Site icon Vistara News

Karnataka Bandh : ನಾಳೆ ಪ್ರತಿಭಟನೆಗೆ ಅಡ್ಡಿಯಿಲ್ಲ, ಬಂದ್‌ ಮಾಡೋ ಹಾಗಿಲ್ಲ; ಡಿ.ಕೆ. ಶಿವಕುಮಾರ್ ವಾರ್ನಿಂಗ್

DK Shivakumar on Karnataka Bandh

ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡ ಪರ ಸಂಘಟನೆಗಳು, ರೈತ ಹೋರಾಟಗಾರರು (Farmer activists) ಸೇರಿದಂತೆ ನಾಗರಿಕರು ಪ್ರತಿಭಟನೆ ಮಾಡಲು ನಾವು ಅಡ್ಡಿ ಮಾಡುವುದಿಲ್ಲ. ಆದರೆ, ಕರ್ನಾಟಕ ಬಂದ್ (Karnataka Bandh) ಮಾಡಲು ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಖಡಕ್‌ ಆಗಿ ಹೇಳಿದ್ದಾರೆ. ಆದರೆ, ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂಬ ಆಕ್ರೋಶ ಸಂಘಟನೆಗಳು, ನಾಗರಿಕರಿಂದ ವ್ಯಕ್ತವಾಗಿದೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ್ (Supreme Court),‌ ಹೈಕೋರ್ಟ್ (High Court) ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ,‌ ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ, ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು.

ಇದನ್ನೂ ಓದಿ: Anna Bhagya : ಶೀಘ್ರದಲ್ಲೇ ಸರ್ಕಾರದಿಂದ ಧನ ಭಾಗ್ಯಕ್ಕೆ ಬ್ರೇಕ್! ಅಕ್ಟೋಬರ್‌ನಿಂದಲೇ 10 ಕೆ.ಜಿ. ಅಕ್ಕಿ

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಅಧಿಕಾರಿಗಳ ಖುದ್ದು ಹಾಜರಿ

ಶುಕ್ರವಾರ (ಸೆಪ್ಟೆಂಬರ್‌ 29) ನಡೆಯುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) Cauvery Water Regulation Committee) ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಆನ್‌ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈಗ ಸಹಜವಾಗಿ 2 ಸಾವಿರ ಕ್ಯೂಸೆಕ್‌ ನೀರು ಹೋಗುತ್ತಿದೆ

ತಮಿಳುನಾಡಿನವರು 11,000 ಸಾವಿರ ಕ್ಯೂಸೆಕ್‌ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2,000 ಕ್ಯೂಸೆಕ್‌ ನೀರು ಹೋಗುತ್ತಿರಬಹುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಹಿರಿಯ ಕೃಷಿ ತಜ್ಞರು, ನೀರಾವರಿ ತಂತ್ರಜ್ಞರ ಸಭೆ ಕರೆದಿದ್ದು ಅಲ್ಲಿ ಚರ್ಚೆ ಮಾಡಲಾಗುವುದು. ಯಾರು ಭಾಗವಹಿಸುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಶುಕ್ರವಾರದ ಬೆಳವಣಿಗೆ ನೋಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಸಮಿತಿಯವರು 3,000 ಕ್ಯೂಸೆಕ್‌ ನೀರು ಬಿಡುಗಡೆಗೆ ಶಿಫಾರಸು ಮಾಡಿದ್ದಾರೆ. ನಾಳೆ ಪ್ರಾಧಿಕಾರದವರು ಏನು ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.

ಎಂಎಲ್‌ಸಿ, ಲೋಕಸಭಾ ಚುನಾವಣೆಗೆ ತಯಾರಿ

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರ ಆಯ್ಕೆ ಮಾಡಲು ಸಲಹೆ ಪಡೆಯಲಾಗುತ್ತಿದೆ. ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲ ಭಾಗದ ನಾಯಕರ ಜತೆ ಎಂಎಲ್‌ಸಿ ಚುನಾವಣೆ ಬಗ್ಗೆ ಚರ್ಚೆ ನಡಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಮಾಜಿ ಶಾಸಕರು ಭೇಟಿಯಾಗಿದ್ದರು ಎನ್ನುವ ಪ್ರಶ್ನೆಗೆ, “ಮೈತ್ರಿ ವಿಚಾರವಾಗಿ ಬಹಳಷ್ಟು ಜನರಿಗೆ ಸಿಟ್ಟಿದೆ. ಸಿಎಂ ಹಾಗೂ ನಾನು ನಾಳೆ ಈ ವಿಚಾರವಾಗಿ ಮಾತನಾಡುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಿ.ಕೆ. ಹರಿಪ್ರಸಾದ್ ಹಾಗೂ ಕೆ.ಎಚ್. ಮುನಿಯಪ್ಪ ಅವರ ಭೇಟಿ ಬಗ್ಗೆ ‌ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಮತ್ತು ಮುನಿಯಪ್ಪ ಅವರು ಲೋಕಸಭೆ ಚುನಾವಣೆಯ ವಿಚಾರವಾಗಿ ಚರ್ಚೆ ನಡೆಸಲು ಬಂದಿದ್ದರು. ಇದೇ ವೇಳೆ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಿ ಎಂದು ಮುನಿಯಪ್ಪ ಅವರು ಸಲಹೆ ನೀಡಿದರು ಎಂದು ತಿಳಿಸಿದರು.

ಇದನ್ನೂ ಓದಿ: Operation Hasta : ಲಮಾಣಿ, ಎಂ.ಪಿ. ಕುಮಾರಸ್ವಾಮಿ ಶೆಟ್ಟರ್ ಕೈ ಸೆರೆ, ಮುಂದಿನ ವಾರ ಆಪರೇಷನ್!

ಸರ್ಕಾರ ದಬ್ಬಾಳಿಕೆ ಮಾಡಬಾರದು

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ವಾಟಾಳ್‌ ನಾಗರಾಜ್‌, ನಾವು ಬೆಂಗಳೂರಿನಲ್ಲಿ ನಾಳೆ ಮೆರವಣಿಗೆ ನಡೆಸಲಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಮೆರವಣಿಗೆಯನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಬಾರದು. ಪೊಲೀಸರಿಗೆ ಹೇಳಿ ತೊಂದರೆ ಕೊಡುವ ಕೆಲಸವನ್ನು ಮಾಡಬೇಡಿ. ಹೀಗೆ ಮಾಡಿದಲ್ಲಿ ಗದ್ದಲ, ಗೊಂದಲಗಳು ಆಗಬಹುದಾಗಿದೆ. ಹೀಗಾಗಿ ಈ ಬಗ್ಗೆ ಸರ್ಕಾರದವರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು ಎಂದು ಪ್ರತಿಯಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Exit mobile version