Site icon Vistara News

Opposition Leader : ಎಲ್ಲರನ್ನೂ ಗೆಲ್ಲಬಲ್ಲ ಅಜಾತಶತ್ರು ಸಾಮ್ರಾಟ್‌ ಅಶೋಕ್‌ ಈಗ ವಿಪಕ್ಷ ನಾಯಕ

R Ashok BJP opposition leader

ಬೆಂಗಳೂರು: ವಿದ್ಯಾರ್ಥಿ ನಾಯಕನಾಗಿ ಗಮನ ಸೆಳೆದು ತುರ್ತು ಪರಿಸ್ಥಿತಿಯ (Emergency) ವೇಳೆ ಜೈಲು ವಾಸ ಅನುಭವಿಸಿದ್ದರಿಂದ ಆರಂಭಿಸಿ ರಾಜ್ಯದ ಉಪಮುಖ್ಯಮಂತ್ರಿಯಾಗುವವರೆಗೆ 53 ವರ್ಷಗಳ ಹೋರಾಟ ಮತ್ತು ಜನಸೇವೆಯ ಅನುಭವ ಹೊಂದಿರುವ ಸಾಮ್ರಾಟ್‌ ನಾಮಾಂಕಿತ ಆರ್‌ ಅಶೋಕ್‌ (R Ashok) ಇದೀಗ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ (Opposition Leader). ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷ ಅಶೋಕ್‌ ಅವರ ನಾಯಕತ್ವ ಮತ್ತು ದೂರದೃಷ್ಟಿತ್ವದ ಮೇಲೆ ನಂಬಿಕೆ ಇಟ್ಟು ಅವರನ್ನು ಈ ಮಹತ್ವದ ಹುದ್ದೆಗೇರಿಸಿದೆ.

ಶಾಸಕನಾಗಿ 26 ವರ್ಷಗಳ ಅನುಭವ ಹೊಂದಿರುವ ಅಶೋಕ್‌ ಅವರು ಎಲ್ಲರೊಂದಿಗೆ ಚೆನ್ನಾಗಿ ಬೆರೆಯಬಲ್ಲ ಶಕ್ತಿಯನ್ನು ಹೊಂದಿರುವ, ಅಜಾತಶತ್ರು ರಾಜಕಾರಣಿ. ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದ ಹಾಲಿ ಶಾಸಕರಾಗಿರುವ ಆರ್‌. ಅಶೋಕ್‌ ಅವರು ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಬಾಲ್ಯದಿಂದಲೇ ಆರೆಸ್ಸೆಸ್‌ ಸಂಪರ್ಕ ಪಡೆದ ಆರ್‌ ಅಶೋಕ್‌

ಬೆಂಗಳೂರಿನ ಜಾಲಹಳ್ಳಿಯ ರಾಮಯ್ಯ ಮತ್ತು ಆಂಜನಮ್ಮ ದಂಪತಿ ಮಗನಾಗಿ 1957ರ ಜುಲೈ 1ರಂದು ಜನಿಸಿದವರು ಆರ್‌. ಅಶೋಕ್‌. ಬಾಲ್ಯದಿಂದಲೂ ಆರೆಸ್ಸೆಸ್‌ ಜತೆ ನಂಟು ಹೊಂದಿದ್ದ ಅವರು ವಿದ್ಯಾರ್ಥಿ ನಾಯಕರಾಗಿ ಬೆಳೆದಿದ್ದರು. ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಅಶೋಕ್‌ ಅವರು ಕಾಲೇಜಿನಲ್ಲಿ ಕಬಡ್ಡಿ ಚಾಂಪಿಯನ್ ಆಗಿದ್ದರು.

ಬದುಕು ಬದಲಿಸಿದ ತುರ್ತು ಪರಿಸ್ಥಿತಿ ಹೋರಾಟ

ಆರ್‌.ಅಶೋಕ್‌ ಅವರ ಬದುಕು ಬದಲಾಗಿದ್ದು 1975ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದಲ್ಲಿ. ತಮ್ಮ 10ನೇ ವಯಸ್ಸಿನಲ್ಲಿಯೇ ಆರ್.ಎಸ್.ಎಸ್‌.ಗೆ ಸೇರ್ಪಡೆಯಾಗಿ, 1975-77ರಲ್ಲಿ ಇಂದಿರಾ ಗಾಂಧಿಯವರು ಘೋಷಿಸಿದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಎಲ್.ಕೆ. ಅಡ್ವಾಣಿಯಂತಹ ಹಿರಿಯ ನಾಯಕರೊಂದಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಒಂದು ತಿಂಗಳುಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಿದ್ದರು ಅಶೋಕ್‌. ಮುಂದೆ ಅವರು ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದರು.

1995ರಲ್ಲಿ ಬಿಜೆಪಿಯ ಬೆಂಗಳೂರು ನಗರ ಅಧ್ಯಕ್ಷರಾಗಿ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ ಅವರು,
1997ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

ನಂತರ 1999 ಮತ್ತು 20040 ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುತ್ತಾರೆ. ಕ್ಷೇತ್ರ ಪುನರ್ ವಿಂಗಡನೆಯ ನಂತರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ 2008, 2013, 2018, 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ವಿಜಯ ಸಾಧಿಸುವ ಮೂಲಕ 7ನೇ ಬಾರಿ ಶಾಸಕರಾಗಿ ಆಯ್ಕೆಯಾದರು.

ಆರೋಗ್ಯ ಸಚಿವರಾಗಿ ಮಡಿಲು ತುಂಬಿದವರು

2006-2007ರಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಮಯದಲ್ಲಿ ಮಡಿಲು ಕಿಟ್ ಎಂಬ ನೂತನ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅಸಂಖ್ಯಾತ ಬಡ ಕುಟುಂಬದ ನವಜಾತ ಶಿಶುಗಳಿಗೆ ಮಡಿಲು ಕಿಟ್ ದೊರೆಯುವಂತೆ ಮಾಡಿದ ಸಾಧನೆ ಅಶೋಕ್‌ ಅವರದು. ಜೊತೆಗೆ ಹಲವು ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದರು. ಗ್ರಾಮೀಣ ಭಾಗದಲ್ಲಿಯೂ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಹಲವು ನಕಲಿ ಡಾಕ್ಟರ್‌ಗಳ ಹಾವಳಿಯನ್ನು ತಡೆಯಲು ಶ್ರಮಿಸಿರುತ್ತಾರೆ.

ಸಾರಿಗೆ ಸಚಿವರಾಗಿ ಆಧುನೀಕರಣಕ್ಕೆ ಒತ್ತು

2008-2010ರಲ್ಲಿ ಬಿ.ಎಸ್ ಯಡಿಯೂರಪ್ಪರವರ ಸರ್ಕಾರದಲ್ಲಿ ಸಾರಿಗೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರ ಖಾತೆಗಳ ಸಚಿವರಾಗಿ ಹತ್ತು ಹಲವು ಜನಾನುರಾಗಿ ಕಾರ್ಯಗಳನ್ನು ಮಾಡಿದ್ದಾರೆ, ಸಾರಿಗೆ ಇಲಾಖೆಯ ಆಧುನೀಕರಣಕ್ಕೆ ಮತ್ತು ನೂತನ ಸಾರಿಗೆ ಬಸ್‌ಗಳ ವ್ಯವಸ್ಥೆ ಮತ್ತು ನೂತನ ಬಸ್‌ ನಿಲ್ದಾಣಗಳ ನಿರ್ಮಾಣದಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ.

2010-2012 ಸಾರಿಗೆ ಸಚಿವರು ಮತ್ತು ಗೃಹ ಸಚಿವರಾಗಿರುವ ಸಮಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗೃಹ ಇಲಾಖೆಯ ದಕ್ಷವಾಗಿ ನಿರ್ವಹಿಸಿದ್ದರು. ಜೊತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿರುತ್ತಾರೆ.

2012-2013 ರಲ್ಲಿ ಶ್ರೀ ಜಗದೀಶ್ ಶೆಟ್ಟರ್ ರವರ ನೇತೃತ್ವದ ಸರ್ಕಾರದಲ್ಲಿ ಸಾರಿಗೆ ಮತ್ತು ಗೃಹ ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

2010ರಲ್ಲಿ ಮತ್ತು 2015 ರಲ್ಲಿ ನಡೆದ ಬಿ.ಬಿ.ಎಂ.ಪಿ.ಯ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಅಶೋಕ್‌ ಅವರ ಪಾತ್ರ ದೊಡ್ಡದು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ಗಮನ ಸೆಳೆದ ಸಾಮ್ರಾಟ್‌

2019ರ ಬಿ.ಎಸ್.ಯಡಿಯೂರಪ್ಪ ರವರ ನೇತೃತ್ವದ ಸರ್ಕಾರದಲ್ಲಿ ಮತ್ತು 2021ರ ಬಸವರಾಜ ಬೊಮ್ಮಾಯಿರವರ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ ಆರ್‌. ಅಶೋಕ್‌. ʻಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹಳ್ಳಿಯಲ್ಲೇ ವಾಸ್ತವ್ಯ ಹೂಡುವ ಮೂಲಕ ಸ್ಥಳದಲ್ಲಿಯೇ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದರು. ಮನೆ ಬಾಗಿಲಿಗೆ ಪಿಂಚಣಿ ಮೂಲಕ ಅಶಕ್ತರು, ವೃದ್ದರು ವಿಧವೆಯರಿಗೆ ಮನೆ ಬಾಗಿಲಲ್ಲೆ ಪಿಂಚಣಿ ಪಡೆಯುವ ವ್ಯವಸ್ಥೆಯನ್ನು ಮಾಡಿರುತ್ತಾರೆ.

ಹಲವಾರು ತಾಲ್ಲೂಕು ಆಡಳಿತ ಸೌಧಗಳನ್ನು ನಿರ್ಮಿಸುವ ಮೂಲಕ ಹಾಗೂ ತಾಲ್ಲೂಕು ಆಡಳಿತ ಸೌಧಗಳಿಗೆ ಜಾಗವನ್ನು ಮೀಸಲಿಡುವ ಮೂಲಕ ಆಡಳಿತ ವ್ಯವಸ್ಥೆಯು ಸುಗಮವಾಗಿ ಸಾಗುವಂತೆ ಮಾಡಿದ್ದಾರೆ. 79/ಎ ಮತ್ತು 79/ಬಿ ಗಳನ್ನು ರದ್ದು ಮಾಡುವ ಮೂಲಕ ರೈತರಲ್ಲದವರು ಸಹ ಕೃಷಿ ಭೂಮಿಯನ್ನು ಖರೀದಿ ಮಾಡಿ ಕೃಷಿಯಲ್ಲಿ ತೊಡಗುವಂತೆ ಮಾಡಿರುತ್ತಾರೆ. ನೋಂದಣಿ ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ನೀಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಧಿಕ ಆದಾಯ ಬರುವಂತೆ ಮಾಡಿರುತ್ತಾರೆ.

ಮನೆ ಮನೆ ಬಾಗಿಲಿಗೆ ಬಂದು ದಾಖಲೆ: ಅಶೋಕ್‌ ಸಾಧನೆ

ಮನೆ ಬಾಗಿಲಿಗೆ ಜಮೀನಿನ ದಾಖಲೆ ಪತ್ರಗಳನ್ನು ಕಳುಹಿಸುವ ಮೂಲಕ ದಾಖಲೆಯನ್ನು ಪಡೆಯಲು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಿರುತ್ತಾರೆ. ಕಂದಾಯ ಇಲಾಖೆಯ ವತಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಕೇಡ ಗ್ರಾಮದಲ್ಲಿ ಸುಮಾರು 50,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಮ್ಮೇಲೆ ಹಕ್ಕುಪತ್ರ ವಿತರಿಸುವ ಮೂಲಕ ವರ್ಲ್ಡ್‌ ಬುಕ್ ಆಫ್ ರೆಕಾರ್ಡ್ ಮಾಡಿದವರಾಗಿರುತ್ತಾರೆ.

ಕೊರೊನಾದಲ್ಲಿ ಮೃತಪಟ್ಟವರ ಪಾಲಿನ ಬಂಧುವಾದ ಅಶೋಕ್‌

ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಆದಂತಹ ಪ್ರಾಕೃತಿಕ ವಿಕೋಪಗಳಿಗೆ ಸೂಕ್ತ ಪರಿಹಾರ ಕೊಡಿಸುವಲ್ಲಿ ಶ್ರಮವಹಿಸಿರುತ್ತಾರೆ. ಈ 2019ರ ಕೊರೊನಾ ವೈರಸ್ ಎಂಬ ಜಾಗತಿಕ ಮಹಾಮಾರಿ ಜನರನ್ನು ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಜನತೆಗೆ ಸೂಕ್ತ ವೈದ್ಯಕೀಯ ನೆರವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕೊರೊನಾ ಮಹಾಮಾರಿಯಿಂದ ಮೃತಪಟ್ಟ ವಾರಸುದಾರರಿಲ್ಲದ ಸಾವಿರಾರು ಅಸ್ಥಿಗಳನ್ನು ಕಾವೇರಿ ನದಿಯಲ್ಲಿ ಸೂಕ್ತ ವಿಧಿ ವಿಧಾನಗಳ ಮೂಲಕ ವಿಸರ್ಜಿಸಿ ನಾಡಿನ ಮತ್ತು ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿದವರು ಮಾತ್ರವಲ್ಲ, ಅನಾಥ ಶವಗಳ ಪಾಲಿನ ಬಂಧುವಾಗಿ ನಾಡಿನ ಗಮನ ಸೆಳೆದವರು.

ಇದನ್ನೂ ಓದಿ: ‌BJP Karnataka : ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು; ಅಡ್ಜೆಸ್ಟ್‌ಮೆಂಟ್‌ ಬಗ್ಗೆ ವೀಕ್ಷಕರಿಗೆ ಹೇಳಿದ್ದೇನೆ ಎಂದ ಯತ್ನಾಳ್

Exit mobile version