Site icon Vistara News

Manual Scavengers: ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಇರಕೂಡದು, ಇವರಿಂದ ಮಾಡಿಸಿದ್ರೆ ಕಠಿಣ ಕ್ರಮ: ಸಿದ್ದರಾಮಯ್ಯ

CM Siddaramaiah in manual scavengers programme

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ (manual scavengers) ಇರಕೂಡದು. ಯಾರಾದರೂ ಮ್ಯಾನ್ಯುವಲ್ ಕೆಲಸ ಮಾಡಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದರು.‌

ರಾಜ್ಯದಲ್ಲಿ ಗುರುತಿಸಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಿಗೆ ಸಹಾಯಧನ ವಿತರಣೆ ಮತ್ತು ಪುನರ್ವಸತಿ ಸಮಾವೇಶವನ್ನು ಉದ್ಘಾಟಿಸಿ, ತಲಾ 40 ಸಾವಿರ ರೂಪಾಯಿ ಸಹಾಯಧನ ವಿತರಿಸಿ ಮಾತನಾಡಿದರು.

ಪೌರ ಕಾರ್ಮಿಕರು ಘನತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಪಕ್ಷದ ಮತ್ತು ನಮ್ಮ ಬದ್ಧತೆ. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೇ ಸಫಾಯಿ ಕರ್ಮಚಾರಿಗಳ ಸಂಬಳವನ್ನು 7 ಸಾವಿರದಿಂದ 17 ಕ್ಕೆ ಏರಿಸಿದ್ದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಿಗೆ ಅವಕಾಶವೇ ಇಲ್ಲ. ಯಾರಾದರೂ ಮ್ಯಾನ್ಯುವಲ್ ಕೆಲಸ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸಫಾಯಿ ಕರ್ಮಚಾರಿಗಳು ಮನೆ ನಮ್ಮಿಂದಲೇ

ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು 7.5 ಲಕ್ಷ ರೂ. ನೆರವು ನೀಡುವ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು ನಮ್ಮ ಸರ್ಕಾರವೇ. ನಾನು ಮುಖ್ಯಮಂತ್ರಿಯಾಗಿ‌ ಈ ಕಾರ್ಯಕ್ರಮಗಳನ್ನು ಜಾರಿ‌ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಂವಿಧಾನದ ವಿರೋಧಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ

ಅಂಬೇಡ್ಕರ್ ಸಂವಿಧಾನ ನೀಡದೇ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಆದ್ದರಿಂದ ಸಂವಿಧಾನ ವಿರೋಧಿಗಳು ನಮ್ಮ ವಿರೋಧಿಗಳು ಎನ್ನುವುದನ್ನು ನಾವು-ನೀವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ವಿರೋಧಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮಾಯ್ಕೊಂಡ ಶಾಸಕರಾದ ಬಸಂತಪ್ಪ, ನೆಲಮಂಗಲ ಶಾಸಕರಾದ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾವೇಶದಲ್ಲಿ 4000ಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳಿಗೆ ನಗದು ಸಹಾಯಧನ ವಿತರಿಸಲಾಯಿತು.

Congress Guarantee Scheme: ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು (Congress Guarantee Scheme) ಬಡವರ ಕಾರ್ಯಕ್ರಮಗಳಾಗಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಗಡಿ ಶಾಸಕರಾದ ಬಾಲಕೃಷ್ಣ ಅವರ ಹೇಳಿಕೆಯನ್ನು ನಿರಾಕರಿಸಿದರು. ಕಾಂಗ್ರೆಸ್ ಲೋಕಸಭೆಯಲ್ಲಿ ಗೆಲುವು ಸಾಧಿಸದಿದ್ದರೆ, ಗ್ಯಾರಂಟಿಗಳನ್ನು ರದ್ದುಗೊಳಿಸಲಾಗುವುದು ಎಂಬ ಬಾಲಕೃಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮಗಳಾಗಿದ್ದು, ಅವುಗಳನ್ನು ಖಂಡಿತ ಮುಂದುವರಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಬಜೆಟ್ ಮಂಡನೆ ನಂತರ ಪ್ರತಿಕ್ರಿಯೆ

ಕೇಂದ್ರ ಸರ್ಕಾರ ಫೆಬ್ರವರಿ 1 ರಂದು 2024–25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಲಿದ್ದು, ಈ ಬಗ್ಗೆ ಪ್ರತಿಕ್ರಿಯೆಯನ್ನು ನಾಳೆ ನೀಡುತ್ತೇನೆ. ರಾಜ್ಯದ ಪ್ರತಿ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದ್ದು, ಅವರ ಕಾರ್ಯಚಟುವಟಿಕೆಯನ್ನು ಪರಿಶೀಲನೆ ನಡೆಸಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಈ ಅಧಿಕಾರಗಳ ಸಲಹೆ ಸೂಚನೆ, ಕಾರ್ಯವೈಖರಿಗಳ ಬಗ್ಗೆ ವಿವರ ಪಡೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Congress Guarantee: ಕಾಂಗ್ರೆಸ್‌ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲ; ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ

ಕನ್ನಡ ಬಳಕೆ ಕಡ್ಡಾಯ ಸುಗ್ರೀವಾಜ್ಞೆ

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್‌ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ, ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ಅಧಿವೇಶನ ಪ್ರಾರಂಭವಾದ ಕಾರಣ ವಾಪಸ್‌ ಕಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು.

Exit mobile version