ಬೆಂಗಳೂರು: 2008ರಲ್ಲಿ ಒಂದು ವೇಳೆ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ಅಧಿಕಾರ ಹಸ್ತಾಂತರ ಮಾಡಿರುತ್ತಿದ್ದರೆ ಇವತ್ತು ಕಾಂಗ್ರೆಸ್‌ನಲ್ಲಿ ಒಬ್ಬ ಶಾಸಕನೂ ಇರುತ್ತಿರಲಿಲ್ಲ. ಆದರೆ, ಆವತ್ತು ಎಚ್.ಡಿ ದೇವೇಗೌಡರು (HD Devegowda) ಅಧಿಕಾರ ಹಸ್ತಾಂತರಕ್ಕೆ ಬಿಡಲಿಲ್ಲ: ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಬಿಜೆಪಿ ಮುಖಂಡ ಆರ್. ಅಶೋಕ್ (R Ashok).
ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ವಿಸ್ತಾರ ನ್ಯೂಸ್‌ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದರು. ವಿಸ್ತಾರ ನ್ಯೂಸ್‌ನ ಪೊಲಿಟಿಕಲ್ ಬ್ಯೂರೋ ಹೆಡ್ ಮಾರುತಿ ಪಾವಗಡ ಅವರೊಂದಿಗೆ ರಾಜ್ಯ ರಾಜಕಾರಣದ ಹಲವು ಮುಖಗಳನ್ನು ಆರ್. ಅಶೋಕ್ ತೆರೆದಿಟ್ಟರು.
ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ 20 ತಿಂಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿತ್ತು. ಇದ್ದರೆ ಇಂಥ ಸರ್ಕಾರ ಇರಬೇಕು ಎಂದು ಜನರು ಬಯಸಿದ್ದರು. ಆದರೆ, ಅಧಿಕಾರ ಹಸ್ತಾಂತರದ ವೇಳೆ ಎಡವಟ್ಟಾಯಿತು. ನಿಜವೆಂದರೆ ಎಚ್.ಡಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಬಾರದು ಎಂಬ ನಿಲುವು ಇರಲಿಲ್ಲ. ಆದರೆ, ಎಚ್.ಡಿ ದೇವೇಗೌಡರ ಯಾಕೋ ವಿರೋಧವಾಗಿದ್ದರು. ಅವರಿಗೆ ಕಾಂಗ್ರೆಸ್ ಜತೆ ಹೋಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಸರ್ಕಾರ ಪತನಗೊಂಡಿತು. ಎಚ್.ಡಿ. ದೇವೇಗೌಡರು ಮಾಡಿದ ಆ ಒಂದು ತಪ್ಪಿನಿಂದಾಗಿ ಕಾಂಗ್ರೆಸ್ ಗೆ ಲಾಭವಾಯಿತು. ಒಂದು ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಸರ್ಕಾರ ಮುಂದುವರಿಯುತ್ತಿದ್ದರೆ ಕಾಂಗ್ರೆಸ್ ಸಂಪೂರ್ಣ ನಾಶವಾಗಿರುತ್ತಿತ್ತು. ಹೀಗಾಗಿ ಒಂದು ವೇಳೆ ಕಾಂಗ್ರೆಸ್ ಇಂದು ಉಸಿರಾಡುತ್ತಿದ್ದರೆ ಅದಕ್ಕಾಗಿ ಅದು ಜೆಡಿಎಸ್‌ಗೆ ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಧನ್ಯವಾದ ಹೇಳಬೇಕು ಎಂದು ಆರ್. ಅಶೋಕ್ ಹೇಳಿದರು.
ಅಂದು ದೇವೇಗೌಡರು ಆವತ್ತು ಬಿಜೆಪಿ ಜತೆಗಿನ ಮೈತ್ರಿಯನ್ನು ವಿರೋಧಿಸಿದ್ದರೂ ಈ ಬಾರಿ ಮೈತ್ರಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತವರೇ ಎಚ್.ಡಿ ದೇವೇಗೌಡರು ಎಂದು ಆರ್. ಅಶೋಕ್ ಖುಷಿಯಿಂದ ಹೇಳಿದರು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಲೇಬೇಕು ಎನ್ನುವ ಪಣವನ್ನು ಅವರು ತೊಟ್ಟಿದ್ದಾರೆ ಎಂದು ಹೇಳಿದರು ಆರ್. ಅಶೋಕ್.
ಬಿಜೆಪಿ ಪಕ್ಷ ನನಗೆ ಪರಮೋಚ್ಛ ಎಂದ ಅರ್.ಅಶೋಕ್
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರಲ್ಲಿ ಒಬ್ಬರು ಬಿ.ಎಸ್ ಯಡಿಯೂರಪ್ಪ ಅವರ ಪುತ್ರ, ಇನ್ನೊಬ್ಬರು ಮಾನಸಪುತ್ರ ಎಂಬ ಮಾತಿದೆ. ಇದು ಕೆಲವರ ಕಣ್ಣು ಕುಕ್ಕಿದೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಆರ್. ಅಶೋಕ್ ಅವರು, ಬಿ.ಎಸ್. ಯಡಿಯೂರಪ್ಪ ಅವರು ನನ್ನ ನಾಯಕರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟಿದವರು. ಒಂದು ರೀತಿಯಲ್ಲಿ ಬಿಜೆಪಿ ಪಕ್ಷದ ಪಿತಾಮಹ ಎಂದೇ ಹೇಳಬಹುದು. ಅವರ ಮತ್ತು ನನ್ನ ಸಂಬಂಧ 40 ವರ್ಷಕ್ಕಿಂತಲೂ ಹೆಚ್ಚಿನದು. ಹುಬ್ಬಳ್ಳಿ ಧ್ವಜಾರೋಹಣ ಸಂದರ್ಭದಲ್ಲಿ ಅವರಿಗೆ ವಾರಂಟ್ ಇತ್ತು. ನಾನು ಎಲ್ಲರ ಕಣ್ಣು ತಪ್ಪಿಸಿ ನನ್ನದೇ ಕಾರಿನಲ್ಲಿ ಅವರನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದೆ ಎಂದು ಅಶೋಕ್ ನೆನಪಿಸಿದರು. ಯಡಿಯೂರಪ್ಪ ಅವರು ನನ್ನ ಪಾಲಿನ ಪರಮೋಚ್ಛ ನಾಯಕರು ಎನ್ನುವುದು ನಿಜ. ಅದೇ ಹೊತ್ತಿಗೆ ನಾನು ಬಿಜೆಪಿಯ ಕಟ್ಟಾಳು. ಪಕ್ಷ ಹೇಳಿದಂತೆ ನಡೆಯುವ ನಿಷ್ಠಾವಂತ ಎಂದೂ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ : Opposition Leader : ಎಲ್ಲರನ್ನೂ ಗೆಲ್ಲಬಲ್ಲ ಅಜಾತಶತ್ರು ಸಾಮ್ರಾಟ್ ಅಶೋಕ್ ಈಗ ವಿಪಕ್ಷ ನಾಯಕ
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ
ಒಕ್ಕಲಿಗರಿಗೆ ಪ್ರತಿಪಕ್ಷ ಸ್ಥಾನ ನೀಡಿದ್ದರಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ಆಗುತ್ತದಾ ಎಂದು ಕೇಳಿದಾಗ, ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಮೊದಲು ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 2000-3000 ಮತಗಳು ಬರುತ್ತಿದ್ದವು. ಆದರೆ, ಈ ಬಾರಿ ಒಂದೊಂದು ಕ್ಷೇತ್ರದಲ್ಲಿ 20ರಿಂದ 40 ಸಾವಿರ ಮತಗಳು ಬಂದಿವೆ. ಈ ಬಾರಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದರು.