Site icon Vistara News

Opposition Leader : ಆರ್‌. ಅಶೋಕ್‌ಗೆ ವಿಪಕ್ಷ ನಾಯಕ ಸ್ಥಾನ ಫಿಕ್ಸ್‌; ಸಮಾಧಾನಗೊಂಡರೇ ಯತ್ನಾಳ್?

R Ashok BY vijayendra and Basanagowda patil yatnal

ಬೆಂಗಳೂರು: ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್‌ ಈಗ ವಿರೋಧ ಪಕ್ಷದ ನಾಯಕನ (Opposition Leader) ಆಯ್ಕೆ ಪ್ರಕ್ರಿಯೆಯನ್ನೂ ಚುರುಕುಗೊಳಿಸಿದೆ. ಈ ಸಂಬಂಧ ಶುಕ್ರವಾರ (ನ.17) ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲದೆ, ಶಾಸಕರ ಅಭಿಪ್ರಾಯವನ್ನು ಪಡೆಯಲು ಕೇಂದ್ರದಿಂದ ವೀಕ್ಷಕರಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಆಗಮಿಸಿದ್ದು, ಕೆಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆಯ ಬಿಜೆಪಿ ರಾಜಕೀಯ ಬೆಳವಣಿಗೆಯನ್ನು (Political Development) ಗಮನಿಸಿದರೆ ಮಾಜಿ ಸಚಿವ ಆರ್‌. ಅಶೋಕ್‌ (R Ashok) ವಿಪಕ್ಷ ನಾಯಕರಾಗುವುದು ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ.

ವಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲು ಬಿಜೆಪಿ ಹೈಕಮಾಂಡ್‌ ತೀರ್ಮಾನಕ್ಕೆ ಬಂದಂತೆ ಇದೆ. ವಿಧಾನ ಪರಿಷತ್‌ನಲ್ಲಿ ಒಬಿಸಿ ಇಲ್ಲವೇ ದಲಿತ ನಾಯಕರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ಮಾಡಲಾಗಿದೆ. ಅಲ್ಲದೆ, ವಿಧಾನಸಭೆಯಲ್ಲಿ ಜೂನಿಯರ್ – ಸೀನಿಯರ್ ಫಾರ್ಮುಲಾವನ್ನು ಅಳೆದು ತೂಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜ್ಯೂನಿಯರ್‌ ಕೋಟಾದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಈ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮತ್ತೊಬ್ಬ ಪ್ರಬಲ ನಾಯಕ, ಮಾಜಿ ಸಚಿವ ಅಶ್ವತ್ಥ್‌ ನಾರಾಯಣ್‌ ಅವರನ್ನು ಆಯ್ಕೆ ಮಾಡಿದರೆ ಇಬ್ಬರೂ ಕಿರಿಯರನ್ನು ಆಯ್ಕೆ ಮಾಡಿದಂತೆ ಆಗುತ್ತದೆ. ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಅಶ್ವತ್ಥನಾರಾಯಣ ಅವರಿಗೆ ಮಣೆ ಹಾಕಿದಲ್ಲಿ ಬಿಜೆಪಿಯಲ್ಲಿ ಕಿರಿಯರಿಗೆ ಮಾತ್ರ ಪ್ರಾಧಾನ್ಯತೆ ಕೊಡಲಾಗುತ್ತಿದೆ ಎಂದು ಹಿರಿಯರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಈ ಎರಡನ್ನೂ ಬ್ಯಾಲೆನ್ಸ್‌ ಮಾಡುವ ನಿಟ್ಟಿನಲ್ಲಿ ಅನುಭವಿ ರಾಜಕಾರಣಿಯಾಗಿರುವ ಆರ್.‌ ಅಶೋಕ್‌ ಅವರನ್ನು ಸೀನಿಯರ್‌ ಕೋಟಾದ್ಲ್ಲಿ ಆಯ್ಕೆ ಮಾಡುವುದು ಬಹುತೇಕ ನಿಶ್ಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಈ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಯತ್ನಾಳ್‌ ಮನೆಗೆ ಭೇಟಿ; ಸಮಾಧಾನದ ಪ್ರಯತ್ನ?

ಬಿಜೆಪಿ ಫೈರ್‌ ಬ್ರಾಂಡ್‌, ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಮನೆಗೆ ಭೇಟಿ ವೀಕ್ಷಕರಾದ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಗೌತಮ್ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿದ್ದಾರೆ. ಶ್ರೀರಾಮಪುರದಲ್ಲಿರುವ ಯತ್ನಾಳ್‌ ನಿವಾಸಕ್ಕೆ ಭೇಟಿ ನೀಡಿರುವ ವೀಕ್ಷಕರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಅನ್ಯಾಯ ಆಗಲು ಬಿಡಲ್ಲ ಎಂದು ಯತ್ನಾಳ್‌ಗೆ ಮನವೊಲಿಕೆ

ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಯತ್ನಾಳ್ ಮುನಿಸಿಕೊಂಡಿದ್ದರು. ಹೀಗಾಗಿ ಅವರನ್ನು ಸಮಾಧಾನ ಮಾಡುವ ಟಾಸ್ಕ್‌ ಅನ್ನು ವೀಕ್ಷಕರಿಗೆ ಬಿಜೆಪಿ ಹೈಕಮಾಂಡ್‌ ನೀಡಿತ್ತು. ಇದರ ಭಾಗವಾಗಿ ಭೇಟಿಯಾಗಿರುವ ವೀಕ್ಷಕರು ಯತ್ನಾಳ್‌ ಸಮಧಾನಪಡಿಸಲು ಪ್ರಯತ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ಅವಕಾಶ ಮಾಡಿಕೊಡುತ್ತೇವೆ. ಈಗ ಅಸಮಾಧಾನ ಬೇಡ. ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ. ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಬಳಿ ಚರ್ಚೆ ಮಾಡಿ. ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

ಬೊಮ್ಮಾಯಿ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್‌

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಆರ್.ಟಿ ನಗರದ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ‌ ಮಾಡಿ ಶುಭ ಕೋರಿದರು.

Exit mobile version