ಬೆಳಗಾವಿ: ಬೆಳಗಾವಿ ವಿಧಾನಸೌಧದಲ್ಲಿ ಕಳೆದ ಬಿಜೆಪಿ ಸರ್ಕಾರ ಇದ್ದಾಗ ಹಾಕಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ (Veer Savarkar) ಅವರ ಫೋಟೊ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಫೋಟೊ ತೆಗೆದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನಗೆ ಬಿಟ್ಟರೆ ಇಂದೇ ಅವರ ಫೋಟೊವನ್ನು ತೆಗೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಕೆಂಡವಾಗಿದ್ದು, ಪ್ರಿಯಾಂಕ್ ಖರ್ಗೆ ಅವರು ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶವನ್ನು ಹೊರಹಾಕಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವೀರ ಸಾವರ್ಕರ್ ಅವರ ಯಾವ ತತ್ವ ಸಿದ್ಧಾಂತದಲ್ಲಿಯೂ ಸಮಾನತೆ ಕಾಣಲ್ಲ. ಅದನ್ನು ನಾನು ಒಪ್ಪಲ್ಲ. ಯಾವ ತತ್ವ ಸಿದ್ಧಾಂತದ ಪ್ರೇರಿತವಾಗಿ ಗಾಂಧೀಜಿ ಹತ್ಯೆಯಾಗಿದೆ? ನನ್ನನ್ನು ಬಿಟ್ಟರೆ ಬೆಳಗಾವಿ ವಿಧಾನಸೌಧದೊಳಗೆ ಇರುವ ವೀರ ಸಾವರ್ಕರ್ ಅವರ ಫೋಟೊವನ್ನು ಇವತ್ತೇ ತೆಗೆದುಹಾಕುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಉ.ಕ ಜಿಲ್ಲಾ ಶಾಸಕರಲ್ಲೇ ಒಡಕು! ತಮ್ಮ ತಾಲೂಕಿಗೇ ಬೇಕೆಂದು ಸದನದಲ್ಲಿ ಕಿತ್ತಾಟ
ಹೀಗೆ ವಿಧಾನಸೌಧದೊಳಗೆ ಇರುವ ಫೊಟೊವನ್ನು ತೆಗೆಯುವ ಕೆಲಸ ನಿಯಮಾನುಸಾರವಾಗಿ ಆಗಬೇಕು. ಈ ವಿಷಯದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ನಿರ್ಧಾರವನ್ನು ನೋಡೋಣ. ನಾನು ಸಂವಿಧಾನವನ್ನು ನಂಬಿರುವ ವ್ಯಕ್ತಿ. ಕಳೆದ ಬಾರಿ ಸಾವರ್ಕರ್ ಫೋಟೊ ಹಾಕಿದಾಗ ಬಿಜೆಪಿಯವರಿಗೆ ಪ್ರಶ್ನೆ ಕೇಳಿದ್ದೆ. ಅವರು ಇದುವರೆಗೂ ಉತ್ತರ ಕೊಟ್ಟಿಲ್ಲ. ಸಾವರ್ಕರ್ ಹೆಸರಿಗೆ ವೀರ್ ಹೇಗೆ ಬಂತು? ಬ್ರಿಟಿಷರ ಬಳಿ ಸಾವರ್ಕರ್ ಪಿಂಚಣಿ ಪಡೆಯುತ್ತಿರಲಿಲ್ಲವೇ? ಅವರ ಮನೆಯವರು ಕ್ಷಮಾಪಣೆ ಅರ್ಜಿ ಹಾಕಿದ್ದರಾ, ಇಲ್ಲವಾ? ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಮಾಡಿದ್ದರು. ಅದಕ್ಕೆ ನೋಂದಣಿ ಮಾಡಿಕೊಳ್ಳಲು ಸೇರಿದ್ದರಾ ಇಲ್ಲವಾ? ಸಾವರ್ಕರ್ ಅವರಿಗೆ ಗೋ ಮಾತೆ ಬಗ್ಗೆ ಅಭಿಪ್ರಾಯ ಏನಿತ್ತು? ನಾನು ಅವರ ಐಡಿಯಾಲಜಿ ವಿರುದ್ಧ ಇದ್ದೇನೆ. ಅವರ ತತ್ವದ ಮೇಲೆ ನನಗೆ ನಂಬಿಕೆ ಇಲ್ಲ. ವೀರ ಸಾವರ್ಕರ್ ಫೋಟೊ ತೆಗೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಾವರ್ಕರ್ ಫೋಟೊ ತೆಗೆದು, ಜವಾಹರ್‌ಲಾಲ್ ನೆಹರು ಫೋಟೊ ಹಾಕುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ನೆಹರೂ ಅವರ ಫೋಟೊವನ್ನು ಹಾಕಲೇಬೇಕು. ಅವರು 3259 ದಿನ ಜೈಲಲ್ಲಿ ಇದ್ದವರು. ದೇಶದ ಮೊದಲ ಪ್ರಧಾನಿ. 16 ವರ್ಷ ದೇಶವನ್ನು ಆಳಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದೇವೆ ಅಂತ ಹೇಳುತ್ತಿದ್ದಾರಲ್ಲ? ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಂತ ಹೇಳ್ತಿದ್ದಾರಲ್ಲವೇ? ಅದಕ್ಕೆ ಅಡಿಪಾಯ ಹಾಕಿದ್ದೇ ನೆಹರು. ಐಐಟಿ, ಐಐಎಂ, ಇಸ್ರೋ ಎಲ್ಲವನ್ನೂ ಸ್ಥಾಪಿಸಿದ್ದೇ ನೆಹರು. ಚಂದ್ರಯಾನ, ಸೂರ್ಯಯಾನ ಅಂತ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದಾರಲ್ಲವೇ? ಇಸ್ರೋ ಸ್ಥಾಪಿಸಿದ್ದು ಯಾರು? ನೆಹರು ಅವರ ಫೋಟೊ ಹಾಕಲೇಬೇಕು ಎಂದು ಪ್ರತಿಪಾದಿಸಿದರು.
ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಮಾಡಿದ ಅಪಮಾನ: ಅಶ್ವತ್ಥನಾರಾಯಣ್
ಪ್ರಿಯಾಂಕ್ ಖರ್ಗೆ ಅವರು ವೀರ ಸಾವರ್ಕರ್ ಅವರ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ಅವರಿಗೆ ಅಪಮಾನವಾಗಿ ಮಾತನಾಡಿದ್ದಾರೆ. ನಾನು ಫೋಟೊ ತೆಗೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಸಂಪೂರ್ಣ ಭಾರತೀಯರಿಗೆ, ಕನ್ನಡಿಗರಿಗೆ ಮಾಡಿದ ಅಪಮಾನ ಇದಾಗಿದೆ. ವೀರ ಸಾವರ್ಕರ್ ಅವರಿಗೆ ಅಗೌರವ ತೋರಿಸಿದ್ದನ್ನು ನಾವು ಖಂಡಿಸುತ್ತೇವೆ ಎಂದು ಶಾಸಕ ಅಶ್ವತ್ಥನಾರಾಯಣ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಈ ರೀತಿ ಹೇಳಿಕೆಯನ್ನು ಕೊಡುವುದು ಬಿಟ್ಟು, ಕಲಬುರಗಿಗೆ ಹೋಗಿ ಅಭಿವೃದ್ಧಿ ಮಾಡಿ. ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನಿಲ್ಲಿಸಿ. ಕೀಳು ಮಟ್ಟದ ಯೋಚನೆಯನ್ನು ನಿಲ್ಲಿಸಿ. ನೀವು ಈಗ ವ್ಯಕ್ತಿ ಮಾತ್ರ ಅಲ್ಲ, ಒಂದು ಘನತೆವೆತ್ತ ಸ್ಥಾನದಲ್ಲಿದ್ದೀರಿ. ಮಂತ್ರಿಯಾಗಿ ಅವಮಾನ ಆಗುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ: Belagavi Winter Session: ರೈತರ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ; ಇದು ದಿವಾಳಿ ಸರ್ಕಾರ ಎಂದ ಅಶೋಕ್
ಪ್ರಸ್ತಾವನೆ ಬಂದಿಲ್ಲ; ಬಂದ ಮೇಲೆ ನೋಡೋಣ
ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಸಾವರ್ಕರ್ ಫೋಟೊ ಬದಲಾವಣೆ ಮಾಡುವ ಬಗ್ಗೆ ಈವರೆಗೆ ನನಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ಮೇಲೆ ಈ ಬಗ್ಗೆ ನೋಡೋಣ. ಈಗಲೇ ಅದರ ಬಗ್ಗೆ ಬ್ಯಾಟ್ ಬೀಸಿದರೆ ಆಗುತ್ತದೆಯೇ? ಪ್ರಜಾಪ್ರಭುತ್ವದಲ್ಲಿ ಅವರವರ ಹೇಳಿಕೆ ನೀಡಲು ಅವಕಾಶವಿದೆ. ನನಗೆ ಮಂತ್ರಿಗಳೂ ಒಂದೇ, ಪ್ರತಿಪಕ್ಷದವರೂ ಒಂದೇ ಎಂದು ಹೇಳಿದರು.