ಬೆಂಗಳೂರು: ಶತಾಯಗತಾಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Eletion 2024) ಕಾಂಗ್ರೆಸ್ ಅನ್ನು ಮಣಿಸಲೇಬೇಕು. ಜತೆಗೆ ಈ ಹಿಂದಿನ ಚುನಾವಣೆಯಲ್ಲಿ ಪಡೆದುಕೊಂಡಿದ್ದ 25 + 1 ಸ್ಥಾನವನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ನಿರ್ಧರಿಸಿದೆ. ಅಲ್ಲದೆ, ಜೆಡಿಎಸ್ ಸಹ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ – ಜೆಡಿಎಸ್ ಮೈತ್ರಿ (BJP and JDS alliance) ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ಉಭಯ ಪಕ್ಷಗಳು ಮುಂದಾಗಿವೆ. ಆದರೆ, ಈ ಬೆಳವಣಿಗೆ ಬೆನ್ನಲ್ಲೇ ಆಪರೇಷನ್ ಹಸ್ತದ (Operation Hasta) ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಮಾತನಾಡಿದ್ದಾರೆ. ತಮ್ಮನ್ನು ಹಲವರು ಸಂಪರ್ಕ ಮಾಡಿದ್ದಾರೆ. ಈ ಸಂಬಂಧ ನಾನು ಸಿಎಂ, ಸಚಿವರು ಹಾಗೂ ವರಿಷ್ಠರ ಜತೆ ಮಾತನಾಡಬೇಕಿದೆ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಶಾಸಕರನ್ನು ಸೆಳೆಯುವ ವಿಚಾರವಾಗಿ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಆಪರೇಷನ್ ಹಸ್ತ ಚಟುವಟಿಕೆ ಸಹ ತೀವ್ರತೆ ಪಡೆದುಕೊಂಡಿದೆ. ಆಪರೇಷನ್ ಹಸ್ತದ ಸಾಧಕ- ಬಾಧಕಗಳ ಚರ್ಚೆ ಈಗ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸೋಮವಾರ (ಸೆಪ್ಟೆಂಬರ್ 25) ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Cauvery water dispute : ಬೆಂಗಳೂರು, ಕರ್ನಾಟಕ ಬಂದ್‌ಗೆ ಸರ್ಕಾರದ ಸಹಕಾರ: ಡಿ.ಕೆ. ಶಿವಕುಮಾರ್
ಅನೇಕ ಬಿಜೆಪಿ-ಜೆಡಿಎಸ್ ನಾಯಕರು ಬಿಜೆಪಿ – ಜೆಡಿಎಸ್ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿ ನನ್ನ ಬಳಿ ಮಾತಾಡಿದ್ದಾರೆ. ನಾನು ಸಿಎಂ, ಮಂತ್ರಿಗಳು, ಪ್ರಮುಖ ನಾಯಕರು ಈ ಬಗ್ಗೆ ಕುಳಿತು ಮಾತಾಡಬೇಕಿದೆ. ಚರ್ಚೆ ಮಾಡಿ ಅಸಮಾಧಾನ ಇರುವವರ ಜತೆ ನಾನು ಮಾತನಾಡುತ್ತೇನೆ. ಬಹಳಷ್ಟು ಜನ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಮೈತ್ರಿಗೆ ಸಮಾಧಾನ ಇಲ್ಲ ಅಂತ ಚುನಾವಣೆಯಲ್ಲಿ ಗೆದ್ದವರು, ಸೋತವರು ನಮ್ಮ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಶಾಸಕರ ಮಟ್ಟದಲ್ಲಿ ನಾವು ಚರ್ಚೆ ಮಾಡುತ್ತೇವೆ
ಮೊದಲು ನಾನು ನಮ್ಮ ಪಕ್ಷದಲ್ಲಿ ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತೇನೆ. ಕಾರ್ಯಕರ್ತರ ಮಟ್ಟದಲ್ಲಿ ಸೇರ್ಪಡೆ ಮಾಡಿಕೊಳ್ಳಿ ಅಂತ ಈಗಾಗಲೇ ಹೇಳಿದ್ದೇನೆ. ಶಾಸಕರ ಮಟ್ಟದಲ್ಲಿ ನಾವು ಮಾತನಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Cauvery water dispute : ಮಳೆ ಬಾರದೇ ಇದ್ದರೆ ಸರ್ಕಾರದಿಂದ ಮೋಡ ಬಿತ್ತನೆ!
ಸದ್ಯ ಆಪರೇಷನ್ ಬಗ್ಗೆ ಚರ್ಚೆ ಬೇಡ
ಪಕ್ಷಾಂತರ ಕಾಯ್ದೆ, ತಾಂತ್ರಿಕ ಅಡಚಣೆ ಸೇರಿದಂತೆ ಪಕ್ಷಾಂತರಕ್ಕೆ ಯಾವುದೆಲ್ಲ ಸಮಸ್ಯೆಗಳಿವೆಯೋ ಅವುಗಳ ಬಗ್ಗೆ ನಮಗೂ ಗೊತ್ತಿದೆ. ಸದ್ಯ ಬಂದ್, ಕಾವೇರಿ ವಿಚಾರ ಇದೆ. ಈಗ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು.