Site icon Vistara News

Parliament Elections 2024 : 6 ಸಚಿವರಿಗೆ ಸಂಸತ್‌ ಚುನಾವಣೆ ಸ್ಪರ್ಧೆಯ ತೂಗುಗತ್ತಿ!

Karnataka Ministers for Parliament Elections

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಪಂಚ ರಾಜ್ಯಗಳ ಚುನಾವಣೆಯ ಬ್ಯೂಸಿ ನಡುವೆಯೂ ಲೋಕಸಭೆ ಚುನಾವಣೆಗೂ (Parliament Elections 2024) ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಚಾರದಲ್ಲಿ ವೀಕ್ಷಕರ ವರದಿ, ಸಮೀಕ್ಷೆ ಸೇರಿದಂತೆ ಹಲವು ಉಪಕ್ರಮಗಳು ನಡೆಯುತ್ತಿದೆ. ಅದರ ನಡುವೆ ಕೆಲವು ಕ್ಷೇತ್ರಗಳಲ್ಲಿ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ನಾಯಕರನ್ನು (Ministers in Lokasabha fray) ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಸಂಭಾವ್ಯ ಅಭ್ಯರ್ಥಿಗಳನ್ನು ಸೂಚಿಸಲು ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಸಚಿವರು, ಕಾಂಗ್ರೆಸ್‌ನ ಹಿರಿಯ ನಾಯಕರು ವೀಕ್ಷಕರಾಗಿದ್ದಾರೆ. ಅವರು ಸ್ಥಳೀಯ ಮಟ್ಟದಲ್ಲಿ ಎಲ್ಲರ ಜತೆಗೆ ಚರ್ಚೆ ನಡೆಸಿ ಯಾರೆಲ್ಲ ಆಕಾಂಕ್ಷಿಗಳು ಎಂಬುದನ್ನು ದಾಖಲಿಸಬೇಕು. ಯಾರು ಅಭ್ಯರ್ಥಿಗಳಾಗಬಹುದು ಎಂಬ ವಿಚಾರದಲ್ಲಿ ಷರಾ ಬರೆದು ವರದಿ ನೀಡಬೇಕು ಎಂದು ಸೂಚಿಸಲಾಗಿತ್ತು. ಈ ವರದಿ ಶೀಘ್ರವೇ ಸಲ್ಲಿಕೆಯಾಗಲಿದೆ.

ಇದರ ನಡುವೆ ಸಂಭಾವ್ಯ ಅಭ್ಯರ್ಥಿಗಳ ವಿಚಾರದಲ್ಲಿ ಎರಡು ಸುತ್ತಿನ ಸಮೀಕ್ಷೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಒಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಡೆಯಿಂದ ನಡೆಯಲಿದೆ. ಇನ್ನೊಂದು ಎಐಸಿಸಿ ಕಡೆಯಿಂದ ನಡೆಯಲಿದೆ. ಈ ಎರಡೂ ವರದಿಗಳಲ್ಲಿ ಯಾರು ಗೆಲ್ಲಬಲ್ಲರು ಎಂಬ ಮಾಹಿತಿ ಬರುತ್ತದೋ ಅವರಿಗೆ ಟಿಕೆಟ್‌ ನೀಡುವುದು ಎನ್ನುವುದು ಲೆಕ್ಕಾಚಾರ. ಹಾಗಿದ್ದರೆ ಎರಡೂ ಸಮೀಕ್ಷೆಗಳಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳು ಸಿಗದೆ ಇದ್ದರೆ ಮುಂದೇನು ಎಂಬ ಪ್ರಶ್ನೆಗೂ ಕಾಂಗ್ರೆಸ್‌ ನಾಯಕರು ಮೂರನೇ ಆಯ್ಕೆಯನ್ನು ಇಟ್ಟುಕೊಂಡಿದ್ದಾರೆ. ಅದುವೇ ಸಚಿವರನ್ನು ಕಣಕ್ಕಿಳಿಸುವುದು.

ವೀಕ್ಷಕರು ಜಿಲ್ಲಾವಾರು ಮುಖಂಡರ ಸಭೆ ನಡೆಸಿ ಸಂಭಾವ್ಯರ ಹೆಸರುಗಳು ಶಿಫಾರಸು ಮಾಡುತ್ತಾರೆ. ಇವರಿಗೆ ಸಂಬಂಧಿಸಿ ಕೆಪಿಸಿಸಿ ಮತ್ತು ಎಐಸಿಸಿ ಪ್ರತ್ಯೇಕ ಸಮೀಕ್ಷೆ ನಡೆಸಲಿದೆ. ಎರಡೂ ಸಮೀಕ್ಷೆಗಳಲ್ಲಿ ಒಬ್ಬ ಸಂಭಾವ್ಯ ಅಭ್ಯರ್ಥಿ ಬಗ್ಗೆ ಪಾಸಿಟಿವ್ ನೋಟ್‌ ಬಂದರೆ ಅವರಿಗೇ ಟಿಕೆಟ್‌ ನೀಡಬಹುದು.

ಒಂದು ಶಿಫಾರಸು ಆಗುವ ಸಂಭಾವ್ಯರು ಗೆಲ್ಲುವುದಿಲ್ಲ ಎಂಬ ವರದಿ ಬಂದರೆ ಆ ಕ್ಷೇತ್ರಗಳಲ್ಲಿ ಸಚಿವರನ್ನು ಕಣ್ಕಿಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂದರೆ ಸಮೀಕ್ಷೆಯಲ್ಲಿ ಸಂಭಾವ್ಯ ಅಭ್ಯರ್ಥಿ ಬಗ್ಗೆ ಪಾಸಿಟಿವ್ ಬಂದರೆ ಸಚಿವರು ಸೇಫ್ ಆಗುತ್ತಾರೆ, ಸಮೀಕ್ಷೆಯಲ್ಲಿ ನೆಗಟಿವ್ ಬಂದರೆ ಸಚಿವರೇ ಲೋಕಸಭೆ ಅಖಾಡಕ್ಕೆ ಇಳಿಯಬೇಕಾಗುತ್ತದೆ ಎಂಬ ಸುಳಿವನ್ನು ಕಾಂಗ್ರೆಸ್‌ ಹೈಕಮಾಂಡ್‌ ನೀಡಿದೆ.

ಹೈಕಮಾಂಡ್ ಇಂಥಹುದೊಂದು ಸೂಚನೆ ನೀಡುವ ಸುಳಿವು ಸಿಕ್ಕ ಬೆನ್ನಲ್ಲೇ ಸಚಿವರು ಅಲರ್ಟ್‌ ಆಗಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸದೃಢ, ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಮತ್ತು ಅವರ ಗೆಲುವಿಗಾಗಿ ಪಣ ತೊಟ್ಟಿದ್ದಾರೆ ಎನ್ನಲಾಗಿದೆ.

ಹಾಗಿದ್ದರೆ ಯಾರಿಗೆಲ್ಲ ತೂಗುಗತ್ತಿ ತೂಗುತ್ತಿದೆ?

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವುದು ಕಷ್ಟ ಎಂಬುದು ಹೈಕಮಾಂಡ್‌ ಮತ್ತು ಇತರ ನಾಯಕರಿಗೆ ಮನವರಿಕೆಯಾಗಿದೆ. 20 ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ಕೆಲವು ಕಡೆ ತುಂಬ ಪ್ರಯತ್ನ ಮಾಡಿದರೆ ಮಾತ್ರ ಗೆಲ್ಲಬಹುದು ಎಂಬ ಪರಿಸ್ಥಿತಿ ಇದೆ. ಅಂಥ ಕ್ಷೇತ್ರಗಳಲ್ಲಿ ಒಂದೋ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಬೇಕು, ಇಲ್ಲವೇ ಹಾಲಿ ಸಚಿವರೇ ಕಣಕ್ಕೆ ಇಳಿಯಬೇಕು ಎನ್ನುವುದು ಹೈಕಮಾಂಡ್‌ನ ಸೂತ್ರವಾಗಿದೆ.

ಯಾವ ಸಚಿವರಿಗೆಲ್ಲ ಇಂಥ ಬೇಡಿಕೆ ಇದೆ ಎಂದು ನೋಡುವುದಾದರೆ ಸತೀಶ್ ಜಾರಕಿಹೊಳಿ‌ (ಬೆಳಗಾವಿ ಕ್ಷೇತ್ರ), ಈಶ್ವರ ಖಂಡ್ರೆ (ಬೀದರ್‌ ಕ್ಷೇತ್ರ), ಚಲುವರಾಯಸ್ವಾಮಿ (ಮಂಡ್ಯ ಕ್ಷೇತ್ರ), ಕೆ.ಎಚ್ ಮುನಿಯಪ್ಪ (ಕೋಲಾರ), ಎಚ್ ಸಿ ಮಹಾದೇವಪ್ಪ (ಮೈಸೂರು ಅಥವಾ ಚಾಮರಾಜನಗರ), ಕೃಷ್ಣ ಭೈರೇಗೌಡ (ಬೆಂಗಳೂರು ಉತ್ತರ) ಅವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Exit mobile version