ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ಗೆ ದೊಡ್ಡ ಆಘಾತ ಉಂಟಾಗಿದೆ. ಪ್ರಜ್ವಲ್ ರೇವಣ್ಣ ಅವರ (Prajwal Revanna) ಸಂಸತ್ ಸದಸ್ಯತ್ವ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಇನ್ನು 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
2019ರ ಲೋಕಸಭಾ ಚುನಾವಣೆ ವೇಳೆ ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಎ.ಮಂಜು ಮತ್ತು ದೇವರಾಜೇಗೌಡ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಎ.ಮಂಜು ಮನವಿ ಮಾಡಿದ್ದರು. ಆದರೆ, ಮನವಿಯನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಪೀಠದಿಂದ ವಜಾಗೊಳಿಸಿದೆ. ಇನ್ನು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರು ಮುಂದಾಗಿದ್ದಾರೆ.
ಇದನ್ನೂ ಓದಿ | Karnataka Politics : ಜೆಡಿಎಸ್ ಶಾಸಕರಿಗೆ ಮಂಜೂರಾದ ಮನೆಗಳು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಶಿಫ್ಟ್; ಏನಿದು ವಸತಿ ರಾಜಕಾರಣ?
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹಕ್ಕೆ ಕಾರಣವೇನು?
ಪ್ರಜ್ವಲ್ ರೇವಣ್ಣ ಅವರು ಸರ್ಕಾರಿ ಜಮೀನು ಖರೀದಿಸಿದ್ದಾರೆ. ಆದಾಯ ತೆರಿಗೆ ವಂಚಿಸಿ ಬೇನಾಮಿ ಆಸ್ತಿ ಗಳಿಸಿದ್ದಾರೆ. ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಅದರ ಮೌಲ್ಯವನ್ನು 14 ರೂ. ಲಕ್ಷ ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ ಕೇವಲ 5 ಲಕ್ಷ ಇದೆ ಎಂದು ನಾಮಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ದೇವರಾಜೇಗೌಡ ಆರೋಪಿದ್ದರು.
ಇದನ್ನೂ ಓದಿ | Karnataka Politics : ಬಿ.ಎಲ್ ಸಂತೋಷ್ ಮೊದಲು ಬಿಜೆಪಿ ಶಾಸಕರ ಜತೆ ಸಂಪರ್ಕ ಸಾಧಿಸಲಿ: ಕಾಲೆಳೆದ ಕಾಂಗ್ರೆಸ್
ಪ್ರಜ್ವಲ್ ಮುಂದಿರುವ ಆಯ್ಕೆಗಳೇನು?
2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಒಂದು ಸ್ಥಾನವೂ ಕಳೆದುಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಭಾರಿ ಹಿನ್ನಡೆಯಾಗಿದೆ. ಆದರೆ, ಈಗ ಅನರ್ಹತೆಯಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಅಪೀಲು ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ ಸಾಂವಿಧಾನಿಕ ವಿಚಾರಗಳಿರುವುದರಿಂದ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಅರ್ಜಿ ಸಲ್ಲಿಸುವುದು ಮತ್ತೊಂದು ಮಾರ್ಗವಾಗಿದೆ. ಆರು ತಿಂಗಳ ಒಳಗೆ ಅನರ್ಹತೆ ರದ್ದಾಗದಿದ್ದರೆ ಮುಂದಿನ ಆರು ವರ್ಷಗಳ ಕಾಲ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸುವಂತಿಲ್ಲ. ಹೀಗಾಗಿ ಹೈಕೋರ್ಟ್ ಅನರ್ಹತೆ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ, ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.