ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) “ಪೂರ್ಣಾವಧಿ ಸಿಎಂ” ಚರ್ಚೆ ಜೋರಾಗಿದೆ. “ನಾನೇ ಇನ್ನು ಐದು ವರ್ಷ ಸಿಎಂ” ಎಂದು ಸಿದ್ದರಾಮಯ್ಯ (CM Siddaramaiah) ಅವರು ಹಂಪಿಯಲ್ಲಿ ಗುರುವಾರವಷ್ಟೇ ಹೇಳಿಕೆ ನೀಡಿದ್ದರು. ಇದೀಗ ಸಾಕಷ್ಟು ಸಂಚಲನವನ್ನುಂಟು ಮಾಡಿದೆ. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಹೋದರರಾಗಿರುವ ಸಂಸದ ಡಿ.ಕೆ. ಸುರೇಶ್ (MP DK Suresh) ತಣ್ಣಗಾಗಿದ್ದಾರೆ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಖಾಲಿ ಇಲ್ಲದ ಹುದ್ದೆ ಬಗ್ಗೆ ಮಾತನಾಡಿ ಏನು ಪ್ರಯೋಜನ? ನಮ್ಮ ನಾಯಕರು ಸಿದ್ದರಾಮಯ್ಯ, ಅದರಲ್ಲಿ ಸಂದೇಹ ಬೇಡ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಆಡಳಿತ ನೀಡಲು ಜನ ಅವಕಾಶ ನೀಡಿದ್ದಾರೆ. ಸಿಎಂ ಹುದ್ದೆ ಖಾಲಿ ಇಲ್ಲ , ಈಗ ಚರ್ಚೆ ಮಾಡಿ ಏನು ಪ್ರಯೋಜನ? ನಮ್ಮ ನಾಯಕರು ಸಿದ್ದರಾಮಯ್ಯ ಅವರಾಗಿದ್ದಾರೆ. ಅದರಲ್ಲಿ ಸಂದೇಹ ಬೇಡ. ನಮ್ಮ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ಪೂರ್ಣಾವಧಿ ಸಿಎಂ ಚರ್ಚೆಗೆ ತೆರೆ ಎಳೆಯಲು ಪ್ರಯತ್ನ ಪಟ್ಟಿದ್ದಾರೆ.
ಕಾಂತರಾಜ್ ವರದಿ ತಿರಸ್ಕಾರ ಮಾಡುವಂತೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾಡಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಗುರುವಾರ ಒಕ್ಕಲಿಗರ ಸಂಘದ ಸಭೆ ನಡೆದಿದೆ. ನಿರ್ಮಲಾನಂದನಾಥ ಶ್ರೀಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಂಪುಟದ ಮುಂದೆ ಈ ವಿಷಯ ಬಂದಿಲ್ಲ, ಸರ್ಕಾರದ ಮುಂದೆಯೂ ಬಂದಿಲ್ಲ. ಇದರಲ್ಲಿ ಹೊಸದೇನೂ ಇಲ್ಲ, ಬಹಳ ದಿನದಿಂದ ಇರೋದು. ಸಮಾಜದ ಆಗು -ಹೋಗುಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಕಾಂತರಾಜ್ ವರದಿ ತಿರಸ್ಕಾರ ವಿಚಾರದ ಬಗ್ಗೆ ಸಮಾಜದ ಅಭಿಪ್ರಾಯವನ್ನು ಸ್ವಾಮೀಜಿ ತಿಳಿಸಿದ್ದಾರೆ. ವರದಿ ಬಂದ ನಂತರ ನನ್ನ ಅಭಿಪ್ರಾಯ ಹೇಳುವೆ, ವರದಿಯಲ್ಲಿ ಏನಿದೆ ಗೊತ್ತಿಲ್ಲ. ವೈಜ್ಞಾನಿಕ, ಅವೈಜ್ಞಾನಿಕ ನಂತರದ ಮಾತು. ಎಲ್ಲರ ಹಿತ ಕಾಪಾಡಬೇಕಿದೆ. ಶ್ರೀಗಳ ಅಭಿಪ್ರಾಯಕ್ಕೆ ನಾವೂ ಬೆಂಬಲ ಸೂಚಿಸಬೇಕಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸುಭದ್ರ ಸರ್ಕಾರ ಇಬ್ಬರ ಗುರಿ
ಆಡಳಿತ ನಡೆಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಗುರಿ ಇಟ್ಟುಕೊಂಡಿದ್ದಾರೆ. ಸರ್ಕಾರ ಸುಭದ್ರವಾಗಿರಬೇಕೆನ್ನುವುದು ಇಬ್ಬರ ಗುರಿಯಾಗಿದೆ. ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಇದ್ದಾಗ ಚರ್ಚೆ ಮಾಡಿದರೆ ಒಂದು ಅರ್ಥ ಇರುತ್ತದೆ. ಮುಂದಿನ ಸಿಎಂ ಬಗ್ಗೆ ಕೆಲವರ ಅಭಿಪ್ರಾಯ ಇರುತ್ತದೆ. ಏನೇ ತೀರ್ಮಾನ ಮಾಡಬೇಕಾದರೂ ಎಐಸಿಸಿ ಅಧ್ಯಕ್ಷರು, ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಈಗ ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನ, ಸಂದೇಹ ಬೇಡ ಎಂದು ಡಿ.ಕೆ. ಸುರೇಶ್ ಹೇಳಿದರು.
ಇದನ್ನೂ ಓದಿ: Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ
ಕಲೆಕ್ಷನ್ ಸರ್ಕಾರ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಬಿಜೆಪಿಯ 40 ಪರ್ಸೆಂಟ್ ಹಣ ಎಲ್ಲ ಕಡೆ ಚೆಲ್ಲಾಡುತ್ತಿದೆ ಎಂದು ಹೇಳಿದರು.