Site icon Vistara News

NPS News : ಹಳೆ ಪಿಂಚಣಿ ಯೋಜನೆ ಜಾರಿಗಾಗಿ ʻವೋಟ್‌ ಫಾರ್‌ ಓಪಿಎಸ್‌ʼ ಆಂದೋಲನ; ಸರ್ಕಾರಿ ನೌಕರರ ನಿರ್ಧಾರ

government employees have decided to launch a vote for OPS campaign in karnataka

nps news

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದು ಪಡಿಸಿ, ಹಳೆಯ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿರುವ (NPS News) ರಾಜ್ಯದ ಸರ್ಕಾರಿ ನೌಕರರು ʻವೋಟ್‌ ಫಾರ್‌ ಓಪಿಎಸ್‌ʼ (vote for ops) ಆಂದೋಲನವನ್ನು ರಾಜ್ಯದಲ್ಲಿಯೂ ನಡೆಸಲು ಮುಂದಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಆಂದೋಲನ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರಿ ನೌಕರರ ಸಂಘವು ಮುಷ್ಕರಕ್ಕೆ ಕರೆ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಓಪಿಎಸ್‌ ಜಾರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಗೆ ವರದಿ ನೀಡಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಈ ನಿಲುವು ತೆಗೆದುಕೊಂಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸುತ್ತಿರುವ ಎನ್‌ಪಿಎಸ್‌ ನೌಕರರು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಹಂತ ಹಂತವಾಗಿ ವೋಟ್‌ ಫಾರ್‌ ಓಪಿಎಸ್‌ ಆಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ʻʻಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಓಪಿಎಸ್‌ ಜಾರಿಗೆ ಬದ್ಧವಾಗಿರಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಚುನಾವಣೆಯ ಸಂದರ್ಭದಲ್ಲಿ ಈ ಆಂದೋಲನ ನಡೆಸಲು ತೀರ್ಮಾನಿಸಿದ್ದೇವೆʼʼ ಎಂದು ಎನ್‌ಪಿಎಸ್‌ ನೌಕರರ ಸಂಘದ ಮುಖಂಡರು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಓಪಿಎಸ್‌ ಜಾರಿಯ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸುವ ಪಕ್ಷವನ್ನು ಬೆಂಬಲಿಸಲು ರಾಜ್ಯ ಸರ್ಕಾರಿ ನೌಕರರಲ್ಲಿ, ನಿಗಮ ಮಂಡಳಿಗಳ, ಸ್ವಾಯತ್ತ, ಅನುದಾನಿತ ಸಂಸ್ಥೆಗಳ ನೌಕರರಲ್ಲಿ, ಅವರ ಕುಟುಂಬದವರಲ್ಲಿ ಹಾಗೂ ಸ್ನೇಹಿತರು, ಹಿತೈಷಿಗಳಲ್ಲಿ ಜಾಗೃತಿ ಮೂಡಿಸಲು ಸಂಘವು ತೀರ್ಮಾನಿಸಿದೆ. ಇದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ʻʻಒಂದು ಗಟ್ಟಿ ಸಂದೇಶವನ್ನು ರಾವಾನೆ ಮಾಡುವ ಉದ್ದೇಶದಿಂದ ಮಾ.24 ರಿಂದ ಮಾ.28 ರವರೆಗೆ ಐದು ದಿನಗಳ ಕಾಲ ಎರಡು ಅಭಿಯಾನ ನಡೆಸಲಾಗುತ್ತದೆ. ನೌಕರರು ಮತ್ತು ಸಾರ್ವಜನಿಕರಿಗೆ ನಮ್ಮ ವಿಷಯವನ್ನು ಮನವರಿಕೆ ಮಾಡಿಕೊಡಲು ʻವೋಟ್‌ ಫಾರ್‌ ಓಪಿಎಸ್‌ʼ ಪೋಸ್ಟರನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತದೆ. ಈ ಐದು ದಿನಗಳಲ್ಲಿ ಒಂದು ದಿನ ಗಾಂಧಿ ಪ್ರತಿಮೆ ಅಥವಾ ಅಂಬೇಡ್ಕರ್‌ ಪ್ರತಿಮೆಯ ಮುಂಭಾಗದಲ್ಲಿ ವೋಟ್‌ ಫಾರ್‌ ಓಪಿಎಸ್‌ ಅಭಿಯಾನದ ಪ್ರತಿಜ್ಞೆಯನ್ನು ಸ್ವೀಕರಿಸುವಂತೆ ಎಲ್ಲ ನೌಕರರಿಗೂ ಕರೆ ನೀಡಲಾಗುತ್ತಿದೆʼʼ ಎಂದು ರಾಜ್ಯ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತಿಳಿಸಿದ್ದಾರೆ.

ಪ್ರತಿಜ್ಞೆ ಏನೆಂದು?

ಎಲ್ಲ ಸರ್ಕಾರಿ ನೌಕರರು ಮಾತ್ರವಲ್ಲದೆ, ಸಮಾಜ ಮುಖಿ ಚಿಂತಕರು, ಸಾರ್ವಜನಿಕರು ಈ ಅಭಿಯಾನಕ್ಕೆ ಬೆಂಬಲ ನೀಡಬೆಕೆಂದು ಶಾಂತಾರಾಮ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ ಎನ್‌ಪಿಎಸ್‌ ನೌಕರರೂ ಹೋರಾಟ ನಡೆಸಲು ಮುಂದಾಗಿರುವುದರಿಂದ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಈ ಕುರಿತು ಪ್ರಸ್ತಾಪಿಸುವುದು ಅನಿವಾರ್ಯವಾಗಲಿದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಓಪಿಎಸ್‌ ಜಾರಿಯ ಕುರಿತು ಒಲವು ವ್ಯಕ್ತಪಡಿಸಿದೆಯಾದರೂ ಸ್ಪಷ್ಟ ಭರವಸೆ ನೀಡಿಲ್ಲ. ಪ್ರಣಾಳಿಕೆಯಲ್ಲಿ ಈ ಪಕ್ಷ ಏನೆಂದು ಪ್ರಕಟಿಸಲಿದೆ ಎಂಬ ಕುರಿತು ಕುತೂಹಲವಿದೆ. ಬಿಜೆಪಿ ಓಪಿಎಸ್‌ ಜಾರಿಗೆ ಸಹಮತ ಹೊಂದಿಲ್ಲ. ಈ ಕುರಿತು ಪಕ್ಷದ ಹೈಕಮಾಂಡ್‌ ತೀರ್ಮಾನಿಸಲಿದೆ ಎಂದು ರಾಜ್ಯ ನಾಯಕರು ನುಣುಚಿಕೊಳ್ಳುತ್ತಿದ್ದಾರೆ. ಜೆಡಿಎಸ್‌ ಓಪಿಎಸ್‌ ಜಾರಿಗೆ ಬದ್ಧವಿರುವುದಾಗಿ ಈಗಾಗಲೇ ಪ್ರಕಟಿಸಿದೆ.

ಇದನ್ನೂ ಓದಿ : Sarvotthama Seva Prashasthi : ಸರ್ಕಾರಿ ಅಧಿಕಾರಿ, ನೌಕರರಿಂದ ನಾಮ ನಿರ್ದೇಶನ ಆಹ್ವಾನ

Exit mobile version