ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಳ್ಳಲಿವೆ ಎಂಬ ಸುದ್ದಿಗಳ ನಡುವೆ ಬಿಜೆಪಿಯ ಕೆಲವು ನಾಯಕರು ಸಿಡಿದೆದ್ದಿದ್ದಾರೆ. ಅವರ ಧ್ವನಿಯಾಗಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಕಾಣಿಸಿಕೊಂಡಿದ್ದಾರೆ. ಮಾಧ್ಯಮ ಗೋಷ್ಠಿ ನಡೆಸಿದ ಅವರು ಅತ್ಯಂತ ಮುಕ್ತವಾಗಿ ಈ ಮೈತ್ರಿಯ ಪ್ರಸ್ತಾಪವನ್ನು, ಅದನ್ನು ಮುಂದಿಟ್ಟ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ನಾನಂತೂ ಮೈತ್ರಿಯನ್ನು ಒಪ್ಪಲ್ಲ ಎಂದು ಸ್ಪಷ್ಟಪಡಿಸಿದ ಅವರು ಅದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಡಿ.ಕೆ. ಸುರೇಶ್ (DK Suresh) ಅವರನ್ನು ಹೊಗಳಿದ್ದು ಅಚ್ಚರಿ ಮೂಡಿಸಿತು. ಹಾಗಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾದರೆ ಅವರು ಕಾಂಗ್ರೆಸ್ ಸೇರುವ ಸೂಚನೆ ಇದು ಎಂಬಂತೆ ಭಾಸವೂ ಆಯಿತು.
ಪ್ರೀತಂ ಗೌಡ ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುತ್ತಿರುವ ನಾಯಕ. ಜೆಡಿಎಸ್‌ನ ಗಟ್ಟಿ ನೆಲದಲ್ಲಿ ಅವರು ಬಿಜೆಪಿಯ ಕಮಲ ಅರಳಲು ಭಾರಿ ಸಾಹಸವನ್ನೇ ನಡೆಸಿದ್ದಾರೆ. ಇಂಥ ಪ್ರೀತಂ ಗೌಡ ಅವರಿಗೆ ಮುಂದಿನ ಚುನಾವಣೆಯಲ್ಲಿ ತಾನು ಹೋಗಿ ಜೆಡಿಎಸ್ ಪರ ಮತ ಕೇಳಬಹುದಾದ ಸನ್ನಿವೇಶ ನಿರ್ಮಾಣವಾಗಲಿದೆ ಎಂಬುದನ್ನು ಕಲ್ಪನೆ ಮಾಡುವುದಕ್ಕೇ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸಿಡಿದುಬಿದ್ದಿದ್ದಾರೆ.
ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಜೆಡಿಎಸ್ ನಾಯಕರ ವಿರುದ್ಧ ದೊಡ್ಡ ಸಮರವನ್ನೇ ಸಾರಿ, ಅಂತಿಮವಾಗಿ ಸೋಲು ಕಂಡ ಪ್ರೀತಮ್ ಗೌಡ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಹಾಕಿ ಎಂದು ಕಾರ್ಯಕರ್ತರನ್ನು ಹೇಗೆ ಕೇಳಲಿ ಎಂಬ ಮೂಲ ಪ್ರಶ್ನೆಯನ್ನು ಎತ್ತಿದ್ದಾರೆ. ಹಾಸನದಲ್ಲಿ ಇದು ಬೇಕಾಗೇ ಇರಲಿಲ್ಲ ಎನ್ನುವುದು ಅವರ ಸ್ಪಷ್ಟ ನುಡಿ.
ಡಿಕೆ ಸುರೇಶ್ ಗೆಲ್ಲಲಿ ಬಿಡಿ, ಒಕ್ಕಲಿಗರಲ್ವಾ? ಯೋಗೇಶ್ವರ್ ಮೇಲೆ ವಾಗ್ದಾಳಿ
ಕೆಲವೇ ಕೆಲವು ವ್ಯಕ್ತಿಗಳ ಸ್ವಾರ್ಥಕ್ಕಾಗಿ ಈ ಮೈತ್ರಿಯ ಪ್ರಸ್ತಾಪ ಮುಂದೆ ಬಂದಿದೆ. ಈಗ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಬಂದಿದೆ. ಹೀಗಾಗಿ ಅವರ ಆಟ ನಡೆಯುವುದಿಲ್ಲ ಎಂದು ಬಿಜೆಪಿ ಜತೆ ಕೈಜೋಡಿಸಲು ಬಂದಿದ್ದಾರೆ. ಒಂದು ವೇಳೆ ಬಿಜೆಪಿಗೆ 100 ಸೀಟು ಬಂದಿದ್ದರೆ ಇವರ ಆಟ ಹೇಗಿರುತ್ತಿತ್ತು ಅಂತ ನಾವೇ ನೋಡಿದ್ದೀವಲ್ಲಾ.. ಇಂಥವರನ್ನು ನಂಬಿ ಮೈತ್ರಿ ಮಾಡಿಕೊಂಡರೆ ನಮ್ಮ ಕಾರ್ಯಕರ್ತರಿಗೆ ನಾವು ಏನು ಹೇಳೋಣ ಎಂದು ಪ್ರೀತಂ ಗೌಡ ಕೇಳಿದ್ದಾರೆ.
ʻʻಈ ಮೈತ್ರಿಯ ಮೂಲ ಉದ್ದೇಶ ಇರುವುದು ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸೋದಕ್ಕೆ. ನಾನು ಮತ್ತು ಕುಮಾರಸ್ವಾಮಿ ಅವರು ಒಂದಾಗ್ತೇವೆ ಅಂತಾ ಪಾಪ ನಮ್ಮ ಪಕ್ಷದ ಲೀಡರೇ (ಸಿ.ಪಿ. ಯೋಗೇಶ್ವರ್) ಮಾತನಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಸ್ವಾಮಿ ನೀವು ಕುಮಾರಸ್ವಾಮಿ ವಿರುದ್ಧ ಚುನಾವಣೆ ಮಾಡಿದ್ರಿ. ನಿಮ್ಮನ್ನ ನಂಬಿಕೊಂಡು ಕಾರ್ಯಕರ್ತರಿದ್ದಾರೆ. ಆ ಕಾರ್ಯಕರ್ತರನ್ನ ಬಿಟ್ಟು, ಈಗ ಸುರೇಶ್ ಅವರನ್ನು ಸೋಲಿಸೋದಕ್ಕೆ ನಾನು ಕುಮಾರಸ್ವಾಮಿ ಒಂದಾಗ್ತೇವೆ ಅಂದ್ರೆ ಏನರ್ಥ? ಮುಂದಿನ ಚುನಾವಣೆಯಲ್ಲಿ ನಿಮ್ಮ ಜೊತೆ ಯಾರು ನಿಲ್ತಾರೆʼʼ ಎಂದು ಸ್ವಪಕ್ಷದ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಪ್ರೀತಂ ಗೌಡ.
ʻʻನಾನು ಮಾತಾಡ್ತಾ ಇರೋದು ದೂರದೃಷ್ಟಿಯ ರಾಜಕಾರಣ. ಬಿಜೆಪಿಗೆ 2028ಕ್ಕೆ ಅಧಿಕಾರ ಸಿಗಲಿಲ್ಲ ಅಂದ್ರೆ ಬಿಡಿ 33 ಕ್ಕೆ ಕಾಯೋಣ. ಅರ್ಜೆಂಟ್ ಏನಿದೆ? ಯಾರನ್ನೋ ಒಬ್ಬರನ್ನು ಸೋಲಿಸೋದಕ್ಕೆ ನಾವು ಒಂದಾಗ್ತೀವಿ ಅನ್ನೋದು ತಪ್ಪು. ಬಿಜೆಪಿ ಗೆಲ್ಲಬೇಕು ಅನ್ನೋ ಮಾನಸಿಕತೆ ಇಟ್ಕೊಂಡು ಚುನಾವಣೆ ಮಾಡಿದ್ರೆ ಬಿಜೆಪಿ ಗೆಲ್ಲುತ್ತೆ. 28ಕ್ಕೆ 28ನ್ನೂ ಗೆಲ್ತೀವಿ, ನನಗೆ ನಂಬಿಕೆ ಇದೆʼʼ ಎಂದು ಹೇಳಿರುವ ಪ್ರೀತಂ ಗೌಡ, ಡಿ.ಕೆ ಸುರೇಶ್ ಅವರು ಎಂಪಿ ಆಗಲಿ ಬಿಡಿ, ಹಿಂದೆ ಆಗಿದ್ರು, ಈಗ ಆದ್ರೆ ತಪ್ಪೇನು? ಡಿಕೆ ಸುರೇಶ್ ಒಕ್ಕಲಿಗರಲ್ವಾ?ʼʼ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ʻʻಅವರನ್ನು (ಡಿ.ಕೆ. ಸುರೇಶ್) ಸೋಲಿಸೋದಕ್ಕೆ ಬಿಜೆಪಿ ಜೆಡಿಎಸ್ ಜತೆಗೆ ಹೋಗಬೇಕು ಎಂಬ ಮಾನಸಿಕತೆ ಯಾಕೆ ನಮ್ಮ ಪಕ್ಷದ ಲೀಡರ್ ಗಳಿಗೆ? ಅ ಮಾನಸಿಕತೆಯಿಂದ ಹೊರಬರಲಿʼʼ ಎಂದರು.
ಡಿ.ಕೆ. ಶಿವಕುಮಾರ್‌ಗೂ ಐದು ವರ್ಷ ಕೊಟ್ಟಿದ್ದಾರೆ.. ಮಾಡಲಿ ಬಿಡಿ
ʻʻರಾಜ್ಯದ ಜನರು ಎರಡು ಬಾರಿ ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ರು. ಈಗ ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರೂ ಒಕ್ಕಲಿಗರು. ಇನ್ನು ಹತ್ತು ವರ್ಷ ಆದ್ಮೇಲೆ ಪ್ರೀತಂಗೌಡ ನಮ್ಮೋನು ಅಂತಾ ಬಿಜೆಪಿ ನಮ್ಮ ಸಮಾಜ ಅಂತಾ ಶಕ್ತಿ ತುಂಬಬಹುದು. ಈಗ ಐದು ವರ್ಷ ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ ಮಾಡಲಿ ಬಿಡಿʼʼ ಎಂದು ಯೋಗೇಶ್ವರ್ ನಡೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ ಪ್ರೀತಂ ಗೌಡ.
ನಾವು ಅವರ ಪಕ್ಷ ಉಳಿಸೋಕೆ ಇರೋರಲ್ಲ ಎಂದ ಪ್ರೀತಂ
ʻʻಅವರ ಪಕ್ಷ (ಜೆಡಿಎಸ್) ಉಳಿಸಕೊಳ್ಳೋದಕ್ಕೆ ಮೈತ್ರಿ ಅವಶ್ಯಕ ಅಂತಾ ಹೇಳಿದ್ದಾರೆ. ನಾವು ಜೆಡಿಎಸ್ ಪಕ್ಷ ಉಳಿಸೋದಕ್ಕೆ ಇರೋ ಕಾರ್ಯಕರ್ತರಲ್ಲʼʼ ಎಂದು ಕಟುವಾಗಿ ಹೇಳಿದ್ದಾರೆ ಪ್ರೀತಂ.
ಹಳೆ ಮೈಸೂರು ಭಾಗದಲ್ಲಿ ಅಂತ ಪರಿಸ್ಥಿತಿ ಇಲ್ಲ
ನಮ್ಮ ಕೆಲವು ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಕಷ್ಟ ಆಗಿಬಿಟ್ಟರೆ ಅಂತ ಅನಿಸಿರುತ್ತದೆ. ಜೆಡಿಎಸ್ ಜೊತೆ ಹೋದ್ರೆ ನಾವೂ ಹೆಂಗೋ ಒಂಚೂರ್ ತೂರ್ಕೊಂಡ್ ಹೋಗಿಬಿಡೋಣ ಅಂತ ಇರುತ್ತದೆ. ಅದರೆ, ಆ ಅವಶ್ಯಕತೆ ಹಳೇ ಮೈಸೂರು ಭಾಗದ ಬಿಜೆಪಿ ಕಾರ್ಯಕರ್ತರಿಗಿಲ್ಲ ಎಂದು ಪ್ರೀತಂ ಗೌಡ ಸ್ಪಷ್ಟವಾಗಿ ಹೇಳಿದರು.
ಮ್ಯಾಥ್ಸ್ ಹೇಳಿದರೆ ಆಗಲ್ಲ, ಅದಕ್ಕೆ ಬೇಸ್ ಕೂಡಾ ಬೇಕಲ್ವಾ?
ʻʻನಮಗೆ ಈ ರೀತಿ ಮಾಡುದ್ರೆ ಒಳ್ಳೆಯದಾಗುತ್ತೆ. ಹಿಂಗೆಲ್ಲಾ ಮಾಡಿದ್ರೆ ಜೆಡಿಎಸ್ ಗೆ ಸೀಟ್ ಬರುತ್ತೆ ಅಂತ ಎಲ್ಲೋ ಕೂತ್ಕೊಂಡು ಇವರು ಮ್ಯಾಥ್ಸ್ ಹೇಳ್ತಾರೆ. ನಿಮಗೆ ಸೀಟ್ ಬರುತ್ತೆ ಹಾಗಾಗಿ ಮೈತ್ರಿ ಮಾಡಿಕೊಳ್ಳೋಣ ಅಂತಾ ಹೇಳಿದ್ರೆ ಕೇಳ್ಬೇಕಾ? ಆ ಮೈತ್ರಿಗೆ ಬೇಸ್ ಎಲ್ಲಿದೆ ಅಂತಾ ಯೋಚನೆ ಮಾಡಬೇಕಲ್ಲ. ಹೀಗೆ ಮಾಡಿದರೆ ಪ್ರತಿ ಊರಿನಲ್ಲಿರುವ ಕಾರ್ಯಕರ್ತರ ಸ್ಥಿತಿ ಏನಾಗಬೇಡ?ʼʼ ಎಂದು ಪ್ರಶ್ನಿಸಿದ್ದಾರೆ.
ಹಾಗಿದ್ದರೆ ಎಲ್ಲಾ ಸೀಟು ನಮಗೇ ಬಿಟ್ಟು ಕೊಡ್ತಾರಾ?
ಆಯ್ತು ಅವರಿಗೆ ಮೈತ್ರಿ ಬೇಕಲ್ವಾ? ಹಾಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಅವರು ಬಿಜೆಪಿಗೇ ಬೆಂಬಲ ಕೊಡ್ತಾರಾ? ನಾವು ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ವಸ್ತು ಸ್ಥಿತಿ ಆಧರಿಸಿ ಬೆಂಬಲ ಕೊಡೋಣ. ಆ ಒಪ್ಪಂದಕ್ಕೆ ಬರ್ತಾರಾ? ಎಂದು ಕೇಳಿದರು ಪ್ರೀತಂ ಗೌಡ.
ಪ್ರೀತಮ್ ಗೌಡ ಆಕ್ರೋಶದ ಮಾತುಗಳ ಝಲಕ್ ಇಲ್ಲಿದೆ
- ಅವರು ಅದೇ ಅಜೆಂಡಾ ಇಟ್ಕೊಂಡು ಬಂದ್ರೆ ಅದನ್ನ ರಾಜ್ಯದ ಯಾವುದೇ ಬಿಜೆಪಿ ಕಾರ್ಯಕರ್ತ ಒಪ್ಪೋದಿಲ್ಲ. ಅದರಲ್ಲಿ ಪ್ರೀತಂಗೌಡ ಕೂಡಾ ಒಬ್ಬ, ಕಾರ್ಯಕರ್ತರ ಭಾವನೆಯನ್ನು ನಿಮ್ಮ ಜೊತೆ ತಿಳಿಸ್ತಾ ಇದ್ದೇನೆ.
- ನಮ್ಮ ಪಕ್ಷ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡ್ತಾ ಇದೆ. ಹಾಸನದಲ್ಲಿ ಯಾರು ಅಭ್ಯರ್ಥಿ ಆಗ್ತಾರೆ, ಅವರ ಕುಟುಬದವರು ಅಭ್ಯರ್ಥಿ ಆಗ್ತಾರೆ. ನಾವು ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಸಾಧ್ಯವೇ?
- ನಾಲ್ಕು ತಿಂಗಳ ಹಿಂದೆ ಬಂದು ನಮ್ಮ ವಿರುದ್ಧ ಚುನಾವಣೆ ಮಾಡಿದವರು ಅವರು. ಈಗ ನಮ್ಮ ಪಕ್ಷ ಉಳಿಸಿಕೊಳ್ಳಬೇಕು, ಬಿಜೆಪಿಯವರೆಲ್ಲಾ ನಮಗೆ ಓಟ್ ಹಾಕ್ತಾರೆ ಅಂತಾ ಯೋಚನೆ ಮಾಡಿದ್ರೆ ಆಗುತ್ತಾ?
- ನೆನಪಿರಲಿ, ರಾಜಕಾರಣ ಮ್ಯಾತ್ ಮೆಟಿಕ್ಸ್ ಅಲ್ಲ ಕೆಮಿಸ್ಟ್ರಿ ಅನ್ನೋದು ನನಗಿಂತ ಹೆಚ್ಚಾಗಿ ಅವರಿಗೆ ಗೊತ್ತಿದೆ. ಆ ಕೆಮಿಸ್ಟ್ರಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ಮಾತ್ರ ನಡೆಯಲ್ಲ.
- ಪ್ರೀತಂ ಗೌಡನನ್ನು ಜಿಲ್ಲೆಯಿಂದ ಓಡಿಸಿ ಅಂತಾ ಹೇಳುದ್ರೋ, ಪ್ರೀತಂಗೌಡನನ್ನ ರಾಜಕೀಯವಾಗಿ ಮುಗಿಸಿ ಅಂತಾ ಹೇಳಿದ್ರೋ ಒಂದು ಹೆಜ್ಜೆ ಮುಂದೆ ಹೋಗಿ ರಾಜಕಾರಣನೇ ಮಾಡಬಾರದು ಅನ್ನೋ ರೀತಿ ಹೇಳಿದ್ರೋ ಅಂತವರನ್ನು ಗೆಲ್ಲಿಸಿ ಅಂತ ಕೇಳೋ ಮನಸ್ಥಿತಿ ಹೇಗೆ ಬರುತ್ತದೆ. ಆ ಮನಸ್ಥಿತಿ ಬರೋದಕ್ಕೆ ಸಾಧ್ಯವೇ ಇಲ್ಲ.