ಬೆಂಗಳೂರು: ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದವತಿಯಿಂದ ಟಿಪ್ಪು ಜಯಂತಿ (Tipu Jayanti) ಆಚರಿಸುವ ಸಂಬಂಧ ಯಾವುದೇ ಚರ್ಚೆಯಾಗಿಲ್ಲ (No Discussion in Cabinet Meeting) ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ (Minister H K Patil) ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿತ್ತು. 2019ರಲ್ಲಿ ಆಚರಣೆಯ ಆದೇಶವನ್ನು ವಾಪಸ್ ಪಡೆಯಲಾಗಿತ್ತು. ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೂ ಈ ಆದೇಶವನ್ನು ರದ್ದುಗೊಳಿಸಿಲ್ಲ. ಹಾಗಾಗಿ ಸರ್ಕಾರದಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲ ಎಂದು ಸಚಿವ ಎಚ್ ಕೆ ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.
2013ರಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದಾಗ ವ್ಯಾಪಕ ವಿರೋಧದ ಮಧ್ಯೆಯೇ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಲು ಶುರು ಮಾಡಲಾಯಿತು. ಆದರೆ, 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಆಚರಣೆ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು. 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಆ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಈಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿ ಕುರಿತು ಚರ್ಚೆ ನಡೆದಿಲ್ಲ.
ಈ ಮಧ್ಯೆ, ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತವು ಈ ಕ್ರಮವನ್ನು ಕೈಗೊಂಡಿದೆ ಎಂದು ತಾಲೂಕು ಆಡಳಿತವು ತಿಳಿಸಿದೆ.
ಕ್ಯಾಬಿನೆಟ್ ನಿರ್ಣಯಗಳು
- ಕನಕಪುರ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 10.38 ಕೋಟಿ ರೂ. ಅನುಮೋದನೆ
- ಇನ್ಫೋಸಿಸ್ ಕಂಪನಿ ವತಿಯಿಂದ ಸಿಎಸ್ಆರ್ ಫಂಡ್ ನಿಂದ ನಿರ್ಮಿಸಿರುವ ಕನಕಪುರದ ತಾಯಿ ಆಸ್ಪತ್ರೆ
- ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ – 2023 ನಿಯಮಗಳಿಗೆ ತಿದ್ದುಪಡಿಗೆ ಕ್ಯಾಬಿನೇಟ್ ಒಪ್ಪಿಗೆ
- ಪೋಷಣ್ ಅಭಿಯಾನಕ್ಕೆ ೨೬.೬೦ ಕೋಟಿ ರೂ. ವೆಚ್ಚದಲ್ಲಿ ಉಪಕರಣಗಳ ಖರೀದಿ.
- ಗ್ರೋತ್ ಮಾನಿಟರಿಂಗ್ ಡಿವೈಸಸ್ ಖರೀದಿಗೆ ಅನುಮೋದನೆ
ಈ ಸುದ್ದಿಯನ್ನೂ ಓದಿ: Kannada and Culture Dept: ರಾಜ್ಯ ಸರ್ಕಾರದಿಂದ 31 ಜಯಂತಿ ಆಚರಣೆ ವೇಳಾಪಟ್ಟಿ, ಟಿಪ್ಪು ಜಯಂತಿ ಇಲ್ಲ?