ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಪರೇಷನ್ ಹಸ್ತ (Operation Hasta) ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದರು.
ಸುಳ್ಳಿನ ಕಂತೆ
ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಅಧಿಕಾರದಲ್ಲಿ ಉಳಿಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದು ತಿಳಿಸಿದರು.
ಬಿಜೆಪಿಯ ದಿವಾಳಿತನ
ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಸೋತಿದೆ. ರಾಜ್ಯದಲ್ಲಿ ಇದುವರೆಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಇದು ಬಿಜೆಪಿಯ ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬರ ಪರಿಹಾರ ನೀಡಿಲ್ಲ
ಸಿಎಂ ಮತ್ತು ಡಿಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಆರೋಪ ಬಿಜೆಪಿ ಸರ್ಕಾರದ ಮೇಲಿತ್ತು. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತಿದೆ. ದೇಶದ ಪ್ರಧಾನಿಯಾದವರು ಈ ವಿಷಯದ ಬಗ್ಗೆಯೂ ಮಾತನಾಡಬೇಕಲ್ಲವೇ? ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲ ತನಿಖಾ ಸಂಸ್ಥೆಗಳಿವೆ, ಪುರಾವೆಗಳು, ದಾಖಲೆಗಳಿಲ್ಲದೆ ಆರೋಪ ಮಾಡಬಾರದು. ಇಂದು ಇಡೀ ದೇಶವೇ ದಿವಾಳಿಯಾಗಿದೆ. ರಾಜ್ಯದ ವಿರುದ್ಧ ಕೇಂದ್ರ ಮಲತಾಯಿ ಧೋರಣೆಯನ್ನು ತಳೆದಿದೆ. ಬರಗಾಲದ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಆದರೆ, ನಮ್ಮ ಸರ್ಕಾರ ಅವುಗಳನ್ನು ಸಾಧಿಸಿ ತೋರಿಸಿದೆ. ಇಂತಹ ಹೇಳಿಕೆಗಳನ್ನು ದೇಶದ ಪ್ರಧಾನ ಮಂತ್ರಿಗಳಿಂದ ಅಪೇಕ್ಷಿಸಿರಲಿಲ್ಲ. ತಮ್ಮ ರಾಜಕೀಯ ಭಾಷಣದಲ್ಲಿ ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನ ಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ ಎಂದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಉಪಹಾರ ಸಭೆ
ಮುಖ್ಯಮಂತ್ರಿಗಳು, ಶಾಸಕರೊಂದಿಗೆ ನಡೆಸಲಾದ ಉಪಾಹಾರ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಭೆಯನ್ನು ನಡೆಸಲಾಗಿತ್ತು. ಪ್ರತಿ ಜಿಲ್ಲೆಗೆ ಒಬ್ಬ ಮಂತ್ರಿಯನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಬರಗಾಲ ಪರಿಸ್ಥಿತಿ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ ಎಂದು ಹೇಳಿದರು.
ಬರ ಪರಿಹಾರ ಬಿಡುಗಡೆಗೊಳಿಸಲಿ
ಸಿಎಂ ಆದವರು ಪ್ರಧಾನಿಯವರನ್ನು ಭೇಟಿ ಮಾಡಿ ಬರ ಪರಿಹಾರ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ಕೋರಿ ಕೇಂದ್ರಕ್ಕೆ ಮನವಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಕುಮಾರಸ್ವಾಮಿಯವರು ಹೇಗಿದ್ದರೂ ಬಿಜೆಪಿಯವರೊಂದಿಗೆ ಸೇರಿದ್ದಾರೆ. ಅವರು ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಿಸಲು ಕೇಂದ್ರದೊಂದಿಗೆ ಮಾತನಾಡಲಿ ಎಂದು ಹೇಳಿದರು.
ಇದನ್ನೂ ಓದಿ: CM Siddaramaiah : ಬರ ಸಂಕಷ್ಟದ ನಡುವೆ ಸಿಎಂ ನಿವಾಸದ ನವೀಕರಣಕ್ಕೆ ಕೋಟಿ ಕೋಟಿ ಖರ್ಚು! ಬೇಕಿತ್ತಾ ದುಂದು ವೆಚ್ಚ?
ಹೈಕಮಾಂಡ್ ನಿರ್ಧಾರ
ಲೋಕಸಭೆ ಚುನಾವಣೆಗೂ ಮುಂಚೆ ಅಥವಾ ನಂತರ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಇವರಿಗೆ ಮಾತನಾಡುವ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರ ಆಯ್ಕೆಯನ್ನೇ ಬಿಜೆಪಿಯವರಿಗೆ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.