ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಂದ್ರಯಾನ 3 (Chandrayaan 3) ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಭೇಟಿ (Meeting ISRO Scientists) ಮಾಡಲು ಬೆಂಗಳೂರಿಗೆ ಬಂದರೂ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಮಾತ್ರ ಆ ಕಡೆ ಸುಳಿದಿಲ್ಲ. ಇನ್ನೊಂದು ಕಡೆ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ (Shivarama Hebbar) ಅವರು ಬೆಳ್ಳಂಬೆಳಗ್ಗೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎರಡು ಬೇರೆ ಬೇರೆ ವಿದ್ಯಮಾನಗಳಾದರೂ ಆಪರೇಷನ್ ಹಸ್ತದೊಳಗೆ (Operation Hasta) ಸೇರಿಕೊಂಡಿರುವುದರಿಂದ ಕುಹೂಹಲ ಮೂಡಿಸಿದೆ.
ಅರ್ಧ ಗಂಟೆ ನಡೆಯಿತು ಹೆಬ್ಬಾರ್-ಸಿದ್ದರಾಮಯ್ಯ ಭೇಟಿ
ಕಳೆದ ಆಪರೇಷನ್ ಕಮಲದಲ್ಲಿ ಬಿಜೆಪಿ ಪಾಲಾಗಿ ಮಂತ್ರಿಯೂ ಆಗಿದ್ದ ಹಾಲಿ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಅವರು ಮರಳಿ ಕಾಂಗ್ರೆಸ್ ತೆಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇದರ ನಡುವೆ ಅವರು ಶನಿವಾರ ಬೆಳಗ್ಗೆ ಬೆಂಗಳೂರಿನ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದರು.
ಮೇಲ್ನೋಟಕ್ಕೆ ಶಿವರಾಮ್ ಹೆಬ್ಬಾರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಲ್ಲಾಪುರ-ಮುಂಡಗೋಡ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಗುರುತಿಸುವಂತೆ ಮನವಿ ಮಾಡಲು. ಅದಕ್ಕೆ ಸಂಬಂಧಪಟ್ಟ ಒಂದು ಮನವಿ ಪತ್ರವನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಆದರೆ, ಅವರಿಬ್ಬರ ನಡುವೆ ನಡೆದಿರುವುದು ಬರಗಾಲದ ಪರಿಸ್ಥಿತಿಯ ಚರ್ಚೆ ಅಲ್ಲ. ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಭವಿಷ್ಯದ ವಿಚಾರ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿ ಈಗಲೂ ಶಾಸಕರಾಗಿರುವವರ ಪೈಕಿ ಮರಳಿ ಕಾಂಗ್ರೆಸ್‌ಗೆ ಸೇರಲಿರುವವರಲ್ಲಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಪ್ರಮುಖರಾಗಿದ್ದಾರೆ. ಅದರಲ್ಲಿ ಸೋಮಶೇಖರ್ ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈಗ ಶಿವರಾಮ್ ಹೆಬ್ಬಾರ್ ಸರದಿ.
ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಡಿ.ಕೆ. ಶಿವಕುಮಾರ್ ಅವರ ಸಂಪರ್ಕದಲ್ಲಿದ್ದ ಅವರು ಈಗ ಸಿದ್ದರಾಮಯ್ಯ ಅವರಿಗೂ ವಿಷಯ ತಿಳಿಸಿ ಅನುಮತಿ ಪಡೆಯಲು ಬಂದಿದ್ದಾರೆ ಎಂದು ಹೇಳಲಾಗಿದೆ.
ಮೋದಿ ಬಂದ್ರೂ ಸೋಮಶೇಖರ್ ಗೈರು
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಸ್ರೋದ ಎಂಜಿನಿಯರ್‌ಗಳನ್ನು ಅಭಿನಂದಿಸುವುದಕ್ಕಾಗಿ ಆಗಮಿಸುವ ವೇಳೆ ಅಧಿಕೃತವಾಗಿ ಅವರನ್ನು ಭೇಟಿಯಾಗಲು ಯಾವ ಬಿಜೆಪಿ ನಾಯಕರಿಗೂ ಅವಕಾಶವಿರಲಿಲ್ಲ. ಆದರೆ, ಮೋದಿ ಬರುವಾಗ ಕೆಲವರು ಎಚ್ಎಎಲ್ ಮತ್ತು ಇನ್ನೂ ಕೆಲವರು ಇಸ್ರೋ ಬಳಿ ಇರುವಂತೆ ರಾಜ್ಯ ಘಟಕ ಸೂಚಿಸಿತ್ತು. ಹೀಗಾಗಿ ಬೆಂಗಳೂರಿನ ಬಿಜೆಪಿ ಶಾಸಕರು ತಮಗೆ ಸೂಚಿಸಲಾದ ಜಾಗದಲ್ಲಿ ಉಪಸ್ಥಿತರಿದ್ದರು. ಆದರೆ, ಆದ್ರೆ ಎಸ್ಟಿ ಸೋಮಶೇಖರ್ ಮಾತ್ರ ಬರಲೇ ಇಲ್ಲ.
ಸೋಮಶೇಖರ್ ಅವರು ಕಳೆದ ಬಾರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಸಂಸದರ ಸಭೆ ಕರೆದಾಗಲೂ ಹೋಗಿರಲಿಲ್ಲ. ಬಳಿಕ ಸಿ.ಟಿ. ರವಿ ಮತ್ತು ಆರ್. ಅಶೋಕ್ ಅವರನ್ನು ತಾವೇ ಹೋಗಿ ಭೇಟಿ ಮಾಡಿದ್ದರು. ಆ ವೇಳೆ ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ಹೇಳಿಯೇ ಬಂದಿದ್ದರು. ಇದೀಗ ಮೋದಿ ಕಾರ್ಯಕ್ರಮವನ್ನೂ ಮಿಸ್ ಮಾಡಿದ್ದಾರೆ ಅಂದರೆ ಬಿಜೆಪಿಯಿಂದ ಮಿಸ್ ಆಗ್ತಾರೆ ಅಂತಾನೇ ಅರ್ಥ ಅನ್ನೋದು ರಾಜಕೀಯದಲ್ಲಿ ನಡೆಯುತ್ತಿರುವ ಚರ್ಚೆ.