ಬೆಂಗಳೂರು: ಅಂತರ್ ಜಿಲ್ಲೆ ವರ್ಗಾವಣೆ (inter district transfer) ಬಯಸಿದ್ದ ಗ್ರೂಪ್ ಸಿ, ಡಿ ಹುದ್ದೆ ನೌಕರರಿಗೆ (Group C and D posts employees) ಮತ್ತೆ ನಿರಾಸೆಯಾಗಿದೆ. ಈ ಬಾರಿಯಾದರೂ ತಮ್ಮ ವರ್ಗಾವಣೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ನೌಕರರಿಗೆ ಆಶಾ ಭಾವನೆ ಮೂಡಿತ್ತು. ಗುರುವಾರದ (ನ. 16) ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಅದರ ಬಗ್ಗೆ ಚರ್ಚೆ ಮಾಡಲಾಯಿತಾದರೂ ಯಾವುದೇ ನಿರ್ಣಯವನ್ನು ಕೈಗೊಂಡಿಲ್ಲ.
ಈ ಬಗ್ಗೆ ಸಚಿವ ಸಂಪುಟ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (HK Patil), 16 ವಿಷಯಗಳನ್ನು ಸಚಿವ ಸಂಪುಟ ಪರಿಶೀಲನೆ ಮಾಡಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 16a ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ಆಗಿದೆ. ಇದೇ ವೇಳೆ ಗ್ರೂಪ್ ಸಿ, ಡಿ ಹುದ್ದೆಯವರು ವರ್ಗಾವಣೆ ಬಯಸುತ್ತಿದ್ದಾರೆ. ಅಂತರ್ ಜಿಲ್ಲಾ ವರ್ಗಾವಣೆ ಮಾಡಿದರೆ ಸಿನಿಯಾರಿಟಿಯಲ್ಲಿ ಕೊನೆಗೆ ಹೋಗುತ್ತಾರೆ. ಅವರ ಸಿನಿಯಾರಿಟಿಯನ್ನು ಪರಿಗಣಿಸಬೇಕು ಎಂದಿತ್ತು. ಆದರೆ, ಇದರ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ಪ್ರಕರಣ; ವಿಶೇಷ ತನಿಖಾ ತಂಡದ ಅವಧಿ ವಿಸ್ತರಣೆ
ಅಕ್ರಮ ಗಣಿಗಾರಿಕೆ ತನಿಖೆ ಹಾಗೂ ಪ್ರಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ವಿಶೇಷ ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಐದು ವರ್ಷಗಳಲ್ಲಿ ದಾಖಲಾಗಿರುವ 127 ಪ್ರಕರಣಗಳಲ್ಲಿ ಇದುವರೆಗೆ ಪ್ರಾಥಮಿಕ ತನಿಖೆ ಸಹ ಆಗಿಲ್ಲ. ಅದಿರು ಮೌಲ್ಯ ಮಾಪನ ವರದಿ ಕೂಡ ಇದುವರೆಗೆ ಸರಿಯಾಗಿ ಸಲ್ಲಿಕೆ ಆಗಿಲ್ಲ. ಈ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಅವಧಿ ಇನ್ನೂ 8 ತಿಂಗಳಿಗೆ ವಿಸ್ತರಣೆ ಮಾಡಲಾಗಿದ್ದು, ತ್ವರಿತಗತಿಯಲ್ಲಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಾಣಿಜ್ಯ – ಸಂಸ್ಕೃತಿ ಹೆಸರಲ್ಲಿ ಪ್ರಾಧಿಕಾರ
ವಾಣಿಜ್ಯ ಸಂಸ್ಕೃತಿ ಪ್ರದರ್ಶನ ಕೇಂದ್ರ ಸ್ಥಾಪನೆಗೆ ಹಾಗೂ ಪ್ರಾಧಿಕಾರ ರಚನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರಾಧಿಕಾರದ ಬಿಲ್ ಅನ್ನು ಬರುವ ಅಧಿವೇಶನದಲ್ಲಿ ಮಂಡನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. 8 ಸಾವಿರ ಕೋಟಿ ರೂ. ಮೌಲ್ಯದ ಜಮೀನು ಇದಾಗಿದ್ದು, ವಾಣಿಜ್ಯ, ಸಂಸ್ಕೃತಿ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಮರುಜೀವ; ರಾಜ್ಯದಲ್ಲಿ 188 ಕಡೆ ನಿರ್ಮಾಣಕ್ಕೆ ಸಚಿವ ಸಂಪುಟದ ಒಪ್ಪಿಗೆ
ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಮಾಡಲು ಕೆಟಿಪಿಪಿ ಕಾಯಿದೆಯ ಕಾಲಂ 4G ವಿನಾಯಿತಿ ನೀಡಲಾಗಿದೆ. ಬಿಬಿಎಂಪಿ ಹೊರತುಪಡಿಸಿ ನಗರದ ಇತರ ಕಡೆ ಕ್ಯಾಂಟಿನ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಮೊದಲ ಹಂತದಲ್ಲಿ ನಿರ್ಮಿಸಲಾದ ವಿಧಾನದ ಮಾದರಿಯಲ್ಲಿ ಅನುಮೋದಿತ ವಿನ್ಯಾಸದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಒಟ್ಟು 154 ಕೋಟಿ ರೂಪಾಯಿ 188 ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: Indira Canteen : ಇಂದಿರಾ ಕ್ಯಾಂಟೀನ್‌ಗೆ ಮರುಜೀವ; 188 ಕಡೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
ಇತರ ಪ್ರಮುಖ ನಿರ್ಣಯಗಳು
- ಆಹಾರ ಇಲಾಖೆಯ ಗೋದಾಮುಗಳಿಗೆ ಸಿಸಿ ಟಿವಿ ಅಳವಡಿಕೆ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ 12 ಕೋಟಿ 24 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಗೋದಾಮುಗಳಿಂದ ಹೊರ ಹೋಗುವ ಬಗ್ಗೆ ರೆಕಾರ್ಡ್ ಆಗಬೇಕು ಎಂದು ಸಹ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.
- ಬೆಟಗೇರಿ ನಗರದ ನೀರಿನ ಪೂರೈಕೆಗೆ ಹಸಿರು ಅಭಿವೃದ್ಧಿ ಹಾಗೂ ಜಲಮೂಲ ಉತ್ತೇಜನಕ್ಕೆ 34 ಕೋಟಿ ರೂಪಾಯಿ ಅನುದಾನ ನೀಡಲು ಕ್ಯಾಬಿನೆಟ್ ಸಮ್ಮತಿ ನೀಡಿದೆ. ಅಲ್ಲದೆ, ಗದಗ ಬೆಟಗೇರಿ ನಗರದ ಹೃದಯ ಭಾಗದಲ್ಲಿ 37.34 ಎಕರೆ ಆಸ್ತಿ ಅಭಿವೃದ್ಧಿ ಮಾಡಬೇಕಿದೆ.
- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಹಳ್ಳಿಗಳಿಗೆ 371 ಕೋಟಿ ರೂಪಾಯಿ ನೀಡಲಾಗಿತ್ತು. ಅದರಲ್ಲಿ ಉಳಿದಿದ್ದ 41 ಕೋಟಿ ರೂಪಾಯಿಯನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಕ್ಯಾಬಿನೆಟ್ ನಿರ್ಣಯ ಕೈಗೊಂಡಿದೆ.
- 17 ನಗರಗಳಿಗೆ ಸುಮಾರು 750 ಕೋಟಿ ರೂಪಾಯಿ ಯೋಜನಾ ವೆಚ್ಚದೊಳಗೆ ಒಳಚರಂಡಿ, ರಸ್ತೆ ಉನ್ನತೀಕರಣಕ್ಕೆ ಅನುಮೋದನೆ ಸಿಕ್ಕಿದೆ.
- ಜೋಳ, ರಾಗಿ ಸಂಗ್ರಹಕ್ಕಾಗಿ 80 ಲಕ್ಷ ಗೋಣಿ ಚೀಲ ಖರೀದಿಗೆ 76 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡಲು ನಿರ್ಣಯವನ್ನು ಕೈಗೊಳ್ಳಲಾಗಿದೆ.
- ವಿಶ್ವೇಶ್ವರಯ್ಯ ಲೆಔಟ್ನಲ್ಲಿರುವ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೈಟ್ ಮಾರಲು ಅನುಮತಿ ನೀಡಲಾಗಿದೆ. ಇದು ಜಿ ಕೆಟಗೆರಿಯಲ್ಲಿ ಲಭ್ಯವಾಗಿದ್ದ ಸೈಟ್ ಆಗಿದೆ.