ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಿದ್ರಿಸುತ್ತಿರುವಂತೆ ತೋರಿಸುವ ಪೋಸ್ಟರ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದು, ಸಿದ್ದರಾಮಯ್ಯ ಅವರು ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡರೇ ಎಂದು ಪ್ರಶ್ನೆ ಮಾಡಿದ್ದಾರೆ.
ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ? ಎಂದು ಪ್ರಶ್ನೆ ಮಾಡಿರುವ ಬಸವರಾಜ ಬೊಮ್ಮಾಯಿ, ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿ ಅಧೋಗತಿಗೆ ತೆಗೆದುಕೊಂಡು ಹೋಗಿರುವ ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಟ್ವೀಟ್‌ನಲ್ಲೇನಿದೆ?
ದಿನಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ ಮಾಡುವ ಒಂಭತ್ತೂವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿಎಂ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ.
1) ಯುಪಿಎ 2004-2014ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ 2014-2023 ಡಿಸೆಂಬರ್‌ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂಪಾಯಿ ಬಂದಿದೆ. ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ. ಮೇ ತಿಂಗಳಲ್ಲಿ 360 ಕೋಟಿ ರೂ. ಬಿಡುಗಡೆಯಾಗಿದ್ದು, ಈಗ ಮತ್ತೆ 348 ಕೋಟಿ ರೂ. ಬಿಡುಗಡೆಗೆ ತೀರ್ಮಾನಿಸಿದೆ. ಇಷ್ಟಾದರೂ ಕೂಡ ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ ?
2) ಕೃಷ್ಣಾ ಮೆಲ್ದಂಡೆ ಹಾಗೂ ಮಹದಾಯಿ ಎರಡೂ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದು ಗೊತ್ತಿದ್ದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಏಕೆ? ಈ ವರ್ಷ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿದ್ದು ಅದನ್ನು ಪಡೆದುಕೊಳ್ಳಲಾಗದೆ ಗಾಢ ನಿದ್ರೆಯಲ್ಲಿದ್ದವರಾರು?
3) ಕಳೆದ ಐದು ವರ್ಷದಲ್ಲಿ 30 ಸಾವಿರ ಕೋಟಿ ರೂಪಾಯಿಯನ್ನು ರಾಷ್ಟ್ರೀಯ ಹೆದ್ದಾರಿಗೆ ನರೇಂದ್ರ ಮೋದಿ ಸರ್ಕಾರ ಒದಗಿಸಿದೆ. ನೀವು ಓಡಾಡುವ ಬೆಂಗಳೂರು – ಮೈಸೂರು ಹೈವೇ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮೋದಿ ಸರ್ಕಾರ ಒದಗಿಸಿರುವುದು ನಿಮ್ಮ ಅನುಭವಕ್ಕೆ ಬಂದಿಲ್ಲವೇ? ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 1327.43 ಕೋಟಿ ರೂ. ಬಿಡುಗಡೆಯಾಗಿದೆ. ಇದೇ ರೀತಿ ರೈಲ್ವೆ, ಬಂದರು, ಅಭಿವೃದ್ಧಿಗೆ ಮೋದಿಯ ಪಾಲು ನಿಮಗೆ ಕಾಣುತ್ತಿಲ್ಲವೇ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10990 ಕೋಟಿ ರೂ. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 62 ಲಕ್ಷ ಜನರಿಗೆ ಆರೋಗ್ಯದ ಚಿಕಿತ್ಸೆ ಕೊಟ್ಟಿರುವ ಮೋದಿಯವರ ನಿರಂತರ ಪರಿಶ್ರಮ ಹಾಗೂ ಕ್ರಿಯಾಶೀಲತೆಗೆ ಸಾಕ್ಷಿ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಡೋಸ್ ಲಸಿಕೆ ಹಾಕಿಸಿದ್ದು ನಿದ್ರೆಯಲ್ಲಿರುವ ನಿಮಗೆಲ್ಲಿ ಕಾಣಿಸುತ್ತದೆ? ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿ ಅಧೋಗತಿಗೆ ತೆಗೆದುಕೊಂಡು ಹೋಗಿರುವ ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ” ಎಂದು ಬಸವರಾಜ ಬೊಮ್ಮಾಯಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಪೋಸ್ಟರ್‌ನಲ್ಲೇನಿದೆ?
“ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ. ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ. ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ. ಕೇಂದ್ರವು ಸರಿಯಾಗಿ ಅನುದಾನ ಕೊಡುತ್ತಿಲ್ಲ, ಕನ್ನಡಿಗರ ಮಹತ್ವಾಕಾಂಕ್ಷೆಗಳಿಗೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ, ಕೇಂದ್ರದ ಪರಿಹಾರ ಹಣ ಇನ್ನೂ ರೈತರ ಕೈಗೆ ತಲುಪಿಲ್ಲ…”
ಪ್ರಧಾನಿಯ ಗಾಢ ನಿದ್ರೆ
— Siddaramaiah (@siddaramaiah) January 16, 2024
ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ
ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ.
ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ
– ಕೇಂದ್ರವು… pic.twitter.com/q37nCcijbn
“ಮೋದಿ ಮಂತ್ರವಿಷ್ಟೇ, ಕಡೆಗಣಿಸು. ನಿರ್ಲಕ್ಷಿಸು. ನಿದ್ರಿಸು. ಮತ್ತದನ್ನೇ ಪುನರಾವರ್ತಿಸು! ಇನ್ನು ಬಿಜೆಪಿ ಸಂಸದರ ಮಂತ್ರ- ಬಾಯಿಗೆ ಬೀಗ ಹಾಕಿಕೊಂಡಿರು. ಮೋದಿಯದ್ದೇ ಜಪ ಮಾಡಿಕೊಂಡಿರು. ಕನ್ನಡಿಗರ ನಂಬಿಕೆಗೆ ದ್ರೋಹ ಬಗೆಯುತ್ತಿರು. ಮೋದಿ ನಿಶ್ಚಿಂತೆಯಿಂದ ನಿದ್ರಿಸಲು ಮತ್ತದನ್ನೇ ಪುನರಾವರ್ತಿಸು! ಎದ್ದೇಳಿ, ಪ್ರಧಾನಮಂತ್ರಿಯವರೇ! ಕರ್ನಾಟಕದ ನ್ಯಾಯಯುತ ಪಾಲನ್ನು ಕೊಡಬೇಕಾದ ಸಮಯವಿದು” ಎಂದು ಅವರ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.