ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಬಿಜೆಪಿ ನಾಯಕರೆಲ್ಲ ಈ ಬಾರಿ ಮೋದಿ ಬಂದಾಗ ಬ್ಯಾರಿಕೇಡ್‌ಗಳ ಆಚೆಯಿಂದ ಸಾಮಾನ್ಯ ಕಾರ್ಯಕರ್ತರಂತೆ ಹತ್ತಿ ನಿಂತು ಕೈ ಬೀಸುವ ದೃಶ್ಯಗಳು ಕಂಡುಬಂದವು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಮೊದಲು ತಾವೇ ಹೀರೋ ಎಂಬಂತೆ ರಸ್ತೆಯಲ್ಲಿ ಕೈಬೀಸುತ್ತಾ ಸಾಗಿದ್ದರು. ಅದೇ ಪ್ರಧಾನಿ ಮೋದಿ ಬಂದ ಕೂಡಲೇ ಬ್ಯಾರಿಕೇಡ್‌ನ ಆಚೆ ನಿಂತು ತಾವೇ ಕೈ ಬೀಸಿದರು. ಈ ದೃಶ್ಯಗಳು ಜನರ ನಡುವೆ ಸಾಕಷ್ಟು ಮಾತಿಗೆ ಅವಕಾಶ ಮಾಡಿಕೊಟ್ಟಿದೆ.
ಈ ದೃಶ್ಯಗಳನ್ನು ಇಟ್ಟುಕೊಂಡೇ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರನ್ನು ಕಂಡಕಂಡಂತೆ ಕಾಲೆಳೆಯುತ್ತಿದೆ.
- ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ “ಸರ್ವಾಧಿಕಾರಿ”ಯ ಮೊದಲ ಬಲಿಪಶುಗಳು ಬಿಜೆಪಿಗರಿಗೇ ಅಲ್ಲವೇ? ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ ಬಿಜೆಪಿ ಕರ್ನಾಟಕ?
- ʻʻಬಿಜೆಪಿ ರಾಜ್ಯ ನಾಯಕರದ್ದು ಎಂತಹಾ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ (BJP High command) ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ?
ಎಂದೆಲ್ಲ ಪ್ರಶ್ನಿಸುವುದಕ್ಕೆ ಕಾರಣವಾಯಿತು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಕಾಂಗ್ರೆಸ್ ನಾಯಕರನ್ನು ಹೈಕಮಾಂಡ್ ಹೇಗೆ ನಡೆಸಿಕೊಂಡಿತ್ತು ಎನ್ನುವುದನ್ನು ನೆನಪಿಸಿಕೊಳ್ಳಲು ಹೇಳಿತ್ತು.
- ʻʻಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಎಂಬಂತೆ ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಮಂತ್ರಿಗಳ ಅಧಿಕೃತ ಸರಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ.ʼʼ
- ʻʻತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಅಂದಹಾಗೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ‘ಗಾಂಧಿ’ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ!ʼʼ ಎಂದು ಬಿಜೆಪಿ ಕೆಣಕಿದೆ.
ಆದರೆ. ಇದ್ಯಾವುದೂ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಹೀಗೆ ಮಾಡಿದರು? ನಿಜಕ್ಕೂ ಅವರಿಗೆ ಕರ್ನಾಟಕದ ಬಿಜೆಪಿ ನಾಯಕರೆಂದರೆ ಅಷ್ಟು ಅಸಡ್ಡೆಯೇ? ಅವು ನಿಜಕ್ಕೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಯೇ ಎಂಬ ಯಾವ ಪ್ರಶ್ನೆಗಳಿಗೂ ಸ್ವಷ್ಟ ಉತ್ತರವನ್ನು ಕೊಟ್ಟಿಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್ ಸಂತೋಷ್ ಅವರು ನೀಡಿರುವ ಉತ್ತರ ಸ್ವಲ್ಪ ಮಟ್ಟಿಗೆ ಹೌದು ಎನ್ನುವಂತೆ ಇದೆ. ಅವರು ಕೂಡಾ ಮೊದಲು ಕಾಂಗ್ರೆಸ್‌ನ್ನು ಕೆಣಕುವ ಉತ್ತರವನ್ನು ನೀಡಿದ್ದಾರಾದರೂ ಬಳಿಕ ಎರಡನೇ ಫೇಸ್ ಬುಕ್ ಪೋಸ್ಟ್‌ನಲ್ಲಿ ಸ್ವಲ್ಪ ಸಮಾಧಾನಕರ ಉತ್ತರ ನೀಡಿದ್ದಾರೆ.
ಹಾಗಿದ್ದರೆ ಬಿ.ಎಲ್. ಸಂತೋಷ್ ಅವರು ಹೇಳಿದ್ದೇನು?
ಮೊದಲ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ
- ಟ್ರೋಲ್ ಪಾರ್ಟಿಯಾಗಿರುವ ಕಾಂಗ್ರೆಸ್ ಎಂದಿನಂತೆ ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಮಾತನಾಡಿದೆ.
- ಅದರಲ್ಲಿ ವಿಶೇಷತೆಯೇನೂ ಇಲ್ಲ. ತುಂಬ ಶ್ರೀಮಂತವಾದ, ಸಾಮ್ರಾಜ್ಯಶಾಹಿ ಮನೋಸ್ಥಿತಿಯ ಮತ್ತು ಸುಳ್ಳು ಅಹಂಗಳನ್ನು ತಲೆಯೊಳಗೆ ತುಂಬಿಕೊಂಡಿರುವ ಕಾಂಗ್ರೆಸ್ ಪಕ್ಷ ಮಾತ್ರ ಇಷ್ಟು ಕಳಪೆಯಾಗಿ ಯೋಚನೆ ಮಾಡಬಲ್ಲುದು.
- ಪ್ರಧಾನ ಮಂತ್ರಿ ನಮ್ಮ ನಾಯಕ. ಅವರು ವಿಜ್ಞಾನಿಗಳನ್ನು ಅಭಿನಂದಿಸಲು ಬಂದಿದ್ದಾರೆ. ನಾವು ಅವರನ್ನು ಸ್ವಾಗತಿಸಿದ್ದೇವೆ.
- ಅವರನ್ನು ಸ್ವಾಗತ ಮಾಡುವ ಹಂತದಲ್ಲಿ ನಾವು ಜನಸಾಮಾನ್ಯರಾಗಿಯೇ ಇರಲು ಸಿದ್ಧರಾಗಿದ್ದೆವು. ನಮಗೆ ಯಾವುದೇ ಮುಜುಗರವಾಗಲಿ, ಸುಳ್ಳು ಇಗೋಗಳಾಗಲಿ ಇರಲಿಲ್ಲ.
- ಇದೇ ನಮ್ಮ ಸಿಎಂ ಮತ್ತು ಡಿಸಿಎಂ ಅವರನ್ನು ನೋಡಿ. ಇಸ್ರೋ ವಿಜ್ಞಾನಿಗಳನ್ನು ಯಾರು ಮೊದಲು ಸನ್ಮಾನ ಮಾಡಬೇಕು ಎನ್ನುವ ಸ್ಪರ್ಧೆಯಲ್ಲಿದ್ದಾರೆ. ಅವರವರ ಮಧ್ಯೆಯೇ ಸಮನ್ವಯ ಸಾಧ್ಯವಾಗಿಲ್ಲ. ಅಂಥ ಒಂದು ಪಕ್ಷ ಟ್ರೋಲ್ ಪಾರ್ಟಿಯಾಗುವುದು ಸಹಜವೇ ಆಗಿದೆ.. ಸ್ವಲ್ಪನಾದ್ರೂ ಬೆಳೆಯಿರಿ.. Grow up at least a little
ಬಿ.ಎಲ್. ಸಂತೋಷ್ ಎರಡನೇ ಪೋಸ್ಟ್‌ನಲ್ಲಿ ಏನಿದೆ?
ಬಿ.ಎಲ್. ಸಂತೋಷ್ ಅವರ ಎರಡನೇ ಪೋಸ್ಟ್‌ನಲ್ಲಿ ಒಂದು ವಾಸ್ತವಕ್ಕೆ ಹತ್ತಿರವಾದ ವಿವರಣೆ ನೀಡಲಾಗಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರನ್ನು ಮುಂಜಾನೆಯೇ ವಿಮಾನ ನಿಲ್ದಾಣಕ್ಕೆ ಬರುವುದು ಬೇಡ ಎಂದು ಹೇಳಿದ್ದರು.
- ಹಾಗಿರುವ ರಾಜ್ಯದ ಬಿಜೆಪಿ ನಾಯಕರನ್ನು ಬಿಟ್ಟರೆ ಅದು ಚೆನ್ನಾಗಿರುತ್ತದಾ? ಹಾಗಾಗಿ ಅವರಿಗೂ ಅವಕಾಶ ಕೊಟ್ಟಿಲ್ಲ.
- ರಾಜ್ಯದ ಎಲ್ಲ ಬಿಜೆಪಿ ನಾಯಕರು ಸಾರ್ವಜನಿಕರು ಮತ್ತು ಕಾರ್ಯಕರ್ತರ ಜತೆಗೆ ಉಪಸ್ಥಿತರಿದ್ದರು.
- ಇದು ಪ್ರಧಾನ ಮಂತ್ರಿಯವರ ನ್ಯಾಯಪರತೆ ಮತ್ತು ಕರ್ನಾಟಕ ಬಿಜೆಪಿ ನಾಯಕರ ನಮ್ರತೆಯನ್ನು ತೋರಿಸುತ್ತದೆ.
- ಟ್ರೋಲ್ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿ : PM Narendra Modi : ಗುಲಾಮರಿಗೆ ಇದು ಅರ್ಥ ಆಗಲ್ಲ; ಸಾಮ್ರಾಟರೆಲ್ಲ ಬೀದಿಪಾಲಾಗಿದ್ದಾರೆಂಬ ಕಾಂಗ್ರೆಸ್ ಗೇಲಿಗೆ ಬಿಜೆಪಿ ಪ್ರತ್ಯುತ್ತರ