ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಮಳೆ (Rain News) ಕಡಿಮೆಯಾಗುತ್ತಿದೆ. ನಿರೀಕ್ಷೆ ಸಹ ಹುಸಿಯಾಗುತ್ತಿದೆ. ಮಳೆ ಬೀಳಬೇಕಾದ ಪ್ರದೇಶಗಳಲ್ಲಿ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ಹೀಗಾಗಿ ರೈತರ ಸಹಿತ ನಾಗರಿಕರು ಕಂಗೆಟ್ಟಿದ್ದಾರೆ. ಒಂದು ಕಡೆ ಇಳುವರಿ ಇಲ್ಲ, ಇನ್ನೊಂದು ಕಡೆ ನೀರಿಗೆ ಹಾಹಾಕಾರ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಜತೆಗೆ ರಾಜ್ಯದಲ್ಲಿ ಹಸಿರು ಬರ (Green drought) ಕಾಣಿಸಿಕೊಂಡಿದೆ. ಈಗ ರಾಜ್ಯ ಸರ್ಕಾರದಿಂದ (State Government) ಮತ್ತೊಂದು ಸುತ್ತಿನ ಬರ ಪಟ್ಟಿ ಬಿಡುಗಡೆಯಾಗಿದ್ದು, ನಿಜಕ್ಕೂ ಆತಂಕವನ್ನು ಹುಟ್ಟುಹಾಕಿದೆ. ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ ತುತ್ತಾಗುತ್ತದೆಯೇ (Drought in Karnataka) ಎಂಬ ಭಯ ಕಾಡಲಾರಂಭಿಸಿದೆ. ಕೇಂದ್ರ ಸರ್ಕಾರದ ಬರ ಮಾನದಂಡಗಳ (Central Government drought criteria) ಅನುಸಾರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ರಾಜ್ಯ ಸರ್ಕಾರ ಹೇಳಿಕೊಂಡಿದ್ದು, ಹೆಚ್ಚುವರಿಯಾಗಿ 21 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಿದೆ. ಅಲ್ಲದೆ, 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದರ ಅನುಸಾರ ಈಗಾಗಲೇ ಘೋಷಣೆಯಾಗಿರುವ 161 ಬರಪೀಡಿತ ತಾಲೂಕುಗಳ ಪಟ್ಟಿಗೆ ಹೆಚ್ಚುವರಿಯಾಗಿ 21 ತಾಲೂಕುಗಳ ಸೇರ್ಪಡೆಯಾಗಿದೆ. ಅಂದರೆ ಒಟ್ಟು 182 ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಣೆಯಾದಂತೆ ಆಗಿದೆ. ಇನ್ನು 22 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಇರುವ 236 ತಾಲೂಕುಗಳ ಪೈಕಿ 208 ತಾಲೂಕುಗಳು ಈಗ ಬರಕ್ಕೆ ಒಳಗಾಗಿವೆ. ಅಂದರೆ, ಈಗ ಬರದಿಂದ ಬಾಕಿ ಉಳಿದಿರುವುದು ಕೇವಲ 28 ತಾಲೂಕುಗಳು ಮಾತ್ರ! ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಈ ಆದೇಶವನ್ನು ಹೊರಡಿಸಿದ್ದಾರೆ.
ಹೆಚ್ಚುವರಿ ಬರಪೀಡಿತ ತಾಲೂಕುಗಳು
ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ.
ಇದನ್ನೂ ಓದಿ: Power Point with HPK : ಮುಂದಿನ ವರ್ಷಕ್ಕೆ 600 ಕೆಪಿಎಸ್ ಶಾಲೆ; ಮಕ್ಕಳಿಗೆ ತಗ್ಗಲಿದೆ ಬ್ಯಾಗ್ ಹೊರೆ!
ಸಾಧಾರಣ ಬರಪೀಡಿತ ತಾಲೂಕುಗಳು
ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ,ನರಸಿಂಹರಾಜಪುರ, ಶೃಂಗೇರಿ, ಮಂಗಳೂರು, ಮೂಡಬಿದರೆ, ಬ್ರಹ್ಮಾವರ, ಕಾರವಾರ ತಾಲೂಕುಗಳು ಸಾಧಾರಣ ಬರಪೀಡಿತವಾಗಿವೆ ಎಂದು ಸರ್ಕಾರ ಘೋಷಣೆ ಮಾಡಿದೆ.