Site icon Vistara News

Panchamasali Reservation : ಪಂಚಮಸಾಲಿಗಳಿಗೆ ಸದ್ಯಕ್ಕಿಲ್ಲ 2ಎ ಮೀಸಲಾತಿ ಗಿಫ್ಟ್; ಹಾಗಿದ್ದರೆ ಯಾವಾಗ?

Panchamasali reservation Jayaprakash Hegde

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ (Panchamasali Community) ಸದ್ಯಕ್ಕೆ 2ಎ ಮೀಸಲಾತಿ (2A Reservation) ಸಿಗುವ ಸಾಧ್ಯತೆಗಳಿಲ್ಲ. ಯಾಕೆಂದರೆ, 2ಎ ಮೀಸಲಾತಿ ನೀಡಿಕೆ ಸಂಬಂಧ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳಿದ್ದು, ಅವುಗಳು ಇತ್ಯರ್ಥವಾಗಬೇಕು. ಈ ವಿಚಾರವನ್ನು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್‌ ಹೆಗ್ಡೆ (K Jayaprakash Hegde) ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಅವರು, ಆ ಎರಡು ಅರ್ಜಿಗಳು ಇತ್ಯರ್ಥವಾಗದ ಹೊರತು 2ಎ ಮೀಸಲಾತಿ ಸಿಗುವುದಿಲ್ಲ ಎಂದು ಹೇಳಿದರು, ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ವಿವರಿಸಿದರು.

ʻʻಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವ ಸಂಬಂಧ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಂಕಿ ಅಂಶಗಳನ್ನು ಸಂಗ್ರಹ ಮಾಡಿದ್ದೇನೆ. ಆದರೆ, 2ಎದಲ್ಲಿ ಬರುವ ವ್ಯಕ್ತಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಿದರು. ಪಂಚಮಸಾಲಿಗಳನ್ನು 2ಎಗೆ ಸೇರಿಸಬಾರದು ಎಂದು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 2ಎಗೆ ಸೇರಿಸಲ್ಲ ಎಂದು ಒಪ್ಪಿಕೊಂಡಿದೆ ಎಂದು ವಿವರಿಸಿದರು.

ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾವು ಕೂಡಾ ಆ ವಿಚಾರದಲ್ಲಿ ಮುಂದುವರಿಯಲ್ಲಿ ಎಂದು ಹೇಳಿರುವ ಜಯಪ್ರಕಾಶ್‌ ಹೆಗ್ಡೆ ಅವರು, ಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾದ ಬಳಿಕ ಸರ್ಕಾರಕ್ಕೆ ಪಂಚಮಸಾಲಿ ವಿಚಾರದಲ್ಲಿ ರಿಪೋರ್ಟ್ ಕೊಡುತ್ತೇವೆ ಎಂದರು.

ಮುಸ್ಲಿಮರಿಂದಲೂ ಸುಪ್ರೀಂಕೋರ್ಟ್‌ಗೆ ಅರ್ಜಿ

3ಬಿ ಪ್ರವರ್ಗವನ್ನು 2ಡಿ ಪ್ರವರ್ಗ ಮಾಡಿದ್ದರಿಂದ 3ಬಿಯಲ್ಲಿದ್ದವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ನಡುವೆ ಮುಸ್ಲಿಂ ಸಮುದಾಯ ತನ್ನ ಮೀಸಲಾತಿಗೆ ಕತ್ತರಿ ಹಾಕಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆಯೂ ಆಗಬೇಕಾಗಿದೆ. ಎರಡೂ ಅರ್ಜಿಗಳ ವಿಚಾರಣೆ ನಡೆದು ತೀರ್ಪು ಬರುವವರೆಗೆ ನಾವು ಕಾಯಬೇಕಾಗಿದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ.

ನಾನು ಮಾಡಿದ್ದು ಜಾತಿ ಗಣತಿ ಅಲ್ಲ ಎಂದ ಜಯಪ್ರಕಾಶ್‌ ಹೆಗ್ಡೆ

ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ನಾನು ಮಾಡಿರುವುದು ಜಾತಿ ಗಣತಿ ಅಲ್ಲ ಎಂದಿದ್ದಾರೆ ಕೆ. ಜಯಪ್ರಕಾಶ್‌ ಹೆಗ್ಡೆ. ಇದು ಆರ್ಥಿಕ ಮತ್ತು ಸಾಮಾಜಿಕ ವರದಿ ಎಂದಿದ್ದಾರೆ ಅವರು.

ʻʻಇದು ಜನಗಣತಿಯೂ ಅಲ್ಲ. ಕಾಂತರಾಜು ವರದಿಯೂ ಅಲ್ಲʼʼ ಎಂದು ಹೇಳಿದ ಜಯಪ್ರಕಾಶ್‌ ಹೆಗ್ಡೆ ಅವರು, ಅಂದು ಆರ್ಥಿಕ ಮತ್ತು ಸಾಮಾಜಿಕ ವರದಿ ಎಂದು ತಯಾರು ಮಾಡಿದ್ದಾರೆ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಇದೆ. ಈ ವರದಿಯಲ್ಲಿ ಜಾತಿ ಮತ್ತು ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಇದೆ. ಈ ವರದಿ ಅಂಗೀಕಾರವಾದರೆ ಸರ್ಕಾರದ ಸೌಲಭ್ಯಗಳನ್ನು ಕೊಡಲು ಅನುಕೂಲʼʼ ಎಂದರು.

ಇದನ್ನೂ ಓದಿ: Panchamasali Reservation: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ; ಸಚಿವೆ ಹೆಬ್ಬಾಳ್ಕರ್‌ ಮೂಲಕ ಸರ್ಕಾರಕ್ಕೆ ಮನವಿ

ಹಾಗಿದ್ದರೆ ವರದಿ ಮಂಡನೆ ಯಾವಾಗ?

ʻʻಈ ವರದಿಯಲ್ಲಿ ಜಾತಿಯ ಅಂಕಿಅಂಶಗಳು ಸಿಗುತ್ತವೆ. ಈ ವರದಿ ಕಾಂತರಾಜು – ಜಯಪ್ರಕಾಶ್ ಹೆಗ್ಡೆ ರಿಪೋರ್ಟ್ ಅಲ್ಲ. ಇದು ಹಿಂದುಳಿದ ವರ್ಗಗಳ ಆಯೋಗದ ರಿಪೋರ್ಟ್ ಅಷ್ಟೇ. ಅಂದು ಸಂಗ್ರಹ ಮಾಡಿದ ಅಂಕಿಅಂಶಗಳು ಈಗಾಗಲೇ ಲಭ್ಯವಿವೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದು ವರದಿ ಬರೆದ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ. ನವೆಂಬರ್ ತಿಂಗಳಲ್ಲಿ ರಿಪೋರ್ಟ್ ಕೊಡುತ್ತೇವೆ. ಬಹುಶಃ ನವೆಂಬರ್‌ 24ರೊಳಗೆ ವರದಿ ಮಂಡನೆ ಆಗಲಿದೆʼʼ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Exit mobile version