Site icon Vistara News

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

CM Janatha Darshana solved mysore citizens problem

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಎರಡನೇ ಅವಧಿಯ ಸಿಎಂ ಆದ ಬಳಿಕ ಮೊದಲ ಜನತಾ ದರ್ಶನ (Janatha Darshan) ಸೋಮವಾರ ಆರಂಭಗೊಂಡಿದ್ದು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದ್ದಾರೆ. ಕಚೇರಿಯಾದ (CM Home office) ಕೃಷ್ಣಾದಲ್ಲಿ ಆರಂಭಗೊಂಡ ಈ ಜನತಾ ದರ್ಶನದಲ್ಲಿ ಸಾವಿರಾರು ಮಂದಿ ತಮ್ಮ ಅಹವಾಲು ಹಿಡಿದುಕೊಂಡು ಸಿಎಂ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಸ್ಥಳದಲ್ಲೇ ಹಾಜರಿದ್ದು ಕುಂದುಕೊರತೆಗಳುಳ್ಳ ಅಹವಾಲುಗಳ ಮೇಲೆ ಕ್ರಮವಹಿಸಲು ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಅಂತಹ ಸಮಸ್ಯೆಗಳ ಇತ್ಯರ್ಥಪಡಿಸಿದ ಪ್ರಕರಣಗಳ ವರದಿಯನ್ನು ನೀಡಲಾಗಿದೆ.

ಕಂಗೆಟ್ಟ ಕುಟುಂಬದ ರಕ್ಷಣೆಗೆ ಸಿಎಂ!

ಮೈಸೂರಿನಲ್ಲಿ ಕುಟುಂಬವೊಂದು ಮನೆಯನ್ನು ಲೀಸ್‌ಗೆ ಪಡೆದು ವಾಸವಾಗಿತ್ತು. ಆದರೆ, ಮನೆ ಮಾಲೀಕ ಸಾಲ ಮಾಡಿ ಕಟ್ಟಲಾಗದೆ ನಾಪತ್ತೆಯಾಗಿದ್ದರಿಂದ ಬ್ಯಾಂಕ್‌ನವರು ಮನೆ ಜಪ್ತಿಗೆ ಬಂದಿದ್ದಾರೆ. ಈ ವೇಳೆ ಲೀಸ್‌ಗೆ ಕೊಟ್ಟ ಹಣದ ಕಥೆ ಏನು? ತಮಗೆ ಯಾರು ಗತಿ? ಕಷ್ಟಪಟ್ಟು ದುಡಿದ ಹಣ ಬಾರದೇ ಇದ್ದರೆ ಮುಂದಿನ ಜೀವನ ನಿರ್ವಹಣೆ ಹೇಗೆ? ಎಂಬಿತ್ಯಾದಿ ಪ್ರಶ್ನಾರ್ಥಕ ಚಿಹ್ನೆಯನ್ನೇ ಮುಖದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಜನತಾ ದರ್ಶನದಲ್ಲಿ ಭೇಟಿ ಮಾಡಿದವರಿಗೆ ಈಗ ಸಮಸ್ಯೆ ಇತ್ಯರ್ಥದ ಅಭಯ ಸಿಕ್ಕಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ.

ಏನಿದು ಸಮಸ್ಯೆ?

ಮೈಸೂರು ರಸ್ತೆಯ ಬ್ಯಾಟರಾಯನಪುರದ 3ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು ಇಂದಿನ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್‌ನವರು ಮನೆ ಜಪ್ತಿಗೆ ಬಂದಿದ್ದಾರೆ. ನಾವು ಲೀಸ್‌ಗೆ ಪಡೆದು ಮನೆಯಲ್ಲಿ ವಾಸವಿದ್ದೇವೆ. ಆದರೆ, ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿ ಮಾಡುವುದಾಗಿ ಹೇಳುತ್ತಿದ್ದಾರೆ. ನಮ್ಮ ಲೀಸ್ ಹಣವೂ ಹೋಗುತ್ತದೆ, ವಾಸಕ್ಕೆ ಮನೆಯೂ ಇಲ್ಲದಂತಾಗುತ್ತದೆ ಎಂದು ಕಷ್ಟ ಹೇಳಿಕೊಂಡರು.

ಇಲ್ಲಿದೆ ಸಿಎಂ ಟ್ವೀಟ್‌

ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಪರಿಶೀಲಿಸುವಂತೆ ಸೂಚಿಸಿದರು. ಪೊಲೀಸ್ ಆಯುಕ್ತ ದಯಾನಂದ್ ಅವರು ಸಮಗ್ರವಾಗಿ ಸಮಸ್ಯೆ ಕೇಳಿಸಿಕೊಂಡು ಶೀಘ್ರ ಇತ್ಯರ್ಥಪಡಿಸುವಂತೆ ಡಿಸಿಪಿ ಅವರಿಗೆ ಸೂಚಿಸಿದರು. ಈ ಮೂಲಕ ಭವಿಷ್ಯದಲ್ಲಿ ಎದುರಾಗುತ್ತಿದ್ದ ಅತಂತ್ರತೆಯಿಂದ ಕುಟುಂಬವನ್ನು ಪಾರು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಟ್ವಿಟರ್‌ ಖಾತೆಯಲ್ಲಿ (ಸೋಷಿಯಲ್‌ ಮೀಡಿಯಾ ಎಕ್ಸ್‌) ಮಾಹಿತಿ ನೀಡಲಾಗಿದೆ.

Exit mobile version