ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಸದೃಢ ಭಾರತ ನಿರ್ಮಾಣ ಆಗಬೇಕು ಎಂಬ ಸಂಕಲ್ಪದೊಂದಿಗೆ “ನನ್ನ ದೇಶ- ನನ್ನ ಮತ” ಘೋಷವಾಕ್ಯದಡಿ ಮತದಾರ ಚೇತನ ಮಹಾ ಅಭಿಯಾನವನ್ನು (matadara Chetna campaign) ಸೆ. 1ರಿಂದ 10ರವರೆಗೆ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ 58 ಸಾವಿರ ಬೂತ್‌ಗಳಲ್ಲಿ ಬಿಎಲ್‌ಎ 2 (ಬೂತ್ ಲೆವೆಲ್ ಏಜೆಂಟ್) ಗಳನ್ನು ನೇಮಕ ಮಾಡಲಾಗುತ್ತಿದೆ. ಈ ಮೂಲಕ ಹೊಸ ಹೆಸರು ಸೇರ್ಪಡೆ, ಡಿಲೀಟ್ ಸೇರಿ ಅನೇಕ ಕಾರ್ಯಗಳನ್ನು ನಡೆಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje) ತಿಳಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಹೊಸದಾಗಿ ಮತದಾನದ ಹಕ್ಕು ಪಡೆದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೂ ಈ ಮೂಲಕ ಹೊಂದಲಾಗಿದೆ. ಈ ಅಭಿಯಾನದ ಮೂಲಕ ಚುನಾವಣಾ ಆಯೋಗಕ್ಕೆ (Election Commission) ಪೂರಕವಾಗಿ ಪಕ್ಷ ಕೆಲಸ ಮಾಡಲಿದೆ. ಅಭಿಯಾನ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಮಿತಿ ರಚಿಸಲಿದ್ದು, ಶಾಸಕ ಅರವಿಂದ ಬೆಲ್ಲದ್, ಪಿ. ರಾಜೀವ್, ವಿವೇಕ್ ರೆಡ್ಡಿ, ಲೋಕೇಶ್ ಇರಲಿದ್ದಾರೆ. ಇದೇ ರೀತಿ ಜಿಲ್ಲಾ ತಂಡಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Weather Report : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಬೆಂಗಳೂರಲ್ಲಿಂದು ಹೇಗಿದೆ?
ಪ್ರತಿ ಗ್ರಾಮಕ್ಕೆ ಶೀಘ್ರ ಬಿಎಲ್‌ಎಗಳ ನೇಮಕ
ಪ್ರತಿ ಗ್ರಾಮಕ್ಕೆ ಬಿಎಲ್‌ಎ 2ಗಳನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಅವರಿಗೆ ಅಗತ್ಯ ಕಾರ್ಯಾಗಾರವನ್ನು ಏರ್ಪಡಿಸಿ ಮತದಾರರ ಗುರುತಿನ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಡಿಲೀಟ್ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುವುದು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸೆ.17ರಂದು ಮನೆ ಮನೆಗೆ ತೆರಳಿ ಅಭಿಯಾನ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಲು ದೇಶದ ಎಲ್ಲರೂ ಮತದಾನ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದರು.
ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಗುರಿ
ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ಇರುವುದಿಲ್ಲ. ಇಂಥವರಿಗೆ ಅಗತ್ಯ ಮಾಹಿತಿಯನ್ನು ಬಿಎಲ್‌ಎಗಳು ಮಾಡಲಿದ್ದಾರೆ. ಅಲ್ಲದೆ, ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ನಿಧನರಾದವರ ಹೆಸರು ಡಿಲೀಟ್, ನಕಲಿ ಮತದಾರರ ಗುರುತಿಸುವ ಕಾರ್ಯವನ್ನು ಸಹ ಬಿಜೆಪಿ ವತಿಯಿಂದ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.
ಈ ಹಿಂದಿನ ಅಕ್ರಮ ನಡೆಯದಂತೆ ಎಚ್ಚರ
ಈ ಹಿಂದಿನ ಚುನಾವಣೆಯಲ್ಲಿ ಗಡಿ ರಾಜ್ಯಗಳಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದರು. ಮತದಾರರ ಹೆಸರನ್ನು ಕೈಬಿಡುವ ಕೆಲಸವೂ ನಡೆದಿತ್ತು. ಜಾತಿ, ಹೆಸರುಗಳನ್ನು ನೋಡಿ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮರ್ಪಕ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಈಗ ಚುನಾವಣಾ ಆಯೋಗವು ಕಾರ್ಯನಿರತವಾಗಿದ್ದು, ಬಿಜೆಪಿ ಇದಕ್ಕೆ ನೆರವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ: Modi in Bangalore : ನಾಳೆ ಬೆಂಗಳೂರಲ್ಲಿ ಮೋದಿ ರೋಡ್ ಶೋ ಕ್ಯಾನ್ಸಲ್; ಬಿಜೆಪಿ ಧ್ವಜಕ್ಕಿಲ್ಲ ಅವಕಾಶ!
ಮೋದಿಯನ್ನು ವಿಶ್ವವೇ ಬಯಸುತ್ತಿದೆ
ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಳ್ಳುವ ಸಮಯ ಹತ್ತಿರವಾಗುತ್ತಿದೆ. ಭಾರತ ಮಾತ್ರವಲ್ಲ, ವಿಶ್ವವೇ ಮೋದಿಯತ್ತ ನೋಡುತ್ತಿದೆ. ಅವರ ಮುಂದಾಳತ್ವ ಬೇಕು ಎಂದು ವಿಶ್ವವೇ ಬಯಸುತ್ತಿದೆ. ಹೀಗಾಗಿ ಇಂತಹ ದಕ್ಷ ಪ್ರಧಾನಿಯ ಆಯ್ಕೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈಗಲೇ ಮತದಾರರು ಜಾಗೃತರಾಗಬೇಕು. ಮತದಾರರ ಯಾದಿಯಲ್ಲಿ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಾವು ಈ ಅಭಿಯಾನದ ಮೂಲಕ ಆ ಕೆಲಸವನ್ನು ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.