ಬೆಂಗಳೂರು: ಲೋಕಸಭೆ ಚುನಾವಣೆಗಳು (Parliament Flashback) ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿವೆ. 1991ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು (Ramakrishna Hegde) ಅನಿರೀಕ್ಷಿತ ಫಲಿತಾಂಶ ಕಾಣಬೇಕಾಯಿತು. ಹೆಗಡೆಯವರ ರಾಜಕೀಯ ಜೀವನದಲ್ಲಿ ಈ ಫಲಿತಾಂಶ ಭಾರಿ ಹಿನ್ನಡೆ ಉಂಟು ಮಾಡಿತು.
ಸಿದ್ದು ನ್ಯಾಮಗೌಡ: ಇವರ ಮೂಲ ಹೆಸರು ಸಿದ್ದಪ್ಪ ಭೀಮಪ್ಪ ನ್ಯಾಮಗೌಡ. ಬ್ಯಾರೇಜ್ ಸಿದ್ದು ಎಂದೇ ಇವರು ಖ್ಯಾತರಾಗಿದ್ದರು. ರೈತರಿಂದಲೇ 1 ಕೋಟಿ ರೂ. ದೇಣಿಗೆ ಸಂಗ್ರಹಿಸಿ, ಜತೆಗೆ ರೈತರ ಶ್ರಮದಾನದ ಮೂಲಕ ಚಿಕ್ಕಪಡಸಲಗಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದ ಖ್ಯಾತಿ ಇವರದು. ಸರ್ಕಾರದ ನೆರವು ಪಡೆಯದೆ ಖಾಸಗಿಯಾಗಿ ನಿರ್ಮಿಸಿದ ದೇಶದ ಮೊದಲ ಅಣೆಕಟ್ಟು ಇದು.
ರಾಷ್ಟ್ರ ಮಟ್ಟದ ಸುದ್ದಿ
30,000 ಎಕರೆ ಭೂಮಿಗೆ ನೀರಾವರಿ, 2.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಮತ್ತು 1.5 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನು ಇದು ಹೊಂದಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಸಿದ್ದು ನ್ಯಾಮಗೌಡ ಅವರು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿದ್ದರು. 1991ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನಾಗಿ ಸಿದ್ದು ನ್ಯಾಮಗೌಡ ಅವರನ್ನು ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರು 2,76,849 (ಶೇ.46.51) ಮತಗಳನ್ನು ಪಡೆದರೆ, ರಾಮಕೃಷ್ಣ ಹೆಗಡೆ ಅವರಿಗೆ 2,55,645 (ಶೇ.42.05) ಮತಗಳು ಲಭಿಸಿದವು. 21,204 ಮತಗಳ ಅಂತರದಿಂದ ರಾಮಕೃಷ್ಣ ಹೆಗಡೆ ಅವರು ಪರಾಭವ ಅನುಭವಿಸಿದರು.
ಉತ್ತರ ಕರ್ನಾಟಕದಲ್ಲಿ ಜನಪ್ರಿಯರಾಗಿದ್ದ ಹೆಗಡೆ
ರಾಮಕೃಷ್ಣ ಹೆಗಡೆ ಆಗ ಉತ್ತರ ಕರ್ನಾಟಕದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದರು. ಆದರೆ ಹೊಸ ಮುಖದ ಎದುರು ಅವರು ಸೋತಿದ್ದು ರಾಷ್ಟ್ರ ಮಟ್ಟದ ಸುದ್ದಿಯಾಯಿತು. ಹೆಗಡೆಯಂಥ ಪ್ರಭಾವಿ ರಾಜಕಾರಣಿಯನ್ನು ಸೋಲಿಸಿದ್ದಕ್ಕಾಗಿ ನ್ಯಾಮಗೌಡ ಅವರಿಗೆ ನರಸಿಂಹ ರಾವ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಯಿತು. ಆದರೆ ಸಿದ್ದು ನ್ಯಾಮಗೌಡ ಅವರು 1996ರ ಚುನಾವಣೆಯಲ್ಲಿ ಜನತಾ ದಳ ಅಭ್ಯರ್ಥಿ ಎಚ್ ವೈ ಮೇಟಿ (ಈಗ ಕಾಂಗ್ರೆಸ್ ಶಾಸಕ) ಎದುರು ಸೋತು ಹೋದರು. ಮುಂದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ 2013, 2018ರಲ್ಲಿ ಸಿದ್ದು ನ್ಯಾಮಗೌಡ ಅವರು ಶಾಸಕರಾಗಿ ಆಯ್ಕೆಯಾದರು. 2018ರ ಮೇ 28ರಂದು ಕಾರು ಅಪಘಾತದಲ್ಲಿ ಇವರು ಮೃತಪಟ್ಟರು.
ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆ
ರಾಜ್ಯದ 28 ಕ್ಷೇತ್ರಗಳ ಪೈಕಿ (Parliament Flashback) ಬೆಂಗಳೂರು ದಕ್ಷಿಣ ಕಾಂಗ್ರೆಸ್ಸೇತರ ಪಕ್ಷಗಳ ಭದ್ರಕೋಟೆಯಾಗಿದೆ. 1977ರಲ್ಲಿ ಕ್ಷೇತ್ರ ವಿಂಗಡನೆಯ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಈವರೆಗೆ ನಡೆದ 12 ಲೋಕಸಭೆ ಚುನಾವಣೆಗಳಲ್ಲಿ 3 ಬಾರಿ ಜನತಾ ಪಕ್ಷ ಮತ್ತು 8 ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಗೆದ್ದಿರುವುದು ಒಂದು ಬಾರಿ ಮಾತ್ರ!
ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕರಾಗಿದ್ದ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ನಿರಂತರ 6 ಬಾರಿ ಚುನಾಯಿತರಾಗಿದ್ದರು.
ಕೆಂಗಲ್ ಹನುಮಂತಯ್ಯಗೇ ಸೋಲು
ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 26ರಲ್ಲಿ ಜಯ ಸಾಧಿಸಿ ಕ್ಲೀನ್ ಸ್ವೀಪ್ ಮಾಡಿತು. ಆದರೆ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನ್ಯಾ. ಕೆ ಎಸ್ ಹೆಗ್ಡೆ ಅವರು ಮೈಸೂರಿನ ಮಾಜಿ ಮುಖ್ಯಮಂತ್ರಿ, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರಿಗೇ ಸೋಲಿನ ರುಚಿ ತೋರಿಸಿದರು. ನ್ಯಾ. ಕೆ ಎಸ್ ಹೆಗ್ಡೆ ಅವರ ಹಿರಿತನವನ್ನು ಕಡೆಗಣಿಸಿ ಕಿರಿಯ ನ್ಯಾಯಮೂರ್ತಿಯನ್ನು ಇಂದಿರಾ ಗಾಂಧಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿಸಿದ್ದರು. ಸ್ವಾಭಿಮಾನಿಯಾದ ಜಸ್ಟಿಸ್ ಕೆ ಎಸ್ ಹೆಗ್ಡೆ ಅವರು ರಾಜೀನಾಮೆ ನೀಡಿ ಚುನಾವಣೆ ಕಣಕ್ಕಿಳಿದಿದ್ದರು. ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಅವರ ತಂದೆ ಇವರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಗೆದ್ದ ನ್ಯಾ. ಕೆ ಎಸ್ ಹೆಗ್ಡೆ ಅವರು ಲೋಕಸಭೆಯಲ್ಲಿನ ಮೊದಲ ಕಾಂಗ್ರೆಸ್ಸೇತರ ಸ್ಪೀಕರ್ ಆಗಿ ಇತಿಹಾಸ ನಿರ್ಮಿಸಿದರು.
ಇಂದಿರಾ ಅಲೆಯೂ ಇಲ್ಲಿ ಕೆಲಸ ಮಾಡಲಿಲ್ಲ
1980ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಟಿ ಆರ್ ಶಾಮಣ್ಣ ಅವರು ಜಯ ಸಾಧಿಸಿದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಪ್ರಚಂಡ ಜಯ ದಾಖಲಿಸಿತು. ಆದರೆ ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಜನತಾ ಪಕ್ಷದ ಅಭ್ಯರ್ಥಿ ವಿ ಎಸ್ ಕೃಷ್ಣ ಅಯ್ಯರ್ ಗೆದ್ದರು.
ಕಾಂಗ್ರೆಸ್‌ನಿಂದ ಗೆದ್ದಿರುವುದು ಗುಂಡೂರಾವ್ ಮಾತ್ರ
1989ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂ ರಾವ್ ಗೆದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಇದೊಂದೇ ಬಾರಿ.
ಆದರೆ ಎರಡೇ ವರ್ಷಗಳ ಬಳಿಕ 1991ರಲ್ಲಿ ಗುಂಡೂ ರಾಯರನ್ನು ಖ್ಯಾತ ಅರ್ಥಶಾಸ್ತ್ರಜ್ಞ ಕೆ. ವೆಂಕಟಗಿರಿ ಗೌಡರು ಸೋಲಿಸಿದರು. ಈ ಮೂಲಕ ಮೊದಲ ಬಾರಿ ಇಲ್ಲಿ ಬಿಜೆಪಿ ಖಾತೆ ತೆರೆಯಿತು. ವಿಶೇಷ ಏನೆಂದರೆ ಇದೇ ವೆಂಕಟಗಿರಿ ಗೌಡ ಅವರು, 1984ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನತಾ ಪಕ್ಷದ ವಿ ಎಸ್ ಕೃಷ್ಣ ಅಯ್ಯರ್ ಎದುರು ಸೋತಿದ್ದರು.
ಅನಂತ್ ಕುಮಾರ್ ಪ್ರಾಬಲ್ಯ
ಮುಂದೆ ಅನಂತ್ ಕುಮಾರ್ ಅವರು 1996, 98, 99, 2004, 2009 ಮತ್ತು 2014ರ ಚುನಾವಣೆಗಳಲ್ಲಿ ನಿರಂತರವಾಗಿ ಆರು ಬಾರಿ ಗೆದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯನ್ನು ಅನಂತ್ ಕುಮಾರ್ ಅವರು ಮತ್ತಷ್ಟು ಬಲಪಡಿಸಿದರು.
ತೇಜಸ್ವಿ ಸೂರ್ಯ ಭರ್ಜರಿ ಜಯ
2019ರಲ್ಲಿ 28 ವರ್ಷದ ತೇಜಸ್ವಿ ಸೂರ್ಯ ಅವರು 3.30 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದರು. ಇದು ಈ ಕ್ಷೇತ್ರದಲ್ಲಿನ ಗರಿಷ್ಠ ಅಂತರದ ಜಯ. 1989ರಲ್ಲಿ ಆರ್ ಗುಂಡೂರಾವ್ ಅವರು ಜನತಾ ದಳದ ಎಂ ರಘುಪತಿ ಅವರನ್ನು 2,39,854 ಮತಗಳ ಅಂತರದಿಂದ ಸೋಲಿಸಿದ್ದ ದಾಖಲೆಯನ್ನು ತೇಜಸ್ವಿ ಸೂರ್ಯ ಬ್ರೇಕ್ ಮಾಡಿದ್ದಾರೆ.
ಲೋಕಸಭೆ ತೀರ್ಪೇ ಬೇರೆ, ವಿಧಾನಸಭೆ ತೀರ್ಪೇ ಬೇರೆ!
1984ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿತು. ಆಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮತ್ತೆ ಚುನಾವಣೆಯ ಮೊರೆ ಹೋದರು. ಆಶ್ಚರ್ಯವೆಂದರೆ ಜನತಾ ಪಕ್ಷ ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿತು.