Site icon Vistara News

BY Vijayendra : ಒಂದೇ ವಾರದೊಳಗೆ ಶಾಸಕಾಂಗ ಪಕ್ಷ ನಾಯಕನ ಆಯ್ಕೆ; ವಿಜಯೇಂದ್ರ ಘೋಷಣೆ

BY Vijayendra

BY VIjayendra To Take Charge As Karnataka BJP President; Who Will Miss The Programme?

ಬೆಂಗಳೂರು: ಮುಂದಿನ ಶುಕ್ರವಾರದ ಒಳಗೆ ಬಿಜೆಪಿ ಶಾಸಕಾಂಗ ಪಕ್ಷ ನಾಯಕನ (Opposition leader in Assembly) ಆಯ್ಕೆ ನಡೆಯಲಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ (BJP State President) ಬಿ.ವೈ ವಿಜಯೇಂದ್ರ (BY Vijayendra) ಅವರು ಘೋಷಿಸಿದ್ದಾರೆ. ಹೈಕಮಾಂಡ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಮೊದಲ ಬಾರಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಈ ವಿಚಾರವನ್ನು ತಿಳಿಸಿದರು

ಚುನಾವಣೆ ನಡೆದು ಐದು ತಿಂಗಳಾದರೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯದೆ ಪಕ್ಷದ ನಾಯಕರು ಭಾರಿ ಮುಜುಗರ ಎದುರಿಸುತ್ತಿದ್ದರು. ಇದೀಗ ರಾಜ್ಯಾಧ್ಯಕ್ಷರ ಜತೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೂ ಮುಹೂರ್ತ ಫಿಕ್ಸ್‌ ಆದಂತಾಗಿದೆ.

ತಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಹೈಕಮಾಂಡ್‌ ನಾಯಕರಿಗೆ ಧನ್ಯವಾದ ತಿಳಿಸಿರುವ ಬಿವೈ ವಿಜಯೇಂದ್ರ ಅವರು ತಮ್ಮ ಮುಂದಿನ ಹೆಜ್ಜೆಗಳನ್ನು ವಿವರಿಸಿದ್ದಾರೆ.

ನಮ್ಮ ಪ್ರಥಮ ಆದ್ಯತೆ ಮುಂದಿನ ಲೋಕಸಭಾ ಚುನಾವಣೆ. ಇದು ತುಂಬ ಸವಾಲಿನ ಕೆಲಸ. ಈ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದಾರೆ. ಅದನ್ನು ನಿಭಾಯಿಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: BY Vijayendra: ಚತುರ ಸಂಘಟಕ, ನಿಪುಣ ರಾಜಕೀಯ ತಂತ್ರಗಾರ ಬಿ ವೈ ವಿಜಯೇಂದ್ರ

ಬಿಎಸ್‌ವೈ ಮಗ ಎಂದು ಈ ಅವಕಾಶ ಕೊಟ್ಟಿಲ್ಲ ಎಂದ ಬಿವೈ ವಿಜಯೇಂದ್ರ

ನಾನು ಯಡಿಯೂರಪ್ಪ ಎಂಬುವರ ಮಗ ಅನ್ನೋದಕ್ಕೆ ಹೆಮ್ಮೆ ಇದೆ. ನಾವೆಲ್ಲರೂ ಸೇರಿ ಯಡಿಯೂರಪ್ಪನವರ ಹಾದಿಯಲ್ಲಿ ಕೆಲಸ‌ ಮಾಡುತ್ತೇವೆ ಎಂದು ಹೇಳಿರುವ ಬಿವೈ ವಿಜಯೇಂದ್ರ ಅವರು, ನಾನು ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕಾಗಿ ಸ್ಥಾನ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ಪಕ್ಷದ ಹಿರಿಯ ನಾಯಕರು ಗುರುತಿಸಿ ಜವಾಬ್ದಾರಿ ಕೊಟ್ಟಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕೆಲಸ‌ ಮಾಡ್ತೇನೆ ಎಂದು ಹೇಳಿದರು.

ಮುಂದಿನ ಶುಕ್ರವಾರದೊಳಗೆ ವಿಪಕ್ಷ ನಾಯಕನ ಆಯ್ಕೆ

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಯಿತು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿದ ವಿಜಯೇಂದ್ರ ಅವರು, ಮುಂದಿನ ಶುಕ್ರವಾರದೊಳಗೆ ಈ ಆಯ್ಕೆ ನಡೆಯಲಿದೆ ಎಂದರು.

ಮುಂದಿನ ಶುಕ್ರವಾರದ ಒಳಗೆ ಶಾಸಕಾಂಗ ಸಭೆ ಕರೆದು ವಿರೋಧ ಪಕ್ಷದ ನಾಯಕ ಯಾರು ಆಗಬೇಕೆಂಬ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕೇಂದ್ರದಿಂದ ವೀಕ್ಷಕರು ಆಗಮಿಸಲಿದ್ದಾರೆ. ಅವರ ಸಹಕಾರದಲ್ಲಿ ಈ ಆಯ್ಕೆ ನಡೆಯಲಿದೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: BY Vijayendra : ರಾಜ್ಯ ಬಿಜೆಪಿಗೆ ಇನ್ನು ಬಿ ವೈ ವಿಜಯೇಂದ್ರ ಸಾರಥ್ಯ; ಆಯ್ಕೆಗೆ 10 ಕಾರಣಗಳು

ಒಕ್ಕಲಿಗ ಇಲ್ಲವೇ ಒಬಿಸಿಯಿಂದ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಒಂದೋ ಒಕ್ಕಲಿಗ ಸಮುದಾಯದ ನಾಯಕರು ಇಲ್ಲವೇ ಇತರ ಹಿಂದುಳಿದ ವರ್ಗಗಳ ನಾಯಕರ ಆಯ್ಕೆ ನಡೆಯಬಹುದು ಎಂಬ ಅಭಿಪ್ರಾಯವಿದೆ. ಯಾರಿಗೆ ಅವಕಾಶ ಸಿಗಬಹುದು ಎಂಬ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ.

ವಿಜಯೇಂದ್ರ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಖಚಿತ ನಿಲುವನ್ನು ಮಾಧ್ಯಮದ ಮುಂದೆ ಹೇಳಿದ್ದು ಕೂಡಾ ಚರ್ಚೆಗೆ ಕಾರಣವಾಗಿದೆ. ಅಂದರೆ ಅವರು ಪಕ್ಷದಲ್ಲಿ ಗಟ್ಟಿ ಹಿಡಿತವನ್ನು ಹೊಂದುವುದು ಖಚಿತ ಎಂಬುದಕ್ಕೆ ಇದು ಉದಾಹರಣೆ ಎಂದು ವಿಶ್ಲೇಷಿಸಲಾಗಿದೆ.

Exit mobile version