ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರತವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಸಂಕಲ್ಪ ತೊಟ್ಟಿದ್ದಾರೆ. ಅಲ್ಲದೆ, ಮೋದಿ ಚಿಂತೆ ಮಾಡುವವರಲ್ಲ. ಚಿಂತನೆ ಮಾಡುವ ಪ್ರಧಾನಿಯಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನಕ್ಲೇವ್-2024’ (Veerashaiva Lingayat Global Business Conclave-2024) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ವಿಕಸಿತ ಭಾರತಕ್ಕೆ ತಮ್ಮ ದೂರದೃಷ್ಟಿ ಹಾಗೂ ಅವಿಸ್ಮರಣೀಯ ಕಾರ್ಯವೈಖರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಅಡಿಪಾಯ ಹಾಕಿದ್ದಾರೆ. ವಿಕಸಿತ ಭಾರತ ಮೋದಿ ಅವರ ಮಹೋನ್ನತ ಕನಸು ಎಂದು ಹೇಳಿದರು.
ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ನಾವಿನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎನಿಸಿಕೊಂಡಿದೆ. ಇನ್ನು ಮೇಲೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಈಗ ಆರ್ಥಿಕವಾಗಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಹೆಜ್ಜೆ ಇಡುತ್ತಿದ್ದೇವೆ. ಇನ್ನು 20 ವರ್ಷಗಳಲ್ಲಿ ಅಭಿವೃದ್ಧಿ ರಾಷ್ಟ್ರವಾಗಿ ಭಾರತ ಮೊದಲಿರುತ್ತದೆ ಎಂದು ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಚಿಂತನೆಯುಳ್ಳ ಪ್ರಧಾನಿ
ನರೇಂದ್ರ ಮೋದಿ ಅವರು ಚಿಂತೆ ಮಾಡುವವರಲ್ಲ. ಚಿಂತನೆ ಮಾಡುವ ಪ್ರಧಾನಿಯಾಗಿದ್ದಾರೆ. ತಾವು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಇಲಾಖೆಗಳಲ್ಲಿ ಏನಿರಬೇಕು?, ಹೇಗಿರಬೇಕು? ಎಂಬುದನ್ನು ಈಗಲೇ ಅಧಿಕಾರಿ ವರ್ಗಕ್ಕೆ ಸಲಹೆ- ಸೂಚನೆ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಜಗತ್ತಿನ ವಿವಿಧ ದೇಶಗಳಲ್ಲಿ ಲಿಂಗಾಯತ ವೀರಶೈವರು ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಸಮಾಜದ ಯುವ ಪೀಳಿಗೆ ಸಹ ಇದನ್ನು ಅನುಸರಿಸಬೇಕು ಎಂದು ಪ್ರಲ್ಹಾದ್ ಜೋಶಿ ಜೋಶಿ ಕರೆ ನೀಡಿದರು.
ಇದನ್ನೂ ಓದಿ: medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!
ಅಂತಾರಾಷ್ಟ್ರೀಯ ಬ್ಯುಸಿನೆಸ್ ಸಮಾವೇಶಗಳ ಆಯೋಜನೆಯಿಂದ ಯುವ ಜನತೆಯ ಉನ್ನತಿಗೆ ಮಾರ್ಗದರ್ಶನ ದೊರೆಯುತ್ತದೆ ಎಂದು ಇದೇ ವೇಳೆ ಪ್ರಲ್ಹಾದ್ ಜೋಶಿ ಹೇಳಿದರು.