Site icon Vistara News

PM Narendra Modi : ಗುಲಾಮರಿಗೆ ಇದು ಅರ್ಥ ಆಗಲ್ಲ; ಸಾಮ್ರಾಟರೆಲ್ಲ ಬೀದಿಪಾಲಾಗಿದ್ದಾರೆಂಬ ಕಾಂಗ್ರೆಸ್‌ ಗೇಲಿಗೆ ಬಿಜೆಪಿ ಪ್ರತ್ಯುತ್ತರ

BJP Leaders at PM programme

ಬೆಂಗಳೂರು: ʻʻಬಿಜೆಪಿ ರಾಜ್ಯ ನಾಯಕರದ್ದು ಎಂತಹಾ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ (BJP High command) ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?ʼʼ ಎಂಬ ಕಾಂಗ್ರೆಸ್‌ ಟ್ವೀಟ್‌ ದಾಳಿಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಿಗೆ ಪ್ರಧಾನಿಗಳ (PM Narendra Modi) ಸರ್ಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ಗೊತ್ತಾಗಲ್ಲ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿನ ಇಸ್ರೊ ಕಚೇರಿಗೆ (ISRO office at Bangalore) ಭೇಟಿ ನೀಡಿದ ವೇಳೆ ರಾಜ್ಯದ ಬಿಜೆಪಿ ನಾಯಕರೆಲ್ಲ ಬ್ಯಾರಿಕೇಡ್‌ನ ಆಚೆ ನಿಂತು, ಬ್ಯಾರಿಕೇಡ್‌ ಹತ್ತಿ ನಿಂತು ಪ್ರಧಾನಿಗೆ ಕೈಬೀಸುವ ಚಿತ್ರಗಳನ್ನು ಹಾಕಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ಕಂಡಕಂಡಂತೆ ಕಾಲೆಳೆದಿತ್ತು.

ʻʻರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ! ಕರ್ನಾಟಕ ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿʼʼ ಎಂದು ಕಾಂಗ್ರೆಸ್‌ ಹೇಳಿತ್ತು.

ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ “ಸರ್ವಾಧಿಕಾರಿ”ಯ ಮೊದಲ ಬಲಿಪಶುಗಳು ಬಿಜೆಪಿಗರಿಗೇ ಅಲ್ಲವೇ? ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ ಎಂದು ಕಾಂಗ್ರೆಸ್‌ ಕೇಳಿತ್ತು.

ಸೆಂಟ್ರಲ್‌ ಲೀಡರ್‌ಶಿಪ್‌ ಕೇರೇ ಮಾಡ್ತಿಲ್ಲ ಎಂದ ಪ್ರಿಯಾಂಕ್‌ ಖರ್ಗೆ

ಈ ನಡುವೆ ಸಚಿವ ಪ್ರಿಯಾಂಕ ಖರ್ಗೆ ಅವರು ಕೂಡಾ ಬಿಜೆಪಿಯನ್ನು ಗೇಲಿ ಮಾಡಿದ್ದರು. ʻʻಬಿಜೆಪಿ ನಾಯಕರ ಸ್ಥಿತಿ ಏನಾಗಿದೆ ಅಂದರೆ ಫರ್ಸ್ಟ್ ಡೇ ಫರ್ಸ್ಟ್ ಶೋ ತರಹ ಆಗಿದೆ. ಸಿನಿಮಾ ಹೀರೊಗೆ ಮುಖ ತೋರಿಸಲು ಅಭಿಮಾನಿಗಳು ಮಾಡ್ತಾರಲ್ಲ ಹಾಗಿದೆ. ಬ್ಯಾರಿಕೇಡ್ ಮೇಲೆ ಹತ್ತಿ ಮುಖ ತೋರಿಸೋದಕ್ಕೆ ಹೊರಟಿದ್ದಾರೆ. ಸಾಮಾನ್ಯ ಡಿಗ್ನಿಟಿ ಕೂಡ ಇಟ್ಟುಕೊಂಡಿಲ್ಲ ಅಂತ ಕಾರ್ಯಕರ್ತರೇ ಬೈತಿದ್ದಾರೆ. ಮಾಜಿ ಸಚಿವರು ಹೇಗೆಲ್ಲ ಮಾಡ್ತಾ ಇದ್ದರು ನೋಡಿ. ಪ್ರಧಾನ ಮಂತ್ರಿಗಳು ಇವರನ್ನು ಗುರುತೇ ಹಿಡಿಯುವುದಿಲ್ಲ. ಪ್ರಧಾನಿಯವರಿಗೆ ಇವರ ಮುಖ ಪರಿಚಯವೇ ಇಲ್ಲ. ಬಿಜೆಪಿ ಕೇಂದ್ರ ನಾಯಕರಿಗೆ ರಾಜ್ಯದ ನಾಯಕರ ಬಗ್ಗೆ ಅಸಡ್ಡೆ ಇದೆ. ವಿರೋಧ ಪಕ್ಷದ ನಾಯಕನೇ ಇಲ್ಲ ಅಂದ್ರೆ ಕನ್ನಡಿಗರ ಅಭಿಮಾನಕ್ಕೆ ಧಕ್ಕೆ ಆಗ್ತಿಲ್ವಾ? ಚಂದ್ರಯಾನವೇ ಹೋಗಿ ಮುಟ್ಟಿಬಿಟ್ಟಿದೆ ಆದರೆ ದೆಹಲಿಯಿಂದ ಇನ್ನೂ ವಿಪಕ್ಷ ನಾಯಕ ಬಿಜೆಪಿಗೆ ಬಂದಿಲ್ಲ. ಬಿಜೆಪಿ ಶಾಶ್ವತ ವಿಪಕ್ಷ ಆಗಿರಬೇಕು ಎಂಬುದು ನಮ್ಮ ಆಸೆ. ಆದರೆ ಅವರಿಗೆ ಇನ್ನೂ ಒಬ್ಬ ನಾಯಕನೇ ಸಿಕ್ಕಿಲ್ಲ ಎನ್ನೋದು ಎಂತ ವಿಪರ್ಯಾಸ. ಬಿಜೆಪಿ ಸೆಂಟ್ರಲ್ ಲೀಡರ್ ಶಿಪ್ ಇವರನ್ನು ಕೇರೆ ಮಾಡ್ತಿಲ್ಲʼʼ ಎಂದು ಹೇಳಿದ್ದರು.

ಇದನ್ನೂ ಓದಿ: Karnataka Politics : ಸರ್ವಾಧಿಕಾರಿ ಮರ್ಜಿ ಮುಂದೆ ಬೀದಿಪಾಲಾದ ಬಿಜೆಪಿ ನಾಯಕರು; ವ್ಯಂಗ್ಯವಾಡಿದ ಕಾಂಗ್ರೆಸ್‌

ಕಾಂಗ್ರೆಸ್ ಟ್ವೀಟ್‌ಗೆ ಟ್ರೀಟ್‌ ಮೂಲಕವೇ ಬಿಜೆಪಿ ಉತ್ತರ

ಈ ನಡುವೆ ಕಾಂಗ್ರೆಸ್‌ ನಾಯಕರ ಅಷ್ಟೂ ಕಾಲೆಳೆತಗಳಿಗೆ ಬಿಜೆಪಿ ಪ್ರತಿದಾಳಿ ಮಾಡಿದೆ.

ʻʻಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು!ʼʼ ಎಂದು ಬಿಜೆಪಿ ಹೇಳಿದೆ.

ʻʻಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ.ʼʼ ಎಂದಿದೆ.

ʻʻತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ!ʼʼ ಎಂದು ಬಿಜೆಪಿ ಕೆಣಕಿದೆ.

Exit mobile version