Site icon Vistara News

‌Lok Sabha Election 2024: ಲೋಕಸಭೆ ಸ್ಪರ್ಧೆ ಬಗ್ಗೆ ನನ್ನ ಯಾರೂ ಕೇಳಿಲ್ಲ, ನನಗೆ ಇಚ್ಛೆಯೂ ಇಲ್ಲ: ಡಾ. ಜಿ. ಪರಮೇಶ್ವರ್

Tumkur District In charge Minister Dr G Parameshwar latest statement at koratagere

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಗೆ (‌Lok Sabha Election 2024) ಸ್ಪರ್ಧೆ ಮಾಡುವ ವಿಚಾರವಾಗಿ ನನ್ನ ಹತ್ತಿರ ಯಾವುದೇ ಚರ್ಚೆ ನಡೆದಿಲ್ಲ. ಯಾರೂ ಚರ್ಚೆಯನ್ನೂ ಮಾಡಿಲ್ಲ. ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ. ಕೆಲವರು ಅಂದುಕೊಂಡಿರಬೇಕು. ಇನ್ನು ನನಗೆ ಸ್ಪರ್ಧೆ ಮಾಡುವ ಇಚ್ಛೆಯೂ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwara) ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌, ಈಗ ಸ್ಪರ್ಧೆ ಮಾಡುವ ಇಚ್ಛೆ ನನಗಿಲ್ಲ. ಸತೀಶ್ ಜಾರಕಿಹೊಳಿ ಹೆಸರು ಚರ್ಚೆ ಆಗಿರಬಹುದು. ಅಂತಿಮ ನಿರ್ಧಾರವನ್ನು ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕೋಲಾರಕ್ಕೆ ನನ್ನ ಹೆಸರು ಬಂದಿದೆ. ಯಾರು ಹೇಳಿದರು ಅಂತ ನನಗೆ ಗೊತ್ತಿಲ್ಲ. ಈ ಹಿಂದೆ ಚಿತ್ರದುರ್ಗಕ್ಕೂ ನನ್ನ ಹೆಸರು ಚರ್ಚೆಯಾಗಿತ್ತು. ನಾನು ಬೇಡ ಎಂದ ಮೇಲೆ ಚಂದ್ರಪ್ಪ ಅವರಿಗೆ ಟಿಕೆಟ್ ಕೊಟ್ಟರು.‌ ಅದಾದ ಮೇಲೆ ನಾನು ಲೋಕಸಭೆ ಸ್ಪರ್ಧೆಗೆ ಬೇಡ ಎಂದು ಇದ್ದೇನೆ. ಮಂತ್ರಿಗಳ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಅವರಾಗಲೀ, ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಲಿ ಕರೆದು ಮಾತನಾಡಿಲ್ಲ. ನಮ್ಮ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ‌ ಅವರು ಬಂದು ಏನು ಮಾಡಬೇಕು ಎಂಬುದನ್ನು ತಿಳಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಸಭೆಯ ಅಜೆಂಡಾ ನಮಗೆ ಹೇಳಿಲ್ಲ. ಲೋಕಸಭೆ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿಎಂ ಮತ್ತು ಹಿರಿಯ ಮುಖಂಡರನ್ನು ಕರೆದು ಮಾತನಾಡಬಹುದು. ಈಗ ಅವಶ್ಯಕತೆಯಿದೆ ಎಂದು ಸಭೆ ಮಾಡಬಹುದು. ನನ್ನ ಜತೆಗೆ ಮಾತನಾಡಿದ್ದರು. ಹೀಗಾಗಿ ನಾನು ಸಭೆಗೆ ಬರುತ್ತಾ ಇದ್ದೇನೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಟಾರ್ಗೆಟ್

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಹೈಕಮಾಂಡ್ ಹೇಳಿದೆ. ಗ್ಯಾರಂಟಿ ಕೊಡುತ್ತೇವೆ ಎಂದು ಚುನಾವಣೆಗೆ ಹೋಗಿದ್ದೆವು. ಅಧಿಕಾರಕ್ಕೆ ಬಂದ ನಂತರ ಅನುಷ್ಠಾನ ಆಗಿದೆ. ಅದರ ಇಂಪ್ಯಾಕ್ಟ್ ಎಷ್ಟು ಅಂತ ನೋಡಬೇಕು. ಬಡವರಿಗೆ ತಲುಪಿದೆ, ಹಾಗಾಗಿ ಇಂಪ್ಯಾಕ್ಟ್ ಆಗುತ್ತದೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನು ಅಭ್ಯರ್ಥಿಗಳ ಆಯ್ಕೆ ಮಾಡುವ ವಿಚಾರದಲ್ಲಿಯೂ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು. ‌

ರಾಮ ಮಂದಿರಕ್ಕೆ ಹಣ ಕೊಡೋದು ನಮ್ಮ ವೈಯಕ್ತಿಕ

ರಾಮ ಮಂದಿರಕ್ಕೆ ಹಣ ಕೊಡೋದು ನಮ್ಮ ವೈಯಕ್ತಿಕ ವಿಚಾರವಾಗಿದೆ. ರಾಮಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡುವ ವಿಚಾರಕ್ಕೆ ಎಐಸಿಸಿ ಏನು ತೀರ್ಮಾನ ಮಾಡುತ್ತದೋ ಗೊತ್ತಿಲ್ಲ. ಎಲ್ಲರೂ ಹೋಗೋಣ ಎಂದು ಹೇಳಿದರೆ ಎಲ್ಲರೂ ಹೋಗೋದು. ನಾವೆಲ್ಲ ಕಾಂಗ್ರೆಸ್‌ನವರು ಒಂದು ದಿನ ಹೋಗಿ ಬರುತ್ತೇವೆ. ಅವತ್ತು ನಮ್ಮದು ವಿಶೇಷ ಪೂಜೆ ಮಾಡಿಸುತ್ತೇವೆ. ಇನ್ನು ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಜ. 22ರಂದು ಪೂಜೆ ನಡೆಸುವಂತೆ ಆದೇಶ ಮಾಡಲಾಗಿದೆ. ಅದರಲ್ಲಿ ನನಗೆ ತಪ್ಪು ಕಾಣಿಸುತ್ತಿಲ್ಲ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.

Exit mobile version