Site icon Vistara News

Prajwal Revanna : ಪ್ರಜ್ವಲ್‌ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್‌; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ

prajwal Revanna

ಬೆಂಗಳೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Parlimament Elections 2019) ಕಣಕ್ಕಿಳಿಯುವ ವೇಳೆ ಚುನಾವಣಾ ಆಯೋಗಕ್ಕೆ (Election Commission) ಸುಳ್ಳು ಮಾಹಿತಿ (False Information) ನೀಡಿದ್ದಾರೆಂಬ ಆರೋಪ ಹೊತ್ತು ಸಂಸತ್‌ ಸ್ಥಾನದಿಂದ ಅನರ್ಹರಾಗಿದ್ದ (Disqaulification from parliament Membership) ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassana MP Prajwal Revanna) ಅವರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ (Supreme Court big relief) ನೀಡಿದೆ.

ಅವರನ್ನು ಅನರ್ಹಗೊಳಿಸಿದ ರಾಜ್ಯ ಹೈಕೋರ್ಟ್‌ ಆದೇಶಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್‌ ಅದೇ ವೇಳೆಗೆ ಅವರಿಗೆ ಇರುವ ಕೆಲವೊಂದು ಹಕ್ಕುಗಳನ್ನು ಕಿತ್ತುಕೊಂಡಿದೆ. ಆದರೆ, ಅವರ ಸಂಸತ್‌ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಿದೆ.

ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ದಾವೆಯ ವಿಚಾರಣೆ ಕಳೆದು ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು, ಕೆಲವು ದಿನಗಳ ಹಿಂದೆ ರಾಜ್ಯ ಹೈಕೋರ್ಟ್‌ ತನ್ನ ತೀರ್ಪನ್ನು ಪ್ರಕಟಿಸಿತ್ತು. ಪ್ರಜ್ವಲ್‌ ರೇವಣ್ಣ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಹೈಕೋರ್ಟ್‌ ಮುಂದಿನ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು. ಅದರ ಪ್ರಕಾರ 2024 ಮಾತ್ರವಲ್ಲ, 2029ರ ಚುನಾವಣೆಯಲ್ಲೂ ಅವರು ಸ್ಪರ್ಧೆ ಮಾಡುವಂತಿರಲಿಲ್ಲ.

ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್‌ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್‌, ಪರಡಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಮುಂದಿನ ನಾಲ್ಕು ವಾರಗಳ ಅವಧಿಗೆ ಈ ತಡೆಯಾಜ್ಞೆ ಜಾರಿಯಲ್ಲಿರುತ್ತದೆ. ಬಳಿಕ ಮುಂದಿನ ವಿಚಾರಣೆ ನಡೆದು ಅಂತಿಮ ತೀರ್ಮಾನ ಪ್ರಕಟವಾಗಲಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಮುಖ್ಯಾಂಶಗಳೇನು?

ಪ್ರಜ್ವಲ್‌ ರೇವಣ್ಣ ಅವರ ರಾಜಕೀಯ ಬದುಕಿಗೇ ಪ್ರಶ್ನಾರ್ಥಕ ಚಿಹ್ನೆಯಾಗಿದ್ದ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಅವರಿಗೆ ದೊಡ್ಡ ರಿಲೀಫ್‌ ನೀಡಿದೆ.

  1. ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್‌ ಆದೇಶಕ್ಕೆ ನಾಲ್ಕು ತಿಂಗಳ ತಡೆಯಾಜ್ಞೆ.
  2. ಪ್ರಜ್ವಲ್‌ ರೇವಣ್ಣ ಅವರ ಲೋಕಸಭಾ ಸದಸ್ಯತ್ವಕ್ಕೆ ಚ್ಯುತಿ ಇಲ್ಲ.
  3. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ.
  4. ಆದರೆ, ಸಂಸದರಿಗೆ ಸಿಗುವ ಯಾವುದೇ ಭತ್ಯೆಗಳು ಸಿಗುವುದಿಲ್ಲ.
  5. ಅಧಿವೇಶನದಲ್ಲಿ ಮತ ಹಾಕಲು ಇರುವ ಅಧಿಕಾರ ಮೊಟಕು.

ಏನಿದು ಪ್ರಜ್ವಲ್‌ ರೇವಣ್ಣ ಸುಳ್ಳು ಮಾಹಿತಿ ಪ್ರಕರಣ?

ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಗೆ ಸ್ಪರ್ಧಿಸುವ ವೇಳೆ ಪ್ರಜ್ವಲ್‌ ರೇವಣ್ಣ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಗಳನ್ನು ನೀಡಿ ಸ್ಪರ್ಧೆ ಮಾಡಿದ್ದಾರೆ ಎನ್ನುವುದು ಆರೋಪ. ಹೀಗಾಗಿ ಅವರ ಸಂಸದ ಸ್ಥಾನವನ್ನು ಅಸಿಂಧುಗೊಳಿಸಿ ತಮ್ಮನ್ನು ಸಂಸದನಾಗಿ ಘೋಷಣೆ ಮಾಡಬೇಕು ಎಂದು ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿ ಎ.ಮಂಜು ಹಾಗೂ ಬಿಜೆಪಿ ಮುಖಂಡ ದೇವರಾಜಗೌಡ ಅವರು 2019ಲ್ಲೇ ದೂರು ದಾಖಲಿಸಿದ್ದರು.

ಈ ದೂರನ್ನು ಆಧರಿಸಿ ಚುನಾವಣಾ ಆಯೋಗವು ತನ್ನ ಪಾಲಿನ ವರದಿ ಸಲ್ಲಿಸಿತ್ತು. ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣವು ಹೈಕೋರ್ಟ್‌ನಲ್ಲಿ ಹಲವು ವಿಚಾರಣೆಗಳು ನಡೆದಿದ್ದವು.

ಪ್ರಜ್ವಲ್‌ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಕೊಟ್ಟಿದ್ದಾರೆಂಬ ಆರೋಪ ಸಾಬೀತಾಗಿದ್ದರಿಂದ ಸೆ.1ರಂದು ಹೈಕೋರ್ಟ್‌ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಮಾತ್ರವಲ್ಲ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶ ನೀಡಿತ್ತು.

ಅನರ್ಹತೆ ಆದೇಶ ಅಮಾನತಿನಲ್ಲಿಡಲೂ ಅವಕಾಶ ನೀಡಲಿಲ್ಲ

ಹೈಕೋರ್ಟ್‌ ಆದೇಶದ ಮೂಲಕ ಲೋಕಸಭಾ ಸ್ಥಾನ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ ತಾವು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದ್ದು, ಅಲ್ಲಿಯವರೆಗೆ ಆದೇಶವನ್ನು ಅಮಾನತಿನಲ್ಲಿಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಮಾನ್ಯ ಮಾಡದ ಹೈಕೋರ್ಟ್‌ ಅಸಿಂಧು ಆದೇಶಕ್ಕೆ ತಡೆಯನ್ನು ನೀಡದೆ ಪ್ರಜ್ವಲ್‌ ಅರ್ಜಿಯನ್ನೇ ವಜಾಗೊಳಿಸಿತ್ತು. ಇದರಿಂದ ಪ್ರಜ್ವಲ್‌ ರೇವಣ್ಣ ಅವರಿಗೆ ಮತ್ತೆ ಹಿನ್ನಡೆಯಾಗಿತ್ತು.

ಈ ನಡುವೆ, ಮಾಜಿ ಪ್ರಧಾನಿ ದೇವೇಗೌಡರ ಸಲಹೆಯೊಂದಿಗೆ ರೇವಣ್ಣ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಅನರ್ಹತೆಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿಯ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೊಹಟಗಿ ಮತ್ತು ವೇಣುಗೋಪಾಲ ವಾದ ಮಂಡನೆ ಮಾಡಿದ್ದರು.

Exit mobile version