ಬೆಳಗಾವಿ: ನಮಗೆ ಕಾಂಗ್ರೆಸ್ ಮೇಲೆ ಯಾವುದೇ ಸಿಟ್ಟಿರಲಿಲ್ಲ. ಡಿ.ಕೆ. ಶಿವಕುಮಾರ್ (DK Shivakumar) ಅವರ ಸೊಕ್ಕಿನ ಧೋರಣೆಗಾಗಿಯೇ ಮೈತ್ರಿ ಸರ್ಕಾರ ಕೆಡವಿದ್ದೆವು; ಹೀಗೆಂದು 2019ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವನ್ನು (JDS-Congress Coalition Government) ಪತನಗೊಳಿಸಿದ ಆಪರೇಷನ್ ಕಮಲದ (Operation Kamala) ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi). ಜತೆಗೆ ಈ ಬಾರಿಯೂ ಬೆಳಗಾವಿಯಿಂದಲೇ ಸರ್ಕಾರದ ಪತನ (Government Collapse) ಆರಂಭಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಆಪರೇಷನ್ ಕಮಲ ನಡೆಸಲು ಸಂಚು ನಡೆಸುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಯ ಆಪರೇಷನ್‌ನ ರೂವಾರಿಗಳಲ್ಲಿ ಒಬ್ಬರಾಗಿರುವ ರಮೇಶ್ ಜಾರಕಿಹೊಳಿ ಹೇಳಿಕೆ ಮಹತ್ವ ಪಡೆದಿದೆ.
ಇದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಲು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ ಅವರು, ಡಿಕೆಶಿ ನಾಟಕ ಮಂಡಳಿ ನಿತ್ಯ ಆಪರೇಷನ್ ಮಾಡುತ್ತಿರುವ ಬಗ್ಗೆ ಮಾತನಾಡುತ್ತಿದೆ. ಆದರೆ, ಹಿಂದೆ ಕೂಡಾ ಬಿಜೆಪಿ ನಮ್ಮನ್ನು ಆಪರೇಷನ್ ಮಾಡಿರಲಿಲ್ಲ. ಮೈತ್ರಿ ಸರ್ಕಾರವನ್ನು ಕೆಡಹುವುದಕ್ಕಾಗಿ ನಾವೇ ಬಿಜೆಪಿ ಸೇರಿದೆವು ಎಂದು ಹೇಳಿದರು.
ʻʻಡಿಕೆಶಿ ಸೊಕ್ಕಿನ ಧೋರಣೆಗಾಗಿ ಮೈತ್ರಿ ಸರ್ಕಾರ ಕೆಡವಿದ್ದೇವೆ. ಆಗ ನಮಗೆ ಕಾಂಗ್ರೆಸ್ ಮೇಲೆ ಸಿಟ್ಟಿರಲಿಲ್ಲ, ಡಿಕೆಶಿ ವಿರುದ್ಧ ಸಿಟ್ಟಿಗೆ ಸರ್ಕಾರದ ಕೆಡವಿದೆವುʼʼ ಎಂದು ಹೇಳಿದರು ರಮೇಶ್ ಜಾರಕಿಹೊಳಿ. ಎಲ್ಲಿವರೆಗೆ ಡಿ.ಕೆ ಶಿವಕುಮಾರ್ ಸರ್ಕಾರದಲ್ಲಿ ಇರುತ್ತಾರೋ ಅಲ್ಲಿವರೆಗೆ ಸರ್ಕಾರಕ್ಕೆ ಡೇಂಜರ್ ತಪ್ಪಿದ್ದಲ್ಲ ಎಂದರು.
ʻʻಆಗ ಬಿಜೆಪಿಯೇನೂ ನಮ್ಮನ್ನು ಆಪರೇಷನ್ ಮಾಡಿರಲಿಲ್ಲ. ನಾವೇ ಮೈತ್ರಿ ಸರ್ಕಾರದ ಕೆಡವಲು ಬಿಜೆಪಿ ಸೇರಿದೆವು. ಈಗ ಬಿಜೆಪಿ ಹೆಸರು ಕೆಡಿಸಲು ಡಿಕೆಶಿ ನಾಟಕ ಮಂಡಳಿ ಹೆಣಗಾಡುತ್ತಿದೆʼʼ ಎಂದು ಹೇಳಿದರು.
ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ
ʻʻಸುಳ್ಳು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲ ರಂಗದಲ್ಲೂ ಫೇಲ್ ಆಗಿದೆ. ಈಗ ಅದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಮೇಲೆ ಆಪಾದನೆ ಮಾಡುತ್ತಿದೆʼʼ ಎಂದು ಹೇಳಿದ ಅವರು, ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರಲ್ಲ ಎಂದೂ ಪ್ರಶ್ನಿಸಿದರು.
ಡಿಕೆಶಿ ಇರುವ ಸರ್ಕಾರ ಯಾವಾಗಲೂ ಡೇಂಜರ್
ʻʻಡಿಕೆಶಿ ಅಧಿಕಾರ ಇದ್ದಾಗ ಒಂದು ರೀತಿಯಾಗಿರುತ್ತಾರೆ, ಪ್ರತಿಪಕ್ಷದಲ್ಲಿದ್ದಾಗ ಒಂದು ರೀತಿ ಇರುತ್ತಾರೆ. ಡಿಕೆಶಿ ಇರುವ ಸರ್ಕಾರ ಯಾವಾಗಲೂ ಡೇಂಜರ್ʼʼ ಎಂದು ಹೇಳಿದ ಅವರು, ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನವಾಗಲಿದೆ. ಮತ್ತೊಮ್ಮೆ ಸರಕಾರ ಪತನವಾಗಲು ಬೆಳಗಾವಿಯೇ ಕಾರಣವಾಗಲಿದೆʼʼ ಎಂದರು.
ಇದನ್ನೂ ಓದಿ: Operation Kamala : ಸಾಹುಕಾರ್, ಸೈನಿಕ, ಸಂತೋಷ್ ಸೂತ್ರಧಾರರು; ಶೀಘ್ರವೇ ಸಾಕ್ಷ್ಯ ಎಂದ ಗಣಿಗ
ಡಿ.ಕೆ. ಶಿವಕುಮಾರ್ ಬಹುದೊಡ್ಡ ಸಿ.ಡಿ ಮಾಸ್ಟರ್
ʻʻಡಿಕೆಶಿ ಸಿಡಿ ಮಾಸ್ಟರ್, ಅದೇ ಅವರ ಶಕ್ತಿ. ಸಿಡಿ ಇಟ್ಟುಕೊಂಡೇ ಡಿಕೆಶಿ ರಾಜಕಾರಣ ಮಾಡುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಡಿಕೆಶಿ ಅವರು ನೆಲಮಂಗಲ ನಾಗರಾಜ್ ಅವರ ಸಿಡಿ ಇಟ್ಟುಕೊಂಡು ಬೆದರಿಸ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಹೇಳಿಕೆಗೆ ಮಹತ್ವ
ರಮೇಶ್ ಜಾರಕಿಹೊಳಿ ಅವರು ಈ ಹಿಂದಿನ ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಬಾರಿಯೂ ಸಕ್ರಿಯರಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಈ ಬಾರಿ ಅವರು ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗೆಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ನಲ್ಲಿ ಹಿಂಸೆ ಆಗುತ್ತಿದೆ ಎಂದು ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರಿಗೆ ಡಿ.ಕೆ. ಶಿವಕುಮಾರ್ ಅವರ ಮೇಲೆ ಸಿಟ್ಟಿದೆ ಎನ್ನಲಾಗಿದೆ. ಒಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳೆಸುವುದು, ಇನ್ನೊಂದು ಕಡೆ ತಮ್ಮ ಲೋಕೋಪಯೋಗಿ ಖಾತೆಯಲ್ಲಿ ಅಡ್ಡಗಾಲು ಹಾಕುವುದು ಎರಡೂ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೂ ಡಿ.ಕೆ. ಶಿವಕುಮಾರ್ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಜಗಳ ಉಂಟಾಗಿತ್ತು. ಇದೀಗ ಅದೇ ಅನುಭವ ಸತೀಶ್ ಜಾರಕಿಹೊಳಿ ಅವರಿಗೂ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬೆಳಗಾವಿಯಿಂದಲೇ ರಾಜ್ಯ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಮಹತ್ವ ಪಡೆದಿದೆ.