ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD DeveGowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ದೇವೇಗೌಡರು ಅದರ ಪರಿಮಳವನ್ನು ಆಸ್ವಾದಿಸಿ ಖುಷಿಪಟ್ಟರು.
ಎಚ್.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಹಲಸಿನ ಹಣ್ಣು ಕೊಟ್ಟ ಕಾರ್ಯಕರ್ತ
ಇನ್ನು ಕಟ್ಟಾ ಅಭಿಮಾನಿಯೊಬ್ಬ ದೇವೇಗೌಡರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ, ಖುಷಿ ಖುಷಿಯಿಂದ ದೇವೇಗೌಡ ಅವರು ಸ್ವೀಕರಿಸಿದರು. ಅಲ್ಲದೆ, ಆ ಹಲಸಿನ ಹಣ್ಣಿನ ಬಳಿಗೆ ತಮ್ಮ ಮೂಗನ್ನು ಇಟ್ಟು ಅದರ ಪರಿಮಳವನ್ನು ಆಸ್ವಾದಿಸಿದರು. ಕಾರ್ಯಕರ್ತನ ಗಿಫ್ಟ್ ಬಗ್ಗೆ ಬಹಳವೇ ಖುಷಿಪಟ್ಟರು.
ಈ ಅವಮಾನದಿಂದ ಪಾರು ಮಾಡು: ದೇವೇಗೌಡರ ಮೌನ ಪ್ರಾರ್ಥನೆ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇಂದು ತಮ್ಮ ಹುಟ್ಟುಹಬ್ಬವನ್ನು ದೇವಾಲಯ ಭೇಟಿಯೊಂದಿಗೆ (Temple visit) ಸರಳವಾಗಿ ಆಚರಿಸಿಕೊಂಡಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.
ಮೊಮ್ಮಗ ಪ್ರಜ್ವಲ್ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್ ಶೇವ್ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.
ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.
ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ
“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.
ಕುಮಾರಸ್ವಾಮಿಗೆ ಹೋರಾಟದ ಛಲ ಇದೆ
ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.
“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.
ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ
ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.
“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.