ನವ ದೆಹಲಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ (Bangalore North Constituency) ಬಿಜೆಪಿ ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ತಳ್ಳಿ ಹಾಕಿದ್ದಾರೆ. ಡಿ.ವಿ. ಸದಾನಂದ ಗೌಡರು ಎಲ್ಲೂ ಹೋಗಲ್ಲ (DV Sadananda Gowda will not go anywhere) ಎಂದು ಹೇಳಿದರು.
ಲೋಕಸಭಾ ಚುನಾವಣೆಯ (Lok Sabha Election 2024) ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಚರ್ಚೆಗಾಗಿ ದಿಲ್ಲಿಗೆ ಆಗಮಿಸಿರುವ ಆರ್. ಅಶೋಕ್ ಅವರು ರಾಜ್ಯದಲ್ಲಿ ಅತೃಪ್ತಿ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಅವರ ಮುಂದಿನ ಹೆಜ್ಜೆಗಳು, ಸಮಾಧಾನ ಪಡಿಸಬೇಕಾದ ಅವಶ್ಯಕತೆ ಬಗ್ಗೆ ಮಾತನಾಡಿದ್ದಾರೆ. ಕೇಂದ್ರದ ನಾಯಕರು ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚಿಸಲು ಕರೆದಿದ್ದರು. ಶೇಕಡಾ 80ರಷ್ಟು ಸ್ಥಾನ ಘೋಷಣೆಯಾಗಿದೆ. ಉಳಿದ ಕ್ಷೇತ್ರಗಳ ಚರ್ಚೆಯಾಗಿದೆ. ಒಂದೇರಡು ದಿನದಲ್ಲಿ ಉಳಿದ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಡಿ.ವಿ. ಸದಾನಂದ ಗೌಡರು ಈ ಬಾರಿ ಕಣಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾವು ಸ್ಪರ್ಧೆಗೆ ಮನವಿ ಮಾಡಿದ್ದೆವು. ಅವರ ಒಳ್ಳೆಯದಕ್ಕೇ ನಾವು ಸಲಹೆ ಕೊಟ್ಟಿದ್ದೆವು. ಅವರೂ ಒಪ್ಪಿಕೊಂಡಿದ್ದರು. ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಹೈಕಮಾಂಡ್ ಗೆಲುವಿನ ಮಾನದಂಡದಲ್ಲಿ ಟಿಕೆಟ್ ನೀಡಿದೆ. ಅದರಿಂದ ಸದಾನಂದ ಗೌಡರಿಗೆ ನೋವಾಗಿದೆ ಎಂದು ವಿವರ ನೀಡಿದ್ದಾರೆ ಆರ್. ಅಶೋಕ್.
ನಾನು ಸದಾನಂದ ಗೌಡರನ್ನು ಭೇಟಿಯಾಗಿದ್ದೇನೆ. ಅವರು ಯಾವ ಕಾರಣಕ್ಕೂ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಮ್ಮ ಹಿರಿಯ, ಹಳೆಯ ನಾಯಕರು ಅಷ್ಟು ಸುಲಭದಲ್ಲಿ ದುಡುಕುವುದಿಲ್ಲ. ಕಾದು ನೋಡೋಣ ಅವಕಾಶವಿದೆ. ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದೇನೆ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ : DV Sadananda Gowda : ಡಿವಿಎಸ್ ಕಾಂಗ್ರೆಸ್ ಸೇರ್ಪಡೆಗೆ ಒಕ್ಕಲಿಗರ ಸಂಘ ಬೆಂಬಲ; ಕೈ ತೀರ್ಮಾನ ಏನು?
ಮಾಧುಸ್ವಾಮಿ, ಈಶ್ವರಪ್ಪ ಅವರ ಕಥೆ ಏನು?
ತುಮಕೂರು ಕ್ಷೇತ್ರದಿಂದ ಟಿಕೆಟ್ ಬಯಸಿ ನಿರಾಸೆ ಅನುಭವಿಸಿರುವ ಮಾಜಿ ಸಚಿವ ಮಾಧುಸ್ವಾಮಿ ಜೊತೆಗೆ ಮೂರು ಗಂಟೆ ಚರ್ಚೆ ಮಾಡಿದ್ದೇನೆ. ಅವರು ಅವರು ಟೈಂ ತಗೊಂಡಿದ್ದಾರೆ ಬಿಎಸ್ ವೈ ಜೊತೆಗೆ ಮಾತನಾಡಿದ್ರೆ ಸರಿಯಾಗಬಹುದು ಎಂದು ಹೇಳಿದರು ಅಶೋಕ್.
ಬಿಎಸ್‌ವೈ ಮತ್ತು ಈಶ್ವರಪ್ಪ ನಡುವೆ ನಡೆದ ಮಾತುಕತೆ ಬಗ್ಗೆ ಗೊತ್ತಿಲ್ಲ. ಈಗ ಅವರು ಮಾತುಕತೆ ಮೂಲಕ ಸಮಸ್ಯೆ ಸರಿ ಮಾಡಿಕೊಳ್ಳಲಿದ್ದಾರೆ. ಅವರು ನಮ್ಮ ಹಳೆ ಕಾರ್ಯಕರ್ತರು, ಬೇರೆ ನಿರ್ಧಾರ ತೆಗೆದುಕೊಳ್ಳುವುದಿಲ್ಲʼʼ ಎಂದು ಹೇಳಿದರು.
ಜೆಡಿಎಸ್ ಜತೆ ಹಾಲು ಜೇನಿನ ಸಂಬಂಧ ಎಂದ ಅಶೋಕ್
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಾಲು ಜೇನಿನಂತೆ ಕೆಲಸ ಮಾಡುತ್ತೇವೆ. ಯಾವುದೇ ಅನುಮಾನ ಬೇಡ. ಕುಮಾರಸ್ವಾಮಿ ಅವರು ಹೈಕಮಾಂಡ್ ಭೇಟಿ ಮಾಡಿದ್ದಾರೆ, ಅವರಿಗೆ ಗೊತ್ತಿದೆ. ಕೋಲಾರ ಕ್ಷೇತ್ರ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು ಆರ್. ಅಶೋಕ್.
ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಂಡ್ರಾ ಸ್ಟ್ರಾಂಗ್ ಸಿಎಂ?
ಈ ನಡುವೆ, ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ನಡುವಿನ ಪಿಎಂ-ಸಿಎಂ ಕದನಕ್ಕೆ ಪ್ರತಿಕ್ರಿಯೆ ನೀಡಿ, ಮೋದಿ ಅವರು ಸರ್ವತೋಮುಖ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಸಿಎಂ ಸ್ಟ್ರಾಂಗ್ ಪಿಎಂ ವೀಕ್ ಎಂದಿರುವ ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದಲ್ಲೇ ಬೆಲೆ ಇಲ್ಲ. ಬಿ.ಕೆ. ಹರಿ ಪ್ರಸಾದ್ ಅವರು ನೇರವಾಗಿ ಟೀಕೆ ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ನೆನಪಿಸಿದರು. ಹಾಗಿರುವಾಗ ಮೋದಿ ಬಗ್ಗೆ ಆರೋಪ ಮಾಡಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಬರಗಾಲ ಭುಗಿಲೆದ್ದಿದೆ. ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಜನರು ಬೆಂಗಳೂರಿನಿಂದ ಗುಳೆ ಹೋಗುತ್ತಿದ್ದಾರೆ. ಇದು ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ ಅಶೋಕ್ ಅವರು, ಬಾಂಬ್ ಸ್ಫೋಟ, ಪಾಕಿಸ್ತಾನ ಜಿಂದಾಬಾದ್, ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ.. ಇವೆಲ್ಲವೂ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿ ಎಂದರು.