Site icon Vistara News

Karave Protest: ಇಂಗ್ಲಿಷ್‌ ನಾಮಫಲಕಕ್ಕೆ ಮಸಿ ಬಳಿಯಬೇಡಿ; ಹೀಗಾದ್ರೆ ಹೂಡಿಕೆಗೆ ಯಾರೂ ಬರಲ್ಲ: ಎಂ.ಬಿ. ಪಾಟೀಲ್

MB Patil

ಬೆಂಗಳೂರು: ಕರವೇ ನೇತೃತ್ವದಲ್ಲಿ ಆಯೋಜಿಸಲಾಗಿದ್ದ (Karave Protest) ಕನ್ನಡ ನಾಮಫಲಕ‌ ಜಾಗೃತಿ (Kannada Name plate Compulsory) ಆಂದೋಲನಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳು ಹೋಟೆಲ್‌, ಮಳಿಗೆಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಇಂಗ್ಲಿಷ್‌ ನಾಮಫಲಕಗಳನ್ನು ಒಡೆದು ಹಾಕುವುದು, ಮಸಿ ಬಳಿಯುವುದನ್ನು ಮಾಡಬಾರದು. ಯಾರೂ ಕೂಡ ಕಾನೂನು ಕ್ರಮ ಕೈಗೊಳ್ಳಬಾರದು. ಇದೆಲ್ಲ ನಾಳೆ ವೈರಲ್ ಆಗಿ ವಿದೇಶಗಳಿಗೆ ಹೋದರೆ ಇಲ್ಲಿ ಇಂಡಸ್ಟ್ರಿಗಳಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಬರುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್‌, ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ನಿಯಮ ಇದ್ದರೂ ಪಾಲಿಸದವರ ವಿರುದ್ಧ ಕರವೇ (Kannada Rakshana Vedike) ಸೇರಿದಂತೆ ಕನ್ನಡಪರ ಕಾರ್ಯಕರ್ತರು ಕಾನೂನು ಕೈಗೆತ್ತಿಗೊಂಡಿದ್ದಾರೆ. ಯಾರೂ ಕೂಡ ಕಾನೂನು ಕ್ರಮ ಕೈಗೊಳ್ಳಬಾರದು. ಇದರಿಂದ ನಮ್ಮ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನಾಳೆ ಬಂಡವಾಳ ಹೂಡುವವರು ಬಾರದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಕನ್ನಡ ನಾಡಲ್ಲಿ ಇದ್ದೇವೆ, ಹೀಗಾಗಿ ಬೋರ್ಡ್ ಹಾಕಬೇಕು ಅಂತ ಅಭಿಮಾನದಿಂದ ಹಾಕಬೇಕು. ಇಂಡಸ್ಟ್ರಿ ವಿಚಾರದಲ್ಲಿ ಬಹಳ ಪೈಪೋಟಿ ಇದೆ. ಇಂಥ ಸಂದರ್ಭದಲ್ಲಿ ಯಾರಿಗೂ ಯಾವ ರಾಜ್ಯ, ಯಾವ ದೇಶವೂ ಅನಿವಾರ್ಯ ಇಲ್ಲ. ಇದನ್ನು ಕನ್ನಡಪರ ಸಂಘಟನೆಯವರು ಅರ್ಥ ಮಾಡಿಕೊಳ್ಳಬೇಕು. ನಮ್ಮ ವ್ಯಾಪ್ತಿಯ ಇಂಡಸ್ಟ್ರಿಗೂ ನಾವು ಸಲಹೆ ಕೊಡುತ್ತೇವೆ. ಕನ್ನಡ ನಾಮಫಲಕ ಹಾಕುವಂತೆ ಹೇಳುತ್ತೇವೆ. ಆದರೆ, ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಕರವೇ ನಾರಾಯಣ ಗೌಡರ ಬಂಧನಕ್ಕೆ ಭುಗಿಲೆದ್ದ ಆಕ್ರೋಶ

ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಸಿಡಿದೆದ್ದಿದ್ದ ಕರ್ನಾಟಕ ರಕ್ಷಣಾ ವೇದಿಕೆಗೆ ಪೊಲೀಸ್‌ ಇಲಾಖೆ ಶಾಕ್ ನೀಡಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರನ್ನು (TA Narayana Gowda) ಗುರುವಾರ ಬಂಧಿಸಿದ್ದರಿಂದ ಕರವೇ ಕಾರ್ಯಕರ್ತರು ಮತ್ತೊಂದು ಹಂತದ ಹೋರಾಟಕ್ಕೆ (Karave Protest) ಸಜ್ಜಾಗಿದ್ದಾರೆ. ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಮೂಲಕ ನಾರಾಯಣ ಗೌಡರ ಬಿಡುಗಡೆಗೆ ಒತ್ತಾಯಿಸಲಾಗುತ್ತಿದೆ. ಈ ನಡುವೆ, ಕರವೇಯ ಪ್ರವೀಣ್‌ ಶೆಟ್ಟಿ ಬಣ ಕೂಡಾ ಈ ಹೋರಾಟಕ್ಕೆ ಬೆಂಬಲ ನೀಡಿದೆ.

ಬುಧವಾರ ರಾಜಧಾನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನೋ ಮಾತನ್ನ ಗಟ್ಟಿಯಾಗಿ ಉಳಿಯುವಂತೆ ಮಾಡಿತ್ತು. ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಎಂಬ ಆದೇಶ ಇದ್ದರೂ ಅನ್ಯಭಾಷೆಯ ನಾಮಫಲಕಗಳನ್ನು ಹಾಕಿದ್ದ ವಾಣಿಜ್ಯ ಮಳಿಗೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನ ಕರವೇ ಕಾರ್ಯಕರ್ತರು ಪುಡಿ ಪುಡಿ ಮಾಡಿದ್ದರು.

ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಹೋರಾಟದ ಕಿಚ್ಚು ಜೋರಾಗಿತ್ತು, ಪ್ರತಿಭಟನೆಯ ರಾತ್ರೋರಾತ್ರಿಯೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಹಾಗೂ ಕರವೇಯ 29 ಮುಖಂಡರನ್ನು ಬಂಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: Karnataka Weather : ಮುಂಜಾನೆ ಮಂಜಿನ ಹೊದಿಕೆ; ಉತ್ತರ ಕರ್ನಾಟಕದಲ್ಲಿ ಕಡಿಮೆ ತಾಪಮಾನ

ನಾರಾಯಣಗೌಡ ಬಂಧನ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಸಿಎಂ ಮನೆ ಮುಂದೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಗುರುವಾರ ಸಿಎಂ ಮನೆ ಮುಂದೆ ಅಲರ್ಟ್ ಆದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಸಿಎಂ ಮನೆ, ಗೃಹ ಕಚೇರಿ ಮುಂದೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದರು. ಇನ್ನು ಬಂಧಿತರಾದ ಕರವೇ ಅಧ್ಯಕ್ಷ ನಾರಾಯಣಗೌಡ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ. ಸರಿಯಾಗಿ ಊಟ ಕೊಟ್ಟಿಲ್ಲ ಭಯೋತ್ಪಾದಕರಂತೆ ನಮ್ಮನ್ನು ನೋಡಿಕೊಂಡಿದ್ದಾರೆ, ಡಿಸಿಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಕಿಡಿಕಾರಿದ್ದರು. ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು ರಾಜ್ಯಾದ್ಯಂತ ಹಲವಾರು ಸರಣಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಲಾಗಿದ್ದು, ಜನರು ಆಕ್ರೋಶ ಹೊರಗೆ ಹಾಕಿದ್ದರು.

Exit mobile version