ಬೆಂಗಳೂರು: ಸರ್ಕಾರಕ್ಕೆ ಗ್ಯಾರಂಟಿಗಳಿಂದ ಯಾವುದೇ ನಷ್ಟವಾಗುತ್ತಿಲ್ಲ ಜನರ ದುಡ್ಡು ಜನರಿಗೆ ನೀಡುತ್ತಿದ್ದೇವೆ ಎಂದು ಇಂಧನ ಸಚಿವ (Power Minister) ಕೆ.ಜೆ ಜಾರ್ಜ್ (KJ George) ಪ್ರತಿಪಾದಿಸಿದ್ದಾರೆ. ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ Power point with HPK ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಾರ್ಜ್ ಅವರು ವಿದ್ಯುತ್ ವಲಯದ ಸುಧಾರಣೆ, ತಮ್ಮ ರಾಜಕೀಯ ಬದುಕಿನ ಕುರಿತು ವಿಸ್ತೃತವಾಗಿ ಮಾತನಾಡಿದರು.
ʻʻಸರ್ಕಾರ ನಡೆಯುತ್ತಿರುವುದು ಸಾಮಾನ್ಯ ಜನರ ತೆರಿಗೆ ಹಣದಿಂದ. ಈ ಗ್ಯಾರಂಟಿಗಳ ಮೂಲಕ ಅವರ ಹಣವನ್ನು ಅವರಿಗೇ ಕೊಡುವ ಕೆಲಸ ಮಾಡುತ್ತಿದ್ದೇವೆ. ಅವರ ಜೇಬಿಗೆ ಹೋದ ಹಣ ಮತ್ತೆ ಮಾರುಕಟ್ಟೆಗೆ ಬರುತ್ತದೆʼʼ ಎನ್ನುವುದು ಕೆ.ಜೆ. ಜಾರ್ಜ್ ಅವರ ಪ್ರತಿಪಾದನೆ.
ಬೆಳಗಾವಿಯ ಖಾನಾಪುರದ ಗೌಳಿವಾಡ ಗ್ರಾಮಕ್ಕೆ ಸಿಗಲಿದೆ ವಿದ್ಯುತ್
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೌಳಿವಾಡ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿರುವುದರ ಬಗ್ಗೆ ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ಸಂದರ್ಶನದ ವೇಳೆ ಈ ವರದಿಗೆ ಸ್ಪಂದಿಸಿದ ಸಚಿವರು, ʻʻನಿಮ್ಮ ವಾಹಿನಿ ಮೂಲಕ ಈ ಮಾಹಿತಿ ನನಗೆ ಸಿಕ್ಕಿತು. ಕೂಡಲೇ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಲ್ಲಿ ಎರಡು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಅಲ್ಲಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕೊಡಿಸುತ್ತೇವೆ. ಅಲ್ಲಿ ಕಂಬ ಹಾಕಲು ಅರಣ್ಯ ಪ್ರದೇಶ ಆಗಿರುವುದರಿಂದ ಸೋಲಾರ್ ಮೂಲಕ ವಿದ್ಯುತ್ ಕೊಡುವ ಕೆಲಸ ಮಾಡುತ್ತೇವೆ. ಮಾತ್ರವಲ್ಲ ನಾನೇ ಖುದ್ದು ಆ ಸ್ಥಳಕ್ಕೆ ಭೇಟಿ ನೀಡುತ್ತೇನೆಂದು ಹೇಳಿದರು.
ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದ ಜಾರ್ಜ್
ಸಂಪುಟದಲ್ಲಿರುವ ಹಿರಿಯ ಸಚಿವರು ಎರಡುವರೆ ವರ್ಷದ ನಂತರ ತಮ್ಮ ಸ್ಥಾನವನ್ನು ಬಿಟ್ಟುಕೊಡುವುದು ಉತ್ತಮ ಎಂಬ ಸಚಿವ ಕೆ.ಎಚ್. ಮುನಿಯಪ್ಪ ಅವರ ಸಲಹೆಯ ಬಗ್ಗೆ ಪ್ರತಿಕ್ರಿಯಿಸಿದ ಕೆ.ಜೆ. ಜಾರ್ಜ್ ಅವರು, ನಾನು ಎರಡುವರೆ ವರ್ಷ ಕಾಯುವವನೂ ಅಲ್ಲ. ಬೇಕಿದ್ದರೆ ಇಂದೇ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದರು. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದರು. ಈ ಬಾರಿ ಹೈಕಮಾಂಡೇ ನಾನು ಮಂತ್ರಿಯಾಗಬೇಕು ಎಂದು ಒತ್ತಡ ಹೇರಿತು ಎಂದು ವಿವರಿಸಿದರು.
ಗಣಪತಿ ಪ್ರಕರಣದಲ್ಲೂ ರಾಜೀನಾಮೆ ಬೇಡ ಎಂದಿದ್ದರು ಹಿರಿಯರು
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಾಗ ನಾನು ಕೂಡಲೇ ರಾಜೀನಾಮೆ ಕೊಡುತ್ತೇನೆ ಎಂದೆ. ಆದರೆ, ಸಿದ್ದರಾಮಯ್ಯ ಅವರು, ಆಗ ರಾಜ್ಯ ಉಸ್ತುವಾರಿಯಾಗಿದ್ದ ದಿದ್ವಿಜಯ ಸಿಂಗ್ ಅವರು ರಾಜೀನಾಮೆ ಕೊಡುವುದರಿಂದ ತಪ್ಪು ಸಂದೇಶ ಹೋಗುತ್ತದೆ, ಬೇಡ ಎಂದರು. ಆದರೆ, ನನಗೆ ನನ್ನ ಪ್ರಾಮಾಣಿಕತೆಯ ಬಗ್ಗೆ ನಂಬಿಕೆ ಇತ್ತು. ಅದು ಪ್ರೂವ್ ಆದ ಬಳಿಕವೇ ಮತ್ತೆ ಸಂಪುಟಕ್ಕೆ ಬರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಕ್ಲೀನ್ ಚಿಟ್ ಸಿಕ್ಕಿದ ನಂತರವೇ ಮತ್ತೆ ನನ್ನನ್ನು ಸಂಪುಟಕ್ಕೆ ತೆಗೆದುಕೊಂಡರು ಎಂದು ಅಂದಿನ ಘಟನಾವಳಿಗಳನ್ನು ಸ್ಮರಿಸಿದರು.
ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಮೊದಲು ಭ್ರಷ್ಟಾಚಾರವನ್ನು ಮಟ್ಟ ಹಾಕಲಿ: ಬಸವರಾಜ ರಾಯರೆಡ್ಡಿ
ಇದೇ ಕೊನೆ ಚುನಾವಣೆ, ಉತ್ತರಾಧಿಕಾರಿ ಇಲ್ಲ ಎಂದ ಜಾರ್ಜ್
ಇದು ಕೊನೆಯ ಚುನಾವಣೆ ಎಂದು ಸ್ಪಷ್ಟಪಡಿಸಿದ್ದೇನೆ. ಇನ್ನು ಮುಂದೆ ಸ್ಪರ್ಧೆ ಮಾಡುವುದಿಲ್ಲ. ನನ್ನ ಬಳಿಕ ಉತ್ತರಾಧಿಕಾರಿಯೂ ಇರುವುದಿಲ್ಲ ಎಂದ ಹೇಳುವ ಮೂಲಕ ಮಗ ರಾಣಾ ಅವರು ಕೂಡಾ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಖಚಿಪಡಿಸಿದರು.
ಸಂದರ್ಶನದ ಪೂರ್ಣ ವಿವರವನ್ನು ನಾಳೆ ನೋಡಿ
ಭಾನುವಾರ ಸಂಜೆ 7 ಗಂಟೆಗೆ ವಿಸ್ತಾರ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ‘Powerpoint with HPK’ ಕಾರ್ಯಕ್ರಮದಲ್ಲಿ ಸಚಿವರ ಸಂಪೂರ್ಣ ಸಂದರ್ಶನ ಬಿತ್ತರವಾಗಲಿದ್ದು, ಹಲವು ಹೊಸ ಸಂಗತಿಗಳ ಅನಾವರಣವಾಗಲಿದೆ. ತಪ್ಪದೆ ವೀಕ್ಷಿಸಿ.