Site icon Vistara News

Operation Hasta : ದೀಪಾವಳಿ ಬಳಿಕ ಮತ್ತೆ ಆಪರೇಷನ್‌‌ ಹಸ್ತ; ಡಿಕೆಶಿ ಸಂಪರ್ಕದಲ್ಲಿ BJP, JDS ನಾಯಕರು

dk shivakumar infront of vidhana soudha

ನವದೆಹಲಿ: ದೀಪಾವಳಿ ಕಳೆಯುತ್ತಿದ್ದಂತೆಯೇ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಆಪರೇಷನ್‌ ಹಸ್ತಕ್ಕೆ (Operation Hasta) ವೇದಿಕೆ ರೆಡಿಯಾಗಿದೆ. ನವೆಂಬರ್‌ 14ರಂದು ದೀಪಾವಳಿ ಸಂಭ್ರಮ (Deepavali Festival) ಮುಕ್ತಾಯದ ಬೆನ್ನಿಗೇ ನವೆಂಬರ್‌ 15ರಂದು ಕಾಂಗ್ರೆಸ್‌ ಪಕ್ಷವು ಬಿಜೆಪಿ ಹಾಗೂ ಕಾಂಗ್ರೆಸ್‌ನ ಹಲವು ನಾಯಕರನ್ನು ಸೇರಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದನ್ನು ಹೈಕಮಾಂಡ್‌ ಜತೆಗೆ ಮಾತುಕತೆ ನಡೆಸುವುದಕ್ಕಾಗಿ ದಿಲ್ಲಿಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಕೂಡಾ ಒಪ್ಪಿಕೊಂಡಿದ್ದಾರೆ.

ಈ ಬಾರಿ ಬಿಜೆಪಿಯ ಮಾಜಿ ಶಾಸಕರು ಮತ್ತು ಆಮ್‌ ಆದ್ಮಿ ಪಾರ್ಟಿಯ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್‌ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಡಿ.ಕೆ. ಶಿವಕುಮಾರ್‌ ಅವರು ಪ್ರತಿಪಕ್ಷಗಳ ಹಲವಾರು ಮಾಜಿ ಶಾಸಕರಿಗೆ ಗಾಳ ಹಾಕಿದ್ದು, ಅವರಲ್ಲಿ ಮಾಜಿ ಶಾಸಕ ಚಿಕ್ಕನಗೌಡರ್, ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಸೇರ್ಪಡೆ ಸಾಧ್ಯತೆ ಇದೆ ಎನ್ನಲಾಗಿದೆ.

ನವೆಂಬರ್‌ 15ರಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ಯಾರ್ಯಾರು ಸೇರುತ್ತಾರೆ ಎನ್ನುವುದನ್ನು ನವೆಂಬರ್‌ 14ರಂದು ಘೋಷಿಸಲಾಗುವುದು ಎಂದು ಹೇಳಿರುವ ಡಿ.ಕೆ. ಶಿವಕುಮಾರ್‌ ಅವರು ಇದೇ ಹೊತ್ತಿನಲ್ಲಿ ಆಪರೇಷನ್‌ ಕಮಲದ ಬಗ್ಗೆಯೂ ಮಾತನಾಡಿದ್ದಾರೆ.

ನಮ್ಮ ಪಕ್ಷದ ಒಬ್ಬನನ್ನೂ ಸೆಳೆಯಲು ಸಾಧ್ಯವಿಲ್ಲ ಎಂದ ಡಿ.ಕೆ. ಶಿವಕುಮಾರ್‌

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಬುಧವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಬಿಜೆಪಿಯವರು ಆಪರೇಷನ್‌ ಕಮಲ ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚೆನ್ನಾಗಿ ಗೊತ್ತಿದೆ” ಎಂದರು.

ʻಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ’ ಎಂದು ಕೇಳಿದ ಪ್ರಶ್ನೆಗೆ, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ” ಎಂದರು.

ಬಿಜೆಪಿಯ ಎಲ್ಲಾ ನಡೆಯೂ ನನಗೆ ಗೊತ್ತಿದೆ

ಸರ್ಕಾರ ಬೀಳಿಸುವ ಯತ್ನ ಮಹಾರಾಷ್ಟ್ರದಿಂದ ನಡೆದಿದೆ, ರಾಜ್ಯದ ನಾಯಕರು ಅಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎಂದು ಮರುಪ್ರಶ್ನಿಸಿದಾಗ, “Hundred Things happens, Congress Party will digist (ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ). ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ, ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದರು.

ನಮ್ಮಿಂದ ಅಲ್ಲಿಗೆ ಹೋದವರೇ, ಈ ಆಪರೇಷನ್ ಕೆಲಸ ಮಾಡುತ್ತಿರುವುದು

ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದಾಗ “ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ, ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು” ಎಂದರು.

ಕರ್ನಾಟಕ ಜಗಳಕ್ಕೆ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಹೇಳಿರುವ ಬಗ್ಗೆ ಕೇಳಿದಾಗ “ಪ್ರಧಾನಿಗಳು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಲ್ಲಾ ಅಷ್ಟೇ ಸಾಕು. ನಮ್ಮ ಗ್ಯಾರಂಟಿ, ಕೆಲಸ, ಒಗ್ಗಟ್ಟು ಅವರ ನಿದ್ರೆ ಕೆಡಿಸಿದೆ. ಇದು ಸಂತೋಷದ ವಿಚಾರ, ಅವರಿಗೆ ಅಭಿನಂದನೆಗಳು. ಅದಕ್ಕೆ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ” ಎಂದು ಪ್ರತಿಕ್ರಿಯಿಸಿದರು.

ಸತೀಶ್‌ ಜಾರಕಿಹೊಳಿ ಭೇಟಿ ಹಿಂದೆ ಯಾವುದೇ ರಾಜಕೀಯವಿಲ್ಲ

ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ವಿಚಾರದ ಬಗ್ಗೆ ಕೇಳಿದಾಗ “ನಾನು ಕಾಂಗ್ರೆಸ್ ಪಕ್ಷ ಎನ್ನುವ ಕುಟುಂಬದ ಮುಖ್ಯಸ್ಥ. ಪಕ್ಷದ ಸಾಕಷ್ಟು ಕೆಲಸಗಳು ಇರುತ್ತವೆ. ಆದಕ್ಕೆ ನಾನೇ ಒಂದಷ್ಟು ಜನ ನಾಯಕರ ಮನೆಗೆ ಹೋಗುತ್ತೇನೆ. ಅಥವಾ ನನ್ನ ಮನೆಗೆ ಕರೆಯುತ್ತೇನೆ. ರಾಮಲಿಂಗಾರೆಡ್ಡಿ, ಪರಮೇಶ್ವರ್ ಅವರ ಮನೆಗೆ ಹೋಗುತ್ತೇನೆ. ಅವರುಗಳೇ ನನ್ನ ಮನೆಗೆ ಬರುತ್ತೇನೆ ಎಂದಾಗ, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದ ಸಂದರ್ಭಗಳೂ ಇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರೇ ಮನೆಗೆ ಬರುತ್ತೇನೆ ಎಂದಿದ್ದರು. ಅದಕ್ಕೆ ಬೇಡ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಹೋದೆ. ನಾನೊಬ್ಬ ಪಕ್ಷದ ಅಧ್ಯಕ್ಷ, ಅದಕ್ಕೆ ಭೇಟಿಯಾಗಿದ್ದೇನೆ” ಎಂದರು.

ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥನ ಮನೆಗೆ ಸದಸ್ಯರು ಬರುತ್ತಾರೆ, ನೀವೆ ಅವರ ಮನೆಗೆ ಹೋಗಿದ್ದು ಏಕೆ ಎಂದಾಗ “ನಮ್ಮ ಮನೆಯಲ್ಲಿ ಮಾತನಾಡಲು ಸಮಯವೇ ಇಲ್ಲ, ನಮ್ಮ ಕಾರ್ಯಕರ್ತರಿಗೆ ಸರಿಯಾಗಿ ಸಮಯ ಕೊಡಲು ಆಗುತ್ತಿಲ್ಲ. ಅದಕ್ಕಾಗಿ ಅವರ ಬಳಿ ಕ್ಷಮೆ ಕೇಳುತ್ತೇನೆ” ಎಂದರು.

ಸಿಎಂ ಆಗೋ ಸತೀಶ್‌ ಜಾರಕಿಹೊಳಿ ಆಸೆ ತಪ್ಪಲ್ಲ ಎಂದ ಡಿ.ಕೆ. ಶಿವಕುಮಾರ್‌

ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎನ್ನುವ ಎರಡು ಅಧಿಕಾರ ಶಕ್ತಿ ಕೇಂದ್ರಗಳಿದ್ದು, ಸತೀಶ್ ಜಾರಕಿಹೊಳಿ ಅವರು ಮೂರನೇ ಶಕ್ತಿ ಕೇಂದ್ರವಾಗಿ ಸೃಷ್ಟಿಯಾಗುತ್ತಿದ್ದಾರಾ ಎಂದಾಗ “ರಾಜ್ಯದಲ್ಲಿ ಒಬ್ಬರೇ ಸಿಎಂ, ಒಬ್ಬರೇ ಕೆಪಿಸಿಸಿ ಅಧ್ಯಕ್ಷ, ಇದಕ್ಕೆ ಉಪಮುಖ್ಯಮಂತ್ರಿ ಪಟ್ಟ ಜೋಡಿಸಿಕೊಂಡಿದೆ” ಎಂದು ಸ್ಪಷ್ಟಪಡಿಸಿದರು.

2028 ರಲ್ಲಿ ನಾನೇ ಸಿಎಂ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದಾಗ “ಆಸೆ ಪಡುವುದರಲ್ಲಿ ತಪ್ಪೇನಿದೆ. ಈಗ ಕೊಟ್ಟಿರುವ ಅಧಿಕಾರವನ್ನು 5 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿ, ಮುಂದಿನ ಬಾರಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕಿಂತ ಬೇರೇನಿದೆ?” ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಒಗ್ಗಟ್ಟು ಪ್ರದರ್ಶಿಸುವ ಪರಿಸ್ಥಿತಿ ಯಾಕೆ ಬಂತು?

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಎಳೆದುಕೊಂಡು ಬಿಡುತ್ತಾರೆ ಎಂಬ ಮಾತುಗಳು ಇದ್ದಾಗ ಹಾಸನಾಂಬ ದರ್ಶನ ಪಡೆದು ಕುಮಾರಸ್ವಾಮಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರಲ್ಲ ಎಂದು ಕೇಳಿದಾಗ “ಇಂತಹ ಪರಿಸ್ಥಿತಿ ಅವರಿಗೆ ಏಕೆ ಬಂತು?. ನಾವು ಅವರ ಸುದ್ದಿಗೆ ಹೋಗಿಲ್ಲ, ನಮ್ಮಲ್ಲೇ 136 ಜನ ಹಾಗೂ ಪಕ್ಷೇತರರ ಬೆಂಬಲ ಇದೆಯಲ್ಲಾ? ಅವರಿಗೆ ಒಗ್ಗಟ್ಟು ಪ್ರದರ್ಶಿಸುವ ಪರಿಸ್ಥಿತಿ ಏಕೆ ಬಂತು?” ಎಂದು ಕೇಳಿದರು.

ನೀವು ಏನಿಲ್ಲ ಎಂದು ಹೇಳುತ್ತಿದ್ದೀರಿ, ಆದರೆ ಸಿಎಂ ಸಿದ್ದರಾಮಯ್ಯ ಅವರು ಬಹಳಷ್ಟು ಜನ ಬಿಜೆಪಿ, ಜೆಡಿಎಸ್ನವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ ಎಂದಾಗ “ಇದೆ, ನಾನು ಇಲ್ಲ ಎಂದು ಹೇಳಿಲ್ಲವಲ್ಲ. ನ.15ಕ್ಕೆ ಪಕ್ಷ ಸೇರ್ಪಡೆ ಇದೆ, ನ.14 ರ ಸಂಜೆ ತಿಳಿಸುತ್ತೇವೆ, ನೀವು ಯಾರೋ ಬರುತ್ತಾರೆ ಎಂದು ಹೇಳಿದರಲ್ಲಾ” ಎಂದರು.

ಸದಾಶಿವ ಆಯೋಗದ ವರದಿ ಜಾರಿಗೆ ಕೂಗೆದ್ದ ಬಗ್ಗೆ ಡಿ.ಕೆಶಿ ಹೇಳಿದ್ದೇನು?

ಸದಾಶಿವ ಆಯೋಗ ವರದಿ ಜಾರಿಗೆ ಮತ್ತೊಮ್ಮೆ ಕೂಗು ಎದ್ದಿದೆ, ಎಡಗೈ ಸಮುದಾಯದವರು ಬೆಳಗಾವಿಯಲ್ಲಿ ಬೃಹತ್ ಸಮಾವೇಶಕ್ಕೆ ಸಜ್ಜಾಗುತ್ತಿರುವ ಬಗ್ಗೆ ಕೇಳಿದಾಗ “ಕಾಂಗ್ರೆಸ್ ಪಕ್ಷ ಈ ವಿಚಾರಕ್ಕೆ ಬದ್ದವಾಗಿದೆ. ಚುನಾವಣೆಗೂ ಮುಂಚಿತವಾಗಿ, ಚಿತ್ರದುರ್ಗದ ಸಮಾವೇಶದಲ್ಲಿ ಒಂದಷ್ಟು ನಿರ್ಣಯಗಳನ್ನು ತೆಗೆದುಕೊಂಡಿದ್ದೆವು. ಹಂತ, ಹಂತವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಒಂದೇ ದಿನದಲ್ಲಿ ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ.

ಕಾರು ಬದಲಿಸಬೇಕು ಎಂದು ಕೇಂಧ್ರ ಸರಕಾರವೇ ಹೇಳಿದ್ದು

ರಾಜ್ಯದಲ್ಲಿ ಬರಗಾಲವಿದ್ದರು ಸಿಎಂ ಕಚೇರಿಗೆ ಪೀಠೋಪಕರಣ ಹಾಗೂ ಹೊಸ ಕಾರುಗಳ ಖರೀದಿ ಬಗ್ಗೆ ಕೇಳಿದಾಗ “ಡಿಸೇಲ್ ಕಾರು ಮತ್ತು ಹಳೆಯ ಕಾರುಗಳನ್ನು ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ದೆಹಲಿಯಲ್ಲಿ ಇರುವ ನನ್ನ ಕಾರನ್ನೇ ಬದಲಾಯಿಸಬೇಕು ಎಂದು ಕಾರ್ಯದರ್ಶಿ ಹೇಳಿದರು, ಇಲ್ಲಿ ಬುಕ್ಕಿಂಗ್ ಇಲ್ಲದ ಕಾರಣ, ಬೆಂಗಳೂರಿಗೆ ಹೋಗಿ ಟೊಯೋಟೋ ಕಂಪೆನಿಯವರಿಗೆ ಬದಲಾಯಿಸಿಕೊಡಿ ಎಂದು ಹೇಳಬೇಕಾಗಿದೆ. ಆದ ಕಾರಣ ಡೀಸೆಲ್ ಕಾರುಗಳನ್ನು ತೆಗೆದು 30 ಪೆಟ್ರೋಲ್ ಕಾರುಗಳಿಗಾಗಿ ಕಾಯ್ದಿರಿಸಲಾಗಿದೆ” ಎಂದು ಸಮರ್ಥನೆ ನೀಡಿದರು.

ಪಂಚ ರಾಜ್ಯ ಚುನಾವಣೆಯಲ್ಲಿ ಫುಲ್‌ ಗೆಲುವು ನಮ್ಮದೇ

ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ರಾಜ್ಯಗಳನ್ನು ಗೆಲ್ಲಬಹುದು ಎಂದು ಕೇಳಿದಾಗ “ಐದು ರಾಜ್ಯಗಳನ್ನೂ ಗೆಲ್ಲುತ್ತೇವೆ. ಮಿಜೋರಾಂ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲ, ಆದರೆ ಮಿಕ್ಕ ರಾಜ್ಯಗಳನ್ನು ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ ಎಂದು ಮರುಪ್ರಶ್ನಿಸಿದಾಗ “ಇಡೀ ಉತ್ತರ ಭಾರತದಲ್ಲೇ ಅತ್ಯಂತ ಹೆಚ್ಚು ಉತ್ತಮ ಕೆಲಸಗಳು ನಡೆದಿರುವುದು ರಾಜಸ್ಥಾನದಲ್ಲಿ. ನೋಡಿ, ಕೇಳಿ ಮಾಹಿತಿ ಪಡೆದುಕೊಂಡಿದ್ಧೇನೆ, ಒಳ್ಳೆ ಕೆಲಸ ಮಾಡಿದ್ದಾರೆ” ಎಂದರು.

ನವೆಂಬರ್‌ 15ರ ಬಳಿಕ ನಿಗಮ ಮಂಡಳಿ ಬಗ್ಗೆ ತೀರ್ಮಾನ

ಪಂಚರಾಜ್ಯ ಚುನಾವಣೆ ಆದ ನಂತರ ಸಚಿವ ಸಂಪುಟ ಪುನರ್ರಚನೆಯಾಗುತ್ತದೆ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಾಗುತ್ತದೆಯೇ ಎನ್ನುವ ಪ್ರಶ್ನೆಗೆ “ಯಾರನ್ನು ಬಿಡುವ ಪ್ರಶ್ನೆಯಿಲ್ಲ, ಈಗ ಸದ್ಯಕ್ಕೆ ಇದರ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನಿಗಮ ಮಂಡಳಿಗಳ ಬಗ್ಗೆ ಈಗಾಗಲೇ ಎರಡು ಬಾರಿ ಚರ್ಚೆಯಾಗಿದ್ದು, ನ. 15 ರ ನಂತರ ಎಐಸಿಸಿಯವರು ಬಂದು ತೀರ್ಮಾನ ಮಾಡುತ್ತಾರೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: DV Sadananda Gowda : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ. ಸದಾನಂದ ಗೌಡ

ಕಾರ್ಯಾಧ್ಯಕ್ಷರ ಬದಲಾವಣೆಯ ಸುಳಿವು ನೀಡಿದ ಡಿ.ಕೆ.ಶಿವಕುಮಾರ್‌

ಕಾರ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿದಾಗ “ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ಅವರು ಸಾಕಷ್ಟು ಕಾರ್ಯಭಾರಗಳ ಒತ್ತಡದಲ್ಲಿ ಇದ್ದಾರೆ. ಅವರ ಇಲಾಖೆಯ ಕೆಲಸ ಸಾಕಷ್ಟಿದೆ. ಆದ ಕಾರಣ ಹೊಸ ತಂಡ ಬಂದು ಪಕ್ಷದ ಚಟುವಟಿಕೆಗಳನ್ನು ಚುರುಕು ಮಾಡಬೇಕು ಎನ್ನುವ ಅಭಿಲಾಷೆಯಿದೆ, ನಮ್ಮ ಸಲಹೆಯನ್ನೂ ಕೇಳಿದ್ದಾರೆ. ನಮ್ಮ ರಾಜ್ಯದವರೇ ಮೇಲಿದ್ದಾರೆ, ಸದ್ಯದಲ್ಲೇ ತೀರ್ಮಾನ ಮಾಡುತ್ತಾರೆ” ಎಂದರು.

ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಯಾವ ವಿಚಾರ ಚರ್ಚೆ ಮಾಡಿದ್ದೀರಿ ಎಂದು ಕೇಳಿದಾಗ “ತೆಲಂಗಾಣ ಚುನಾವಣೆಗೆ ರಾಜ್ಯದ 50 ಕ್ಕೂ ಹೆಚ್ಚು ನಾಯಕರನ್ನು ಚುನಾವಣಾ ಸಂಬಂಧಿ ಕೆಲಸಗಳಿಗೆ ನಿಯೋಜಿಸಲಾಗಿದೆ. ನಾನು ಸಹ ನ.10 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದೇನೆ, ಈ ವಿಚಾರವಾಗಿ ಚರ್ಚೆ ನಡೆಸಲಾಯಿತು. ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯಗಳ ನಾಯಕರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರಾಜ್ಯಕ್ಕೆ ಬಂದು ಕೆಲಸ ಮಾಡಿದ್ದಾರೆ, ಅದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ. ಬಿಜೆಪಿಯವರೂ ಕಳಿಸಿದ್ದಾರೆ” ಎಂದು ತಿಳಿಸಿದರು. ಯಾವ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೀರಿ ಎಂದು ಕೇಳಿದಾಗ “ಅದನ್ನೆಲ್ಲಾ ಹೇಳಲು ಆಗುವುದಿಲ್ಲ” ಎಂದರು.

Exit mobile version