ಪಣಜಿ: ʼʼಬಿಜೆಪಿ (BJP) ತಪ್ಪು ಮಾಡುವುದನ್ನು ನಿಲ್ಲಿಸಿ ಇತಿಹಾಸದಿಂದ ಕಲಿಯಬೇಕು. ಇಲ್ಲದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ತಪ್ಪು ಮಾಡಿದ ಕಾರಣಕ್ಕೆ ಕಾಂಗ್ರೆಸ್ (Congress) ಅಧಿಕಾರದಿಂದ ಕೆಳಗಿಳಿಯಬೇಕಾಯಿತುʼʼ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಎಚ್ಚರಿಕೆ ನೀಡಿದರು. ಗೋವಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ ಈ ವಿಚಾರ ಪ್ರಸ್ತಾವಿಸಿದರು.
ಗಡ್ಕರಿ ತಮ್ಮ ಭಾಷಣದಲ್ಲಿ, ಬಿಜೆಪಿಯ ವಿಶಿಷ್ಟ ಸ್ವರೂಪವನ್ನು ಎತ್ತಿ ಹಿಡಿದರು ಮತ್ತು ಕಾಂಗ್ರೆಸ್‌ನ ಅವನತಿಗೆ ಕಾರಣವಾದ ಅಂಶಗಳನ್ನು ಇತಿಹಾಸದಿಂದ ಕಲಿಯುವ ಮಹತ್ವವನ್ನು ಒತ್ತಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಾಳಯ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ವಿಫಲವಾದ ಸುಮಾರು ಎರಡು ತಿಂಗಳ ನಂತರ ಸಚಿವರು ಈ ರೀತಿಯ ಎಚ್ಚರಿಕೆ ನೀಡಿದರು.
📍तालेगाओ, गोवा
— Nitin Gadkari (@nitin_gadkari) July 12, 2024
गोवा के तालेगाओ में भाजपा गोवा की राज्य कार्यकारिणी बैठक को आज संबोधित किया। गोवा के मुख्यमंत्री श्री @DrPramodPSawant जी, केंद्रीय राज्यमंत्री श्री @shripadynaik जी, गोवा भाजपा के प्रदेश अध्यक्ष सांसद श्री @ShetSadanand जी तथा पार्टी के प्रदेश पदाधिकारी उपस्थित… pic.twitter.com/oCFb9UNuu2
ನಿತಿನ್ ಗಡ್ಕರಿ ಹೇಳಿದ್ದೇನು?
ʼʼಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ. ಅದಕ್ಕಾಗಿಯೇ ಬಿಜೆಪಿ ಪದೇ ಪದೆ ಮತದಾರರ ವಿಶ್ವಾಸವನ್ನು ಗೆದ್ದಿದೆ. ಆದಾಗ್ಯೂ ಅಧಿಕಾರದಿಂದ ನಿರ್ಗಮಿಸಿದ ಕಾಂಗ್ರೆಸ್ ಈ ಹಿಂದೆ ಮಾಡಿದ ತಪ್ಪುಗಳನ್ನು ಬಿಜೆಪಿಯೂ ಮಾಡಿದರೆ ಅಪಾಯ ತಪ್ಪಿದ್ದಲ್ಲʼʼ ಎಂದು ಅವರು ಎಚ್ಚರಿಕೆ ನೀಡಿದರು.
“ಕಾಂಗ್ರೆಸ್ ಏನು ಮಾಡಿತ್ತೋ ಆ ತಪ್ಪುಗಳನ್ನು ನಾವೂ ಮಾಡಿದರೆ ಅವರ ನಿರ್ಗಮನ ಮತ್ತು ನಮ್ಮ ಪ್ರವೇಶದಿಂದ ಯಾವುದೇ ಪ್ರಯೋಜನವಿಲ್ಲʼʼ ಎಂದರು. ಈ ವೇಳೆ ಅವರು ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ (L.K. Advani) ಅವರ ಕೊಡುಗೆಯನ್ನು ನೆನೆದರು. “ನಮ್ಮದು ವಿಭಿನ್ನ ಪಕ್ಷ ಎಂದು ಅಡ್ವಾಣಿ ಹೇಳುತ್ತಿದ್ದರು. ನಾವು ಇತರ ಪಕ್ಷಗಳಿಗಿಂತ ಎಷ್ಟು ಭಿನ್ನವಾಗಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯವು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ತರುವ ಮಾರ್ಗ ಎನ್ನುವುದನ್ನು ಪಕ್ಷದ ಕಾರ್ಯಕರ್ತರು ಅರಿತುಕೊಳ್ಳಬೇಕು” ಎಂದು ಗಡ್ಕರಿ ಹೇಳಿದರು.
“ನಾವು (ಬಿಜೆಪಿ) ಭ್ರಷ್ಟಾಚಾರ ಮುಕ್ತ ದೇಶವನ್ನು ರಚಿಸಬೇಕಾಗಿದೆ ಮತ್ತು ಅದಕ್ಕಾಗಿ ನಾವು ಯೋಜನೆಯನ್ನು ತಯಾರಿಸಬೇಕು” ಎಂದು ಗಡ್ಕರಿ ಒತ್ತಿ ಹೇಳಿದರು. “ನಾನು ಜಾತಿ ಆಧಾರಿತ ರಾಜಕೀಯದಲ್ಲಿ ತೊಡಗುವುದಿಲ್ಲ ಎಂದು ಜನರಿಗೆ ಹೇಳಿದ್ದೇನೆ. ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೊ ಪಡೇಗಿ ಕಾಸ್ಕೆ ಲಾತ್ (ಜಾತಿಯ ಬಗ್ಗೆ ಮಾತನಾಡುವವರಿಗೆ ಬಲವಾದ ಹೊಡೆತ ಸಿಗುತ್ತದೆ)ʼʼ ಎಂದು ಗಡ್ಕರಿ ಎಚ್ಚರಿಸಿದರು. ʼʼಒಬ್ಬ ವ್ಯಕ್ತಿಯನ್ನು ಅವನು ಹೊಂದಿರುವ ಮೌಲ್ಯಗಳಿಂದ ಗುರುತಿಸಲಾಗುತ್ತಿದೆಯೇ ಹೊರತು ಅವನ ಜಾತಿಯಿಂದಲ್ಲʼʼ ಎಂದು ಗಡ್ಕರಿ ಹೇಳಿದರು.
2027ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಉಪಸ್ಥಿತಿಯನ್ನು ಬಲಪಡಿಸುವಂತೆ ಗಡ್ಕರಿ ಗೋವಾ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕಾಗಿ ಮತದಾರರ ನಂಬಿಕೆ ಮತ್ತು ಬೆಂಬಲವನ್ನು ಉಳಿಸಿಕೊಳ್ಳಲು ಬಿಜೆಪಿ ಹೊಸತನ ಮತ್ತು ಸುಧಾರಣೆಯನ್ನು ಮುಂದುವರಿಸಬೇಕು ಎಂದು ತಿಳಿಸಿದರು. ಗೋವಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸದಾನಂದ ತನವಾಡೆ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದರು.