ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಲೋಕಸಭಾ ಚುನಾವಣೆ (Lok Sabha Election 2024) ಸಮರ ರಂಗೇರುತ್ತಿದೆ. ಆಡಳಿತ ಪಕ್ಷ, ಪ್ರತಿಪಕ್ಷಗಳು ತಂತ್ರ-ರಣ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ತಮ್ಮದೇ ಆದ ರಾಜಕೀಯ (Political Strategy) ದಾಳಗಳನ್ನು ಉರುಳಿಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (Congress Guarantee Scheme) ಭರಾಟೆಯನ್ನು ಬಗ್ಗುಬಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ (BJP JDS alliance) ಮಾಡಿಕೊಂಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಆಪರೇಷನ್ ಹಸ್ತದ (Operation Hasta) ಭಾಗ ಚುರುಕು ಪಡೆದುಕೊಂಡಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಈಗ ಆಪರೇಷನ್ ನೇತೃತ್ವವನ್ನು ವಹಿಸಿದ್ದು, ಬಿಜೆಪಿ ಅಸಮಾಧಾನಿತ ಮಾಜಿ ಶಾಸಕರನ್ನು ಪಕ್ಷದತ್ತ ಸೆಳೆಯಲು ಮುಂದಾಗಿದ್ದಾರೆ.
ಇಷ್ಟು ದಿನ ತೆರೆಮರೆಯಲ್ಲಿ ಆಟ ಆಡುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ನೇರವಾಗಿಯೇ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ, ಜೆಡಿಎಸ್ ಮಾಜಿ ಶಾಸಕರನ್ನು ಕರೆತಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (KPCC president and Deputy CM DK Shivakumar) ಅವರನ್ನು ಭೇಟಿ ಮಾಡಿಸಿದ್ದಾರೆ.
ಇದನ್ನೂ ಓದಿ: Karnataka Bandh : ನಾಳೆ ಬಂದ್ ಮಾಡಿದ್ರೆ ಹುಷಾರ್ ಎಂದ ಪರಮೇಶ್ವರ್; ಹೋರಾಟ ಹತ್ತಿಕ್ಕಲು ಮುಂದಾಯಿತಾ ಸರ್ಕಾರ?
ಶಿರಹಟ್ಟಿ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಮೂಡಿಗೆರೆ ಬಿಜೆಪಿ ಮಾಜಿ ಶಾಸಕ, ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿ ಜತೆ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಕೆಕೆ ಗೆಸ್ಟ್ ಹೌಸ್‌ನಲ್ಲಿ ಇಬ್ಬರೂ ಮಾಜಿ ಶಾಸಕರ ಜತೆ ಡಿಕೆಶಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಮೈತ್ರಿ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಇಬ್ಬರೂ ಮಾಜಿ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರ ಸೇರ್ಪಡೆಗೆ ಜಗದೀಶ್ ಶೆಟ್ಟರ್ ನೇತೃತ್ವ ವಹಿಸಿದ್ದಾರೆ.
ಇದರ ಜತೆಗೆ ಶಂಕರ್ ಪಾಟೀಲ್ ಮುನೇನಕೊಪ್ಪ, ಚಿಕ್ಕನಗೌಡರ ಸೇರ್ಪಡೆ ಬಗ್ಗೆ ಸಹ ಮಾತುಕತೆ ನಡೆದಿದೆ. ಜಗದೀಶ್ ಶೆಟ್ಟರ್ ಅವರು ಲೋಕಸಭಾ ಚುನಾವಣೆ ವೇಳೆಗೆ ಶತಾಯಗತಾಯ ಬಿಜೆಪಿಗೆ ಪಾಠ ಕಲಿಸುವ ಪಣ ತೊಟ್ಟಿದ್ದಾರೆ. ಹೀಗಾಗಿ ಅಸಮಾಧಾನಿತ ಮಾಜಿ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಇನ್ನೂ ಸಾಕಷ್ಟು ಜನ ಕಾಂಗ್ರೆಸ್ ಸೇರುವವರು ಇದ್ದಾರೆ ಎಂದು ಸಹ ಅವರು ಹೇಳಿದ್ದಾರೆ.
ಮುಂದಿನ ವಾರ ಕಾಂಗ್ರೆಸ್ ಸೇರ್ಪಡೆ
ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ರಾಮಣ್ಣ ಲಮಾಣಿ, ಎಂ.ಪಿ. ಕುಮಾರಸ್ವಾಮಿ ಅವರು ಕಳೆದ ಎರಡು ತಿಂಗಳಿಂದ ನನ್ನನ್ನು ಸಂಪರ್ಕ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದರೂ ಇವರಿಗೆ ಟಿಕೆಟ್ ತಪ್ಪಿಸಲಾಗಿತ್ತು. ರಾಮಣ್ಣ ಲಮಾಣಿ, ಕುಮಾರಸ್ವಾಮಿ, ಸುಕುಮಾರ್ ಶೆಟ್ಟಿ, ನನ್ನನ್ನು ಸೇರಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಮಾಜಿ ಶಾಸಕರು ಬೇಸರ ಆಗಿದ್ದಾರೆ. ಹೀಗಾಗಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸಿದ್ದೇನೆ. ಮಾತುಕತೆ ಆಗಿದೆ ಮುಂದಿನ ವಾರ ರಾಮಣ್ಣ, ಕುಮಾರಸ್ವಾಮಿ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ. ಮಾಜಿ ಶಾಸಕರು ಬರುವುದರಿಂದ ಕಾಂಗ್ರೆಸ್‌ಗೆ ಲಾಭ ಆಗಲಿದೆ. ಇನ್ನು ಅನೇಕ ಜನ ಬಿಜೆಪಿ, ಜೆಡಿಎಸ್- ಮಾಜಿ ಶಾಸಕರು ಬರುತ್ತಾರೆ. ಹಾಲಿ ಸಂಸದರನ್ನು ನಾನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್‌ನ ಬೇರೆ ನಾಯಕರು ಸಂಪರ್ಕ ಮಾಡಿರಬಹುದು ಎಂದು ಹೇಳಿದರು.
ಇದನ್ನೂ ಓದಿ: Anna Bhagya : ಶೀಘ್ರದಲ್ಲೇ ಸರ್ಕಾರದಿಂದ ಧನ ಭಾಗ್ಯಕ್ಕೆ ಬ್ರೇಕ್! ಅಕ್ಟೋಬರ್‌ನಿಂದಲೇ 10 ಕೆ.ಜಿ. ಅಕ್ಕಿ
ಬಿಜೆಪಿ-ಜೆಡಿಎಸ್‌ನಲ್ಲಿ ಹೊಂದಾಣಿಕೆ ಇಲ್ಲ
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೆಟ್ಟರ್, ನಾನು ಮೊದಲೇ ಹೇಳಿದ್ದೆ, ಇಬ್ಬರು ಅಸಹಾಯಕರು ಸೇರಿ ಪರಸ್ಪರ ಸಹಾಯ ಮಾಡಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ. ಆ ಮೈತ್ರಿಯಿಂದ ಕಾಂಗ್ರೆಸ್ ಪಾರ್ಟಿಗೆ ಯಾವುದೇ ತೊಂದರೆ ಇಲ್ಲ. ಯಾವುದೂ ಬದಲಾವಣೆ ಆಗಲ್ಲ. ಕಾಂಗ್ರೆಸ್ ಶಕ್ತಿ ಮುಂದುವರಿಯಲಿದೆ. ಆ ಪಕ್ಷಗಳು ಮೈತ್ರಿಯಿಂದ ಇನ್ನೂ ಅಧೋಗತಿಗೆ ಹೋಗಲಿವೆ. ಎರಡೂ ಪಕ್ಷಗಳಲ್ಲಿ ಕೆಳ ಹಂತದಲ್ಲಿ ಮತ್ತು ರಾಜ್ಯಮಟ್ಟದ ನಾಯಕರಲ್ಲಿ ಹೊಂದಾಣಿಕೆ ಇಲ್ಲ. ಅದರ ಪರಿಣಾಮವೂ ಆಗಲಿದೆ ಎಂದು ತಿಳಿಸಿದರು.