ಮಂಡ್ಯ: ಹಳೆ ಮೈಸೂರು ಭಾಗದ ಒಬ್ಬ ಎಂಎಲ್‌ಸಿ (ಸೈನಿಕ ಖ್ಯಾತಿಯ ಸಿ.ಪಿ. ಯೋಗೇಶ್ವರ್), ಬೆಳಗಾವಿಯ ಮಾಜಿ ಸಚಿವ (ಸಾಹುಕಾರ್ ಖ್ಯಾತಿ ರಮೇಶ್ ಜಾರಕಿಹೊಳಿ) ಮತ್ತು ಬಿಎಸ್‌ವೈ ಆಪ್ತ ಎನ್.ಆರ್ ಸಂತೋಷ್ ಅವರೇ ರಾಜ್ಯದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿ ಸರ್ಕಾರವನ್ನು ಉರುಳಿಸಲು (Operation Kamala) ಯತ್ನಿಸುತ್ತಿರುವವರು ಎಂದು ಮಂಡ್ಯ ಶಾಸಕ ರವಿ ಗಣಿಗ (Mandya MLA Ravi Ganiga) ಎರಡನೇ ಹಂತದ ಕ್ಲೂ ನೀಡಿದ್ದಾರೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಈ ರೀತಿಯ ಪ್ರಯತ್ನ ನಡೆಸುತ್ತಿರುವುದು ನಿಜ. ಆದರೆ, ಅದು ಫಲಿಸುವುದಿಲ್ಲ ಎಂದಿದ್ದಾರೆ. ಗಣಿಗ ಅವರು ಮೂವರು ನಾಯಕರ ಹೆಸರನ್ನು ನೇರವಾಗಿ ಹೇಳಲಿಲ್ಲ, ಸೂಚ್ಯವಾಗಿ ಹೇಳಿದರು.
ಮಂಡ್ಯ ಶಾಸಕ ರವಿ ಗಣಿಗ ಅವರು ಶುಕ್ರವಾರ ದಾವಣಗೆರೆಯಲ್ಲಿ ಮಾತನಾಡಿ, ಹಲವಾರು ಶಾಸಕರಿಗೆ ಆಫರ್‌ಗಳು ಬರುತ್ತಿರುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ಅಮಿತ್ ಶಾ ಅವರನ್ನು ಮೀಟ್ ಮಾಡಿಸುವುದು, ಮಂತ್ರಿ ಸ್ಥಾನ, ಐವತ್ತು ಕೋಟಿ ರೂ. ಚರ್ಚೆ ನಡೆದಿದೆ. ಆದರೆ, ಈಗ ಮಾತನಾಡಿದವರು ಯಾರೂ ಪಕ್ಷ ಬಿಟ್ಟು ಹೋಗುವವರಲ್ಲ ಎಂದು ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ರವಿ ಗಣಿಗ ಅವರು ತಮ್ಮ ಶನಿವಾರ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.
ನನಗಿರುವ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಕೊಟ್ಟಿದ್ದೇನೆ
ʻʻನಿನ್ನೆ ಹೇಳಿದ್ದನ್ನು ಮತ್ತೆ ರಿಪೀಟ್ ಮಾಡಲು ನಂಗೆ ಇಷ್ಟ ಇಲ್ಲ. ಆದರೆ, ಶಾಸಕರನ್ನು ಸೆಳೆಯಲು ಪ್ರಯತ್ನ ಪಡುತ್ತಿರೋದಕ್ಕೆ ಸಾಕ್ಷಿ ಇದೆ. ನಮ್ಮ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಾ ಹೇಳಿದ್ದಾರೆ, ಮೂರು ಅಲ್ಲ ಇನ್ನೂ ದೊಡ್ಡ ದೊಡ್ಡ ನಾಯಕರು ಇದಾರೆ ಅಂತಾ. ನನ್ನ ಬಳಿ ಇರೋ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳ್ತೀನಿ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರುತ್ತೇನೆʼʼ ಎಂದು ಮಂಡ್ಯದಲ್ಲಿ ರವಿ ಗಣಿಗ ಹೇಳಿದರು.
ʻʻಒಂದು ವೇಳೆ ನನಗೆ ಆಫರ್ ನೀಡಲು ಬಂದಿದ್ದರೆ ಲೈವ್ ಮಾಡಿ ತೋರಿಸುತ್ತಾ ಇದ್ದೆʼʼ ಎಂದು ಹೇಳಿದ ರವಿ ಗಣಿಗ, ʻʻನಮ್ಮ ಶಾಸಕರ ಬಳಿ ಮಾತಾಡಿ 50 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಗೆ ಬಂದ್ರೆ ಮಂತ್ರಿಗಿರಿ ಕೊಡ್ತೀವಿ ಅಂತನೂ ಹೇಳಿದ್ದಾರೆ.ʼʼ ಎಂದು ವಿವರಿಸಿದರು.
ಗೋಲ್ಡ್ ಫಿಂಚ್‌ನಲ್ಲಿ ಶಾಸಕರ ಜತೆ ಮೀಟಿಂಗ್
ʻʻಎನ್.ಆರ್ ಸಂತೋಷ್ ಅವರು ಪಕ್ಷಕ್ಕೆ ಕರೆದಿರೋದು ಬೇರೆ ವಿಚಾರ ಅಂತಾ ಹೇಳಿದಾರೆ. ಪಕ್ಷ ಕರೆದಿರೋದು ನಿಜ ಎಂದು ಅವರೆ ಒಪ್ಪಿಕೊಂಡಿದ್ದಾರೆ. ಐವತ್ತು ಕೋಟಿ ಆಫರ್, ಮಂತ್ರಿಗಿರಿ ಕೊಡ್ತೀವಿ ಅಂದಿದ್ದು ಮತ್ಯಾಕೆʼʼ ಎಂದು ಅವರು ಪ್ರಶ್ನಿಸಿದರು.
ʻʻಹಳೆ ಮೈಸೂರು ಭಾಗದ ಒಬ್ಬ ಎಂಎಲ್‌ಸಿ, ಬೆಳಗಾವಿಯ ಮಾಜಿ ಸಚಿವ, ಸಂತೋಷ್ ಗೋಲ್ಡ್ ಫಿಂಚ್‌ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದ್ದಾರೆ. ಎರಡು ದಿನದ ಬಳಿಕ ನಾನು ಸಿಎಂ ಡಿಸಿಎಂ ಜೊತೆ ಮಾತಾಡಿ ಮಾಧ್ಯಮದ ಮುಂದೆ ಬರುತ್ತೇನೆ. ಎಲ್ಲಿ ಏನು ಮಾತಾಡಿದ್ದಾರೆ ಎಂಬ ಸಾಕ್ಷಿಯನ್ನು ಅತೀ ಶೀಘ್ರದಲ್ಲಿ ಬಿಡುತ್ತೇವೆʼʼ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಬಲೆ ಹಾಕಲು ಬಿಜೆಪಿ ಪ್ಲ್ಯಾನ್
ʻʻಸದ್ಯಕ್ಕೆ ಐದು ಜನಕ್ಕೆ ಆಫರ್ ಬಂದಿದೆ. ಕರ್ನಾಟಕದ ಎಲ್ಲಾ ಕಡೆ ಬಲೆ ಹಾಕಲು ಹೊರಟಿದ್ದಾರೆ. ಒಬ್ಬರ ಮುಂದೆ ಕೂತು ಇನ್ನೊಬ್ಬರಿಗೆ ಸ್ಪೀಕರ್ ಹಾಕಿ ಮಾತಾಡಿದ್ದಾರೆ. ಯಾರಿಗೆ ಆಫರ್ ಕೊಟ್ಟಿದ್ದಾರೆಯೋ ಆ ಶಾಸಕರ ಜೊತೆ ಮಾಧ್ಯಮದ ಮುಂದೆ ಬರುತ್ತೇವೆʼʼ ಎಂದು ರವಿ ಗಣಿಗ ಹೇಳಿದರು.
ʻʻಬಿಜೆಪಿ ಗಾಳಕ್ಕೆ 50 ಅಲ್ಲ 100 ಕೋಟಿ ಕೊಟ್ರು ಕಾಂಗ್ರೆಸ್ ಶಾಸಕರು ಬೀಳಲ್ಲʼʼ ಎಂದು ರವಿ ಗಣಿಗ ಹೇಳಿದರು.
ಸಿಎಂ ಅಧಿಕಾರ ಹಂಚಿಕೆ ವಿಚಾರದಲ್ಲಿ ನಾನು ಏನೂ ಮಾತನಾಡಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳಿದರು. ನಾನು 136 ಜನ ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಜೊತೆ ಇದ್ದಾರೆ ಎಂದಿದ್ದೇನೆ. ಅಧಿಕಾರ ಹಂಚಿಕೆಗೆ ಸಂಬಂಧಿಸಿ ಹೈಕಮಾಂಡ್ ಏನು ಹೇಳಿದೆಯೋ ಗೊತ್ತಿಲ್ಲ. ಸಿಎಂ ಮಾಡುವಾಗ ಮಾಡೇ ಮಾಡ್ತಾರೆ ಎಂತಾ ನಾನು ಹೇಳಿದ್ದೇನೆ ಅಷ್ಟೇʼʼ ಎಂದು ಎರಡೂವರೆ ವರ್ಷದ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Karnataka Politics: ಡಿಕೆಶಿ ಹೊರಗಿಟ್ಟು ಕೈ ನಾಯಕರ ಡಿನ್ನರ್ ಪಾಲಿಟಿಕ್ಸ್; ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ
ಬಿಜೆಪಿ ಷಡ್ಯಂತ್ರ ಫಲಿಸಲ್ಲ: ಡಿ.ಕೆ. ಶಿವಕುಮಾರ್
“ಸರ್ಕಾರ ಬೀಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರ ಫಲಿಸುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಹೈದೆರಾಬಾದ್ ಗೆ ಶನಿವಾರ ತೆರಳುವ ಮೊದಲು ಸದಾಶಿವನಗರ ನಿವಾಸದ ಬಳಿ, ಮಂಡ್ಯದ ಶಾಸಕ ರವಿ ಗಣಿಗಾ ಅವರ ಬಿಜೆಪಿಯ ಆಮಿಷದ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. “ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಇದ್ದಾರೆ. ಆದರೆ ಇದರಿಂದ ಏನೂ ಆಗುವುದಿಲ್ಲ” ಎಂದು ತಿಳಿಸಿದರು.
ಸರ್ಕಾರ ಅತಂತ್ರಗೊಳಿಸುವ ಪ್ರಯತ್ನ ನಿಜ ಎಂದ ಸಿದ್ದರಾಮಯ್ಯ
ಈ ನಡುವೆ ಉಡುಪಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ವಿಚಾರವನ್ನು ರವಿ ಗಣಿಗ ಬಳಿಯೇ ಕೇಳಿ ಎಂದರು. ಆದರೆ, ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ. ಬಿಜೆಪಿಯವರು ಈ ಪ್ರಯತ್ನದಲ್ಲಿ ಸಫಲ ಆಗಲ್ಲ ಎಂದರು.
ʻʻಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಒಮ್ಮೆ ಆಪರೇಷನ್ ಕಮಲ ಮಾಡಿ ಸಕ್ಸಸ್ ಆಗಿರಬಹುದು. ಆದರೆ ಯಾವಾಗಲೂ ಹಾಗೆ ಆಗುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ʻʻಬಿಜೆಪಿಯವರಿಗೆ ಅಧಿಕಾರದ ದಾಹ ಜೋರಾಗಿದೆ. ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆʼʼ ಎಂದರು. ʻʻನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗಲ್ಲʼʼ ಎಂದರು ಸಿದ್ದರಾಮಯ್ಯ.