ಬೆಂಗಳೂರು: ಇಂದಿಗೆ (ಮೇ 20) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಾಧ್ಯಮದ ಸಂವಾದದ ಮೂಲಕ ರಾಜ್ಯದ ಜನರಿಗೆ ಧನ್ಯವಾದ ಹೇಳಿದ್ದಾರೆ. ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ ಎಂದು ಹೇಳಿದ್ದಾರೆ. ಅಲ್ಲದೆ, ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಇದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದು, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಅಭದ್ರತೆಯ ಆತಂಕ ಇರಲೇಬಾರದೆಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದಗಳಿಂದಾಗಿ ನಲುಗಿಹೋಗಿದ್ದ ರಾಜ್ಯದ ಆಡಳಿತವನ್ನು ಮತ್ತೆ ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿಗೆ ಹೆಗಲು ಕೊಟ್ಟಾಗ ಅದರ ಭಾರದ ಅರಿವು ನಮಗಿತ್ತು. ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಾವು ಹೋರಾಟವನ್ನೇ ಮಾಡಬೇಕಾಯಿತು. ನಮ್ಮ ಕೈಗಳ ಬಲಕುಂದಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕೇಂದ್ರ ಸರ್ಕಾರದ ಜತೆಗೂಡಿ ರಾಜ್ಯ ಬಿಜೆಪಿ ನಡೆಸಿದೆ. ಇಂತಹ ಸವಾಲುಗಳ ನಡುವೆಯೂ ನಮ್ಮ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ
ಅಭಿವೃದ್ಧಿಯ ಕಾಯಕವನ್ನು ನಮಗೆ ಬಿಡಿ
ನಮ್ಮ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ. ಅಭಿವೃದ್ಧಿಯ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುವುದಾಗಿದೆ. ಸಾಧನೆಯ ಬಲದಲ್ಲಿ ನಮ್ಮನ್ನು ಎದುರಿಸಲಾಗದ ನಮ್ಮ ವಿರೋಧ ಪಕ್ಷಗಳು ಜಾತಿ – ಧರ್ಮಗಳನ್ನು ರಾಜಕೀಯದ ಅಸ್ತ್ರಗಳನ್ನಾಗಿ ಬಳಸಿಕೊಂಡು ನಮ್ಮ ಮೇಲೆ ಎರಗುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಈ ವಿಭಜನಕಾರಿ ಮತ್ತು ವಿನಾಶಕಾರಿ ಅಜೆಂಡಾಗೆ ಬಲಿಯಾಗದೆ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳಲು ಸಹಕರಿಸಬೇಕೆಂದಷ್ಟೇ ನನ್ನ ಕೋರಿಕೆಯಾಗಿದೆ. ಉಳಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕಾಯಕವನ್ನು ನಮಗೆ ಬಿಟ್ಟು ಬಿಡಿ. ನುಡಿದಂತೆ ನಡೆದಿದ್ದೆವು, ನುಡಿದಂತೆ ನಡೆಯುತ್ತಿರುವೆವು, ಮುಂದೆಯೂ ನುಡಿದಂತೆಯೇ ನಡೆಯುವೆವು ಎಂದು ಸಿಎಂ ಸಿದ್ದರಾಮಯ್ಯ ಭರವಸೆಯನ್ನು ನೀಡಿದ್ದಾರೆ.
ಸಿಎಂ ಮಾಧ್ಯಮ ಸಂವಾದ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ
ಸೋಮವಾರ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ನುಡಿದಂತೆ ನಡೆದಿದ್ದೇವೆ, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು. ಅಲ್ಲದೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಎಂಬಿತ್ಯಾದಿ ಯೋಜನೆಗಳ ಬಗ್ಗೆ ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದರು.