Site icon Vistara News

Power Point with HPK : ಜನ ನಮಗೆ ಅಧಿಕಾರ ಕೊಟ್ಟಿದ್ದೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು!

Madhu Bangarappa in Power Point with HPK

ಬೆಂಗಳೂರು: ಜನ ನಮಗೆ ಅಧಿಕಾರವನ್ನು ಕೊಟ್ಟಿದ್ದೇ ಪಠ್ಯಪುಸ್ತಕವನ್ನು ಬದಲಾವಣೆ ಮಾಡಲು. ನಾವು ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿಕೊಂಡಿದ್ದೆವು. ಅದನ್ನು ನೋಡಿಯೇ ಜನ ನನಗೆ ಮತ ಹಾಕಿದ್ದಾರೆ. ಈ ಬಿಜೆಪಿಯವರು ಪಠ್ಯ ಬದಲಾವಣೆ ಮಾಡಿದ್ದು ಚುನಾವಣೆಗೋಸ್ಕರವಷ್ಟೇ. ಅವರ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಹೇಳಲಾಗಿತ್ತೇ? ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಅವರು ಹೀಗೆ ಮಾಡಿದ್ದರಷ್ಟೇ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ಬದಲಾವಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ,‌ ಪಠ್ಯ ಪುಸ್ತಕದ ಬದಲಾವಣೆಯ ಅವಶ್ಯಕತೆ ಖಂಡಿತಾ ಇತ್ತು. ನಮ್ಮನ್ನು ಅಧಿಕಾರಕ್ಕೆ ತಂದಿದ್ದೇ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲು ಎಂಬುದು ಎಲ್ಲರಿಗೂ ಗೊತ್ತಿರಲಿ. ಯಾವುದೇ ಒಂದು ಪಕ್ಷವು ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ನೀಡುತ್ತದೆ. ನಮ್ಮ ಪಕ್ಷದ ಪ್ರಣಾಳಿಕೆಯನ್ನು ಪಠ್ಯ ಪುಸ್ತಕ ಬದಲಾವಣೆಯೂ ಒಂದು. ಇನ್ನೊಂದು ಮುಖ್ಯ ಸಂಗತಿಯೆಂದರೆ ನಾನು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ನನಗೆ ಮತ ಹಾಕಿರುವುದು ನೀನು ಪರಿಷ್ಕರಣೆ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಆಗಿದೆ. ಇಲ್ಲಿ ನಾನು ಯಾವುದೋ ಒಂದು ಪಕ್ಷದ ವಿರುದ್ಧ ಅಥವಾ ಪರವಾಗಿ ಪರಿಷ್ಕರಣೆಯನ್ನು ಮಾಡಿಲ್ಲ. ಇದು ಮಕ್ಕಳ ಭವಿಷ್ಯಕ್ಕೆ ಏನು ಅನುಕೂಲ ಇದೆಯೋ ಅದನ್ನು ಮಾತ್ರ ನಾವು ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ತಜ್ಞರ ತಂಡದಿಂದ ಪರಿಷ್ಕರಣೆ ಮಾಡಿದ್ದೇವೆ

ಪಠ್ಯ ಪುಸ್ತಕವನ್ನು ಬದಲಾವಣೆ ಮಾಡಿದ್ದು ನಾವಲ್ಲ. ಇದಕ್ಕೆ ಸಾಹಿತಿಗಳು, ಶಿಕ್ಷರನ್ನೊಳಗೊಂಡ ಒಂದು ತಜ್ಞರ ತಂಡ ಇರುತ್ತದೆ. ಅವರಿಗೆ ನಾವು ಪರಿಷ್ಕರಣೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಅದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಸಿ ಎಂದು ಕೇಳಿಕೊಂಡಿದ್ದೆವು. ಅವರು ಪಠ್ಯವನ್ನು ಪರಿವೀಕ್ಷಣೆ ಮಾಡಿ 45 ತಪ್ಪುಗಳನ್ನು ಕಂಡು ಹಿಡಿದಿದ್ದರು. ಅದಾಗಲೇ ಪಠ್ಯ ಪುಸ್ತಕವು ವಿದ್ಯಾರ್ಥಿಗಳ ಕೈ ಸೇರಿದ್ದವು. ಆ ಅಷ್ಟನ್ನೂ ಸರಿಪಡಿಸಲು ಆಗಲಿಲ್ಲ. ಅದರಲ್ಲಿ ಕೆಲವು ಅಧ್ಯಾಯಗಳಲ್ಲಷ್ಟೇ ಬದಲಾವಣೆ ಮಾಡಿದ್ದೇವೆ. ಈಗ ಬರುವ ಪಠ್ಯ ಪುಸ್ತಕದಲ್ಲಿ ಸರಿಪಡಿಸಿದ್ದೇವೆ. ಇದರಲ್ಲಿ ಯಾವುದೇ ರೀತಿಯ ರಾಜಕಾರಣವನ್ನು ನಾವು ಮಾಡುತ್ತಿಲ್ಲ. ಇದರಲ್ಲಿ ಮಕ್ಕಳ ಹಿತರಕ್ಷಣೆ ಮಾತ್ರವೇ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.

ಮೂರೂವರೆ ವರ್ಷ ಅಧಿಕಾರದಲ್ಲಿ ಮೊದಲೇಕೆ ಮಾಡಲಿಲ್ಲ?

ವೀರ ಸಾವರ್ಕರ್‌ರಂಥ ದೇಶಭಕ್ತರ ಪಾಠಗಳನ್ನ ಕಾಂಗ್ರೆಸ್‌ ತೆಗೆದು ಹಾಕಿದೆ ಎಂದು ವಾದ ಮಾಡುವ ಪ್ರತಿಪಕ್ಷಗಳಿಗೆ ನಾನು ಪ್ರಶ್ನೆ ಕೇಳಲು ಬಯಸುತ್ತೇನೆ. ಈಗ ಮೂರೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರ ಇತ್ತಲ್ಲವೇ? ಅವರ ಸರ್ಕಾರದ ಅವಧಿಯಲ್ಲಿ ಯಾವ ಪಠ್ಯ ಇತ್ತಂತೆ? ಈಗ ನಾವು ಅಳವಡಿಸಿರುವುದು ಅದೇ ಹಳೇ ಪಠ್ಯವಾಗಿತ್ತು. ಅವರು ಚುನಾವಣೆ ಸಮಯದಲ್ಲಿ ಏಕೆ ಪಠ್ಯವನ್ನು ಬದಲಾವಣೆ ಮಾಡಬೇಕಿತ್ತು? ಮಕ್ಕಳ ಮನಸ್ಸಿನಲ್ಲಿ ಏಕೆ ಇಂಥ ಭಾವನೆಯನ್ನು ಬಿತ್ತಬೇಕು? ಅವರಿಗೆ ಮೂರೂವರೆ ವರ್ಷ ಅವಕಾಶ ಇದ್ದಾಗ ಏಕೆ ಪಠ್ಯವನ್ನು ಬದಲಾವಣೆ ಮಾಡಿರಲಿಲ್ಲ? ಚುನಾವಣೆ ಬಂದಾಗಲೇ ಮಾಡಬೇಕಿತ್ತಾ? ಮತ್ತು ಬಿಜೆಪಿಯವರ ಪ್ರಣಾಳಿಕೆಯಲ್ಲಿ ಸಹ ಪಠ್ಯ ಪರಿಷ್ಕರಣೆ ಬಗ್ಗೆ ಎಲ್ಲಿಯೂ ಹಾಕಿರಲಿಲ್ಲ ಎಂದು ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಹರಿಹಾಯ್ದರು.

ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಬಗ್ಗೆ ಬಿ.ಕೆ. ಹರಿಪ್ರಸಾದ್‌ ಮಾತನಾಡಿದ್ದು ತಪ್ಪು ಎಂದ ಚಲುವರಾಯಸ್ವಾಮಿ

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಅಧಿಕಾರ ಹಿಡಿಯದ ಬಿಜೆಪಿ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯವರು ಎಂದೂ ಸಹ ಪ್ರಜಾಪ್ರಭುತ್ವದ ಮಾದರಿಯಲ್ಲಿ ಅಧಿಕಾರವನ್ನು ಹಿಡಿಯಲೇ ಇಲ್ಲ. ಅವರ ಹಣೆಬರಹಕ್ಕೆ ಇದಾಗಲೇ ಅಲ್ಲ. ಅವರು ಅಧಿಕಾರಕ್ಕೆ ಬಂದಿದ್ದು ಬ್ರಿಟಿಷರ ರೀತಿಯಲ್ಲಿ ವ್ಯಾವಹಾರಿಕವಾಗಷ್ಟೇ. ಬ್ರಿಟಿಷರು ಆಡಳಿತ ನಡೆಸಿದಂತೆ ಅವರು ಇಲ್ಲಿ ಆಡಳಿತವನ್ನು ನಡೆಸಿದ್ದಾರೆ ಎಂದು ಮಧು ಬಂಗಾರಪ್ಪ ಆಕ್ರೋಶವನ್ನು ಹೊರಹಾಕಿದರು.

Exit mobile version