Site icon Vistara News

ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

Rahul Gandhi and R Ashok

ಬೆಂಗಳೂರು: ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್‌ ನಾಯಕರು ಈಗ ಭಾರತ್‌ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಮಾಡುತ್ತಿರುವುದು ಡೋಂಗಿತನವಾಗಿದೆ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭುತ್ವವನ್ನು ದಮನ ಮಾಡಿದ ಇವರ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ (R Ashok) ಹೇಳಿದರು. ಅಲ್ಲದೆ, ರಾಹುಲ್‌ ಗಾಂಧಿ (Rahul Gandhi) ನೆಲ ಸ್ಪರ್ಶ ಮಾಡಿದ ಕಡೆಯಲ್ಲೆಲ್ಲ ಕಾಂಗ್ರೆಸ್‌ ಅವನತಿ ಕಂಡಿದೆ ಎಂದು ಹೀಯಾಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಕಾಂಗ್ರೆಸ್‌ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಶುರು ಮಾಡಿದ್ದರು. ನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್‌ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್‌ ಅವನತಿ ಕಾಣುತ್ತದೆ. ಈಗ ನ್ಯಾಯ ಯಾತ್ರೆಯನ್ನು ಮಾಡುತ್ತಿರುವ ಅವರು ಈ ಹಿಂದೆ ಸರ್ವಾಧಿಕಾರದ ಆಡಳಿತವನ್ನು, ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ತಂದಿದ್ದರು. ನ್ಯಾಯಾಂಗವನ್ನು, ಪತ್ರಿಕಾ ರಂಗವನ್ನು ದಮನ ಮಾಡಿದ ಇದೇ ಕಾಂಗ್ರೆಸ್‌ ನಾಯಕರಿಗೆ ನ್ಯಾಯ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ನಾಯಕರು ಅನೇಕ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನೆಹರು ಕಾಲದಿಂದ ರಾಹುಲ್‌ ಗಾಂಧಿಯವರೆಗೆ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಈ ನ್ಯಾಯ ಯಾತ್ರೆ ಡೋಂಗಿ ಯಾತ್ರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ. ಪ್ರಜಾಪ್ರಭುತ್ವವನ್ನು ದಮನ ಮಾಡಿ, ಸಂಪತ್ತನ್ನು ಲೂಟಿ ಮಾಡಿದ ಇವರು ನ್ಯಾಯ ಕೇಳಲು ಹೋಗುವುದಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯ ಕೇಳಿಬಂದಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾ ಹತ್ರೆ ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಚುನಾವಣೆಯಲ್ಲಿ ಮೋದಿ ಗೆಲ್ಲುವುದು ಗ್ಯಾರಂಟಿ ಎಂದು ಆರ್.‌ ಅಶೋಕ್‌ ಹೇಳಿದರು.

ರಾಮಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಖಂಡಿಸುತ್ತೇವೆ. ಅವರು ತೀವ್ರವಾಗಿ ದಾಳಿ ನಡೆಸಿ ಮಾತನಾಡುತ್ತಿದ್ದಾರೆ. ಅಲ್ಲಿಗೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ. ತಿರುಪತಿಗೇ ಏಕೆ ಹೋಗಬೇಕು? ಧರ್ಮಸ್ಥಳಕ್ಕೇ ಏಕೆ ಹೋಗಬೇಕು? ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡಬಾರದು. ಇವೆಲ್ಲ ಸಿದ್ದರಾಮಯ್ಯನವರ ಸಂತೆ ಭಾಷಣವಾಗಿದೆ. ಮಸೀದಿಗೆ ಏಕೆ ಹೋಗಬೇಕು? ಟೋಪಿ ಏಕೆ ಹಾಕಬೇಕು? ಮನೆಯಲ್ಲೇ ಪೂಜೆ ಮಾಡಬಹುದು ಎಂದು ಕೂಡ ಪ್ರಶ್ನೆ ಮಾಡಬಾರದು. ಇನ್ನು ಸಿಎಂ ಸಿದ್ದರಾಮಯ್ಯ ಅವರು ತಾವು ಕೂಡ ಹಿಂದು ಎಂದು ಹೇಳಿಕೊಳ್ಳುವುದು ಡೋಂಗಿತನವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಪ್ರಜ್ಞೆಯೇ ಇಲ್ಲ. ಆದರೆ, ಮುಸ್ಲಿಮರಿಗೆ ಅನುದಾನ ಕೊಡುತ್ತಿದ್ದಾರೆ. ಬೆಣ್ಣೆ ಹೆಚ್ಚುವ ರಾಜಕಾರಣ ಬಿಡದಿದ್ದರೆ ಬಹುಸಂಖ್ಯಾತ ಹಿಂದುಗಳು ಸರಿಯಾದ ಸುಣ್ಣ ಹಚ್ಚುತ್ತಾರೆ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಮಾಜಿ ಸಚಿವ ವಿ.ಸೋಮಣ್ಣ ಅವರದ್ದು ಏನೂ ಸಮಸ್ಯೆ ಇಲ್ಲ. ಅವರು ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಲಿದ್ದಾರೆ. ಉಳಿದಿದ್ದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದು ಆರ್.‌ ಅಶೋಕ್‌ ಪ್ರತಿಕ್ರಿಯೆ ನೀಡಿದರು.

ಕೇಸ್‌ ಮುಚ್ಚಿಹಾಕುವ ಪ್ರಯತ್ನ

ಹಾನಗಲ್‌ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶವನ್ನು ಮಾಡಿಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ನೈತಿಕ ಪೊಲೀಸ್‌ಗಿರಿ, ದಾದಾಗಿರಿ, ದೌರ್ಜನ್ಯ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಬೆಳಗಾವಿಯಲ್ಲಿ ಬೆತ್ತಲೆ ಮಾಡಿದ ಪ್ರಕರಣವೂ ಹೀಗೆಯೇ ಆಗಿದೆ. ಸರ್ಕಾರ ಸತ್ತುಹೋಗಿದೆ ಎಂದು ಜನರು ಅಂದುಕೊಂಡಿದ್ದಾರೆ. ಬರಗಾಲ ಹಾಗೂ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: Anantkumar Hegde: ಅನಂತ ಕುಮಾರ್ ಹೆಗಡೆ ಮೈಂಡ್ ಯುವರ್ ಟಂಗ್; ಗುಡುಗಿದ ಪ್ರದೀಪ್‌ ಈಶ್ವರ್!

ರಾಜ್ಯದ ಎಲ್ಲ ಭಾಗಗಳಲ್ಲಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಜನವರಿ 22ರಂದು ವಿಶೇಷ ಪೂಜೆ ನಡೆಯಲಿದೆ. ಪದ್ಮನಾಭನಗರ ಶಾಸಕರ ಕಚೇರಿಯ ಬಳಿ ದೇವಸ್ಥಾನ ನಿರ್ಮಿಸುತ್ತಿದ್ದು, ಅಲ್ಲಿಯೇ ಶ್ರೀರಾಮ ಸೀತೆಗೆ ಪೂಜೆ ಸಲ್ಲಿಸಲಾಗುವುದು ಎಂದು ಆರ್.‌ ಅಶೋಕ್‌ ತಿಳಿಸಿದರು. ಸಂಸದರಾದ ಮುನಿಸ್ವಾಮಿ, ಶಾಸಕ ಕೆ.ಸಿ. ರಾಮಮೂರ್ತಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು

Exit mobile version