ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಪುತ್ತೂರು ಕ್ಷೇತ್ರದಿಂದ ಬಂಡುಕೋರನಾಗಿ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ಹಿಂದೂ ಸಂಘಟನೆ ನಾಯಕ ಅರುಣ್ ಕುಮಾರ್ ಪುತ್ತಿಲ (Arun Kumar puttila) ಮತ್ತೆ ಸಿಡಿದೆದ್ದಿದ್ದಾರೆ (Parliament Election 2024). ಇತ್ತೀಚೆಗೆ ಬಿಜೆಪಿ ನಾಯಕರ ಜತೆಗಿನ ಮಾತುಕತೆಯಲ್ಲಿ ಭಿನ್ನಮತ ಇತ್ಯರ್ಥವಾಗಿದೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ನಾಯಕರು ನೀಡಿದ ಭರವಸೆಗಳು ಈಡೇರಿಲ್ಲ ಎಂಬ ಕಾರಣಕ್ಕೆ ಅವರು ಸಿಡಿದು ನಿಂತಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ (Mangalore Constituency) ಪಕ್ಷೇತರನಾಗಿ ಕಣಕ್ಕಿಳಿಯಲು (Independent Candidate) ನಿರ್ಧರಿಸಿದ್ದಾರೆ.
ಗುರುವಾರ ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯನ್ನು ಘೋಷಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪರಿವಾರದ ನಾಯಕರು ಪ್ರಕಟಿಸಿದರು.
ಮಾತುಕತೆ ವಿಫಲವಾಗಿದ್ದೇ ಸ್ಪರ್ಧೆ ನಿರ್ಧಾರಕ್ಕೆ ಕಾರಣ
ಪುತ್ತೂರು ಕ್ಷೇತ್ರದ ಚುನಾವಣೆ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರು ಮುಂದೆ ಲೋಕಸಭಾ ಕಣಕ್ಕೂ ಪ್ರವೇಶಿಸಿ ಬಿಜೆಪಿಗೆ ಮುಜುಗರ ಉಂಟು ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅದರ ನಡುವೆ ಹಿರಿಯ ನಾಯಕರ ನಡುವೆ ಮಾತುಕತೆ ನಡೆದು ಕೆಲವೊಂದು ಷರತ್ತುಗಳೊಂದಿಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಪರಿವಾರ ನಿರ್ಧಾರ ಮಾಡಿತ್ತು. ಸ್ವತಃ ಅರುಣ್ ಕುಮಾರ್ ಪುತ್ತಿಲ ಅವರೇ ಇದನ್ನು ಪ್ರಕಟಿಸಿದ್ದರು.
ಬಿಜೆಪಿಯ ಪುತ್ತೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆಯಲ್ಲಿ ಪುತ್ತಿಲ ಪರಿವಾರದದವರಿಗೆ ಅವಕಾಶ ನೀಡಬೇಕು ಎನ್ನುವ ಪ್ರಮುಖ ಬೇಡಿಕೆ ಅವರದಾಗಿತ್ತು. ಇದೂ ಸೇರಿದಂತೆ ಕೆಲವು ಷರತ್ತುಗಳಿಗೆ ಬಿಜೆಪಿ ಒಪ್ಪಿತ್ತು ಎನ್ನಲಾಗುತ್ತಿದೆ. ಇದಾದ ಬಳಿಕ ಪುತ್ತಿಲ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಭೇಟಿಯಾಗಿದ್ದರು. ಆಗಲೂ ಕೆಲವೊಂದು ಬೇಡಿಕೆ, ಷರತ್ತುಗಳನ್ನು ಮುಂದಿಟ್ಟಿದ್ದರು. ಆದರೆ, ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲು ಪುತ್ತಿಲ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Arun Kumar puttila : ಬಿಜೆಪಿಯಲ್ಲಿ ವಿಲೀನವಾಯ್ತಾ ಪುತ್ತಿಲ ಪರಿವಾರ; ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್?
ಸವಾಲುಗಳನ್ನು ಎದುರಿಸುವ ಶಕ್ತಿ ಬಿಜೆಪಿಗೆ ಇದೆ ಎಂದ ನಳಿನ್ ಕುಮಾರ್ ಕಟೀಲ್
ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಅವರು ಮಂಗಳೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವ ಸುದ್ದಿಗೆ ಮಂಗಳೂರು ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ʻʻಪುತ್ತಿಲ ಪರಿವಾರ ಒಂದು ಸ್ವತಂತ್ರ ಸಂಸ್ಥೆ. ಆ ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆʼʼ ಎಂದು ಹೇಳುವ ಮೂಲಕ ಸ್ಪರ್ಧಿಸಲು ತಮ್ಮ ಆಕ್ಷೇಪವಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರ ಮನವೊಲಿಕೆಗೆ ಪಾರ್ಟಿ ಪ್ರಯತ್ನ ಮಾಡಿದೆ. ನಡೆಯುತ್ತಲೂ ಇದೆ ಎಂದು ಹೇಳಿದ ಅವರು, ʻʻಭಾಜಪಾ ಬಹಳ ವರ್ಷಗಳ ಹೋರಾಟದಿಂದ ಅತೀ ದೊಡ್ಡ ಪಾರ್ಟಿಯಾಗಿ ಬೆಳೆದಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ್ನು ಎದುರಿಸಿ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದಿದೆ. ಪಕ್ಷಕ್ಕೆ ಎದಯರಾಳಿಯ ಪ್ರಶ್ನೆ ಇಲ್ಲʼʼ ಎಂದರು.
ʻʻಇದು ಪ್ರಜಾಪ್ರಭುತ್ವ, ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಪ್ರತೀ ಚುನಾವಣೆಗೆ ಬಂದಾಗ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆʼʼ ಎಂದು ಹೇಳಿದರು.
ʻʻರಾಮಮಂದಿರ ನಿರ್ಮಾಣವಾದ ಬಳಿಕ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಹಿಂದುತ್ವ, ರಾಷ್ಟ್ರವಾದ, ಅಭಿವೃದ್ಧಿ ವಿಚಾರವಾಗಿ ಜನ ಒಗ್ಗಟ್ಟಾಗುತ್ತಾರೆ. ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ. ಆಗಿನ ಸಮಸ್ಯೆ ಬೇರೆ. ಈಗಿನ ವಿಚಾರ ಬೇರೆ. ಈ ಬಾರಿಯ ಚುನಾವಣೆಯಲ್ಲೂ ಭಾರಿ ಗೆಲುವು ಸಾಧಿಸುತ್ತೇನೆʼʼ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಲೋಕಸಭಾ ಚುನಾವಣೆ ಸ್ಪರ್ಧೆಗೆ ಅವಕಾಶ ಕೊಡುವುದು ಬಿಡುವುದು ರಾಷ್ಟ್ರೀಯ ನಾಯಕರ ತೀರ್ಮಾನ. ಆ ತೀರ್ಮಾನಕ್ಕೆ ಕಾರ್ಯಕರ್ತನಾಗಿ ಬದ್ಧನಾಗಿದ್ದೇನೆʼʼ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಗೆಲುವಿಗೆ ಅಡ್ಡಗಾಲಾಗುತ್ತಾರಾ ಅರುಣ್ ಕುಮಾರ್ ಪುತ್ತಿಲ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೇ ಅರುಣ್ ಕುಮಾರ್ ಪುತ್ತಿಲ. ಬಿಜೆಪಿ ಟಿಕೆಟ್ ಕೇಳಿದ್ದ ಅವರನ್ನು ಪಕ್ಷ ಕಡೆಗಣಿಸಿತ್ತು. ಹೀಗಾಗಿ ಅವರು ಸ್ವತಂತ್ರವಾಗಿ ಕಣಕ್ಕಿಳಿದು ಎರಡನೇ ಸ್ಥಾನ ಪಡೆದಿದ್ದರು.
ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಶೋಕ್ ಕುಮಾರ್ ರೈ ಅವರು 66,607 ಮತಗಳನ್ನು ಪಡೆದು ಗೆದ್ದಿದ್ದರು. ಪಕ್ಷೇತರರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು 62,458 ಮತಗಳನ್ನು ಪಡೆದು ಪೈಪೋಟಿ ನೀಡಿದ್ದರು. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಅವರು ಕೇವಲ 37,558 ಮತಗಳಿಗೆ ಸೀಮಿತವಾಗಿದ್ದರು.
ಲೋಕಸಭಾ ಚುನಾವಣಾ ಕಣ ಹೇಗಿತ್ತು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು 2.74 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಳಿನ್ ಕುಮಾರ್ ಅವರು 7,74,285 ಮತಗಳನ್ನು ಪಡೆದರೆ ಅವರ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಮಿಥುನ್ ರೈ ಅವರಿಗೆ 4,99,664 ಮತಗಳು ಸಿಕ್ಕಿದ್ದವು.
ಈ ಬಾರಿ ನಳಿನ್ ಕುಮಾರ್ ಕಟೀಲ್ ಅವರಿಗೇ ಟಿಕೆಟ್ ನೀಡಿದರೆ ಸಣ್ಣ ಮಟ್ಟದ ಮತ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಮೋದಿ ಅವರ ಅಲೆ ಇದನ್ನು ಸರಿದೂಗಿಸುವ ಸಾಧ್ಯತೆ ಇದೆ. ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 2.5 ಲಕ್ಷ ಮತಗಳನ್ನು ಕಸಿದುಕೊಂಡರೆ ಅದು ಬಿಜೆಪಿಯ ಸೋಲಿಗೆ ಕಾರಣವಾಗುವ ಸಾಧ್ಯತೆ ಇದೆ. ಆದರೆ, ಅವರಿಗೆ ಅಷ್ಟು ಮತಗಳನ್ನು ಗಳಿಸುವ ಶಕ್ತಿ ಇದೆಯಾ ಎನ್ನುವುದು ಪ್ರಶ್ನೆಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಅವರು 62 ಸಾವಿರ ಮತಗಳನ್ನು ಪಡೆದಿದ್ದರು. ಅವರ ಪ್ರಭಾವ ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಮಾತ್ರ ಜೋರಾಗಿದೆ. ಇದನ್ನು ಮೀರಿ ಅವರು ಜನಪ್ರಿಯತೆಯನ್ನು ಗಳಿಸಿದರೆ ಅದು ಬಿಜೆಪಿಗೆ ಮುಳುವಾಗಬಹುದು ಎಂದು ಹೇಳಲಾಗುತ್ತಿದೆ.