಬಳಿಕವೇ ತೀರ್ಮಾನ ಕೈಗೊಳ್ಳಬೇಕಿದೆ. ಕೇಂದ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಕಾಯ್ದೆಯಲ್ಲಿ ಪರಿಹಾರ ವಿತರಣೆ ಅವಕಾಶ ಇಲ್ಲ. ಪರಿಹಾರ, ನೆರವು, ಮಧ್ಯಂತರ ಪರಿಹಾರ ಎಂಬ ಉಲ್ಲೇಖಗಳೇ ಇಲ್ಲ. ಕೇಂದ್ರ ಸರ್ಕಾರ ಇನ್ಸುಟ್ ಸಹಾಯಧನ ಮತ್ತು ಪರಿಸ್ಥಿತಿ ಸುಧಾರಣೆಗೆ ಸಹಾಯಧನವನ್ನು ಮಾತ್ರ ನೀಡುತ್ತದೆ ಎಂದು ತಿಳಿಸಿದರು.

ತುರ್ತು ಪರಿಹಾರ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇದಕ್ಕಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಕೇಂದ್ರವು ವಂತಿಗೆ ನೀಡುತ್ತದೆ. ಕರ್ನಾಟಕಕ್ಕೆ ಎರಡೂ ಕಂತುಗಳ 629 ಕೋಟಿಯನ್ನು ಮುಂಗಡವಾಗಿಯೇ ಬಿಡುಗಡೆ ಮಾಡಲಾಗಿತ್ತು ಎಂದರು.

ಕಾಂಗ್ರೆಸ್ ಸರ್ಕಾರದ ಆರೋಪದಲ್ಲಿ ಹುರುಳಿಲ್ಲ

ಬರ ಪರಿಹಾರ ಕೊಡುವಲ್ಲಿ ಕೇಂದ್ರ ವಿಳಂಬ ಧೋರಣೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಎಲ್ಲ ಅಧಿಕಾರ ಇದೆ. ಆದರೆ ಮೋದಿ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ತೆರಿಗೆ ಪಾಲು, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪದಲ್ಲಿ ಹುರುಳಿಲ್ಲ. ಸುಳ್ಳು ಆರೋಪ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷದವರು ನಿಸ್ಸೀಮರು ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಿಗೆ ವಿಶೇಷ ನೆರವು ನೀಡಬೇಕೆಂಬ ಶಿಫಾರಸು 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಮಾತ್ರ ಇತ್ತು. ಅಂತಿಮ ವರದಿಯಲ್ಲಿ ಅಂತಹ ಶಿಫಾರಸು ಇರಲಿಲ್ಲ. ಬೇರೆ ಯಾವ ರಾಜ್ಯಗಳೂ ಅಂತಹ ಬೇಡಿಕೆ ಇಡುತ್ತಿಲ್ಲ. ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ನೆರವು ನೀಡಬೇಕೆಂಬ ಶಿಫಾರಸು ಕೂಡ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲ ನೀಡಿದೆ. ಈ ಬಗ್ಗೆ ಕಾಂಗ್ರೆಸ್ ನವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ, ಕಾಲರಾ ರೋಗ ಹರಡುತ್ತಿದೆ ಎಂಬ ಆತಂಕವಿದೆ. ಜನರಿಗೆ ಅಗತ್ಯ ಇರುವಷ್ಟು ನೀರು ಬೆಂಗಳೂರಿನಲ್ಲಿ ಸಿಗುತ್ತಿಲ್ಲ. ಕಳೆದ ಮೇ ತಿಂಗಳಲ್ಲಿ ಟೆಂಡರ್ ಕರೆದಿದ್ದಾರೆ, ಹಲವು ನೀರಾವರಿ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ಅರೋಪಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ರಾಜಧಾನಿಯಲ್ಲಿ ಉಗ್ರರ ದಾಳಿ ಆಗಿದೆ. ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿವೆ. ನಾವು ಏನು ಮಾಡಿದರೂ ನಡೆಯುತ್ತೆ ಅನ್ನೋ ಭಾವನೆ ಸೃಷ್ಟಿ ಆಗಿದೆ. ಅದರ ಪ್ರತಿಫಲವೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹಿಂದು ಟೆರರ್ ಅಂತ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಸಚಿವರು, ಆರೋಪಿ ಯಾರೆಂದು ಗೊತ್ತಿಲ್ಲದೇ ಟ್ವೀಟ್ ಮಾಡುತ್ತಾರೆ. ಸಾಕ್ಷಿಯನ್ನ ಕರೆದುಕೊಂಡು ಹೋದರೆ ಅವರೇ ಆರೋಪಿ ಎಂದು ಟ್ವೀಟ್ ಮಾಡುತ್ತಾರೆ ಎಂದು ಕಿಡಿ ಕಾರಿದರು.

ದಾವಣಗೆರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ಖಂಡನೀಯ. ಅಂತಹ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Karnataka Drought: ಬರ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪುಗಳ ಪಟ್ಟಿಯನ್ನೇ ಇಟ್ಟ ಆರ್.‌ ಅಶೋಕ್!

ರಾಜ್ಯದಲ್ಲಿ ಜಲಜೀವನ್ ಮಿಷನ್ ನಿಲ್ಲಿಸಿದ್ದಾರೆ, ನೀರಾವರಿ ಯೋಜನೆಗಳನ್ನು ಕಳೆದ ವರ್ಷವೇ ನಿಲ್ಲಿಸಿದ್ದಾರೆ.
ಗ್ಯಾರಂಟಿಗಳು ಅಭಿವೃದ್ಧಿಗೆ ಮಾರಕವಾಗಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಈಗ ದೇಶಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಗ್ಯಾರಂಟಿಗಳನ್ನ ಈಡೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Exit mobile version