ಬೆಂಗಳೂರು: ಶ್ರೀರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ (Ram Lalla Murthy Pranapathistapane) ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರಗಳು ಮುಂದುವರಿದಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರಾದಿಯಾಗಿ ಹಲವು ನಾಯಕರ ಹೇಳಿಕೆಗಳಿಗೆ ಬಿಜೆಪಿ ನಾಯಕರು ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಕಿಡಿಕಾರಿದ್ದಾರೆ. ಮಹಾತ್ಮ ಗಾಂಧಿಯವರೂ ರಾಮ ಭಕ್ತ ಎಂದು ಹೇಳುವ ನೀವು, ಗೋಹತ್ಯೆ ನಿಷೇಧದ ಬಗ್ಗೆ ಅವರಿಗೆ ಇರುವ ಕಾಳಜಿ, ನಿಲುವನ್ನು ಏಕೆ ಒಪ್ಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಯುವನಿಧಿ ಗ್ಯಾರಂಟಿ ಹೆಸರಿನಲ್ಲಿ ಯುವಕರಿಗೆ ಟೋಪಿ ಹಾಕಿದ್ದೀರಿ ಎಂದು ಕಾಲೆಳೆದಿದ್ದಾರೆ.
ಆರ್. ಅಶೋಕ್ ಟ್ವೀಟ್‌ನಲ್ಲೇನಿದೆ?
“ಸಿಎಂ ಸಿದ್ದರಾಮಯ್ಯ ಅವರೇ, ಅಂತೂ ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ. ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ.
ಆದರೆ, ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ರಾಮನ ವಿಷಯದಲ್ಲೂ ವಿಸ್ತರಿಸುವ ಪಾಪದ ಕಟ್ಟಿಕೊಳ್ಳಬೇಡಿ. ನೀವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು ಅಂತ ಹೇಳಿದ್ದೀರಿ. ಮಹಾತ್ಮ ಗಾಂಧಿಯವರು ಗೋಹತ್ಯೆ ನಿಷೇಧದ ಅತ್ಯಂತ ದೊಡ್ಡ ಪ್ರತಿಪಾದಕರಾಗಿದ್ದರು. ಆದರೆ, ತಾವು ಗೋಹತ್ಯೆಯ ಪರ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ ಅಂತ ಗಾಂಧೀಜಿ ಹೇಳಿದ್ದರು. ಆದರೆ, ತಾವುಗಳು ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಜಹಗೀರು ಮಾಡಿಕೊಟ್ಟುಬಿಟ್ಟಿದ್ದೀರಿ. ಇದೇನಾ ತಮ್ಮ ಗಾಂಧಿವಾದ?
ರಾಮ ಸತ್ಯವಂತ. ಕೊಟ್ಟ ಮಾತಿಗೆ ಎಂದೂ ತಪ್ಪದ ವ್ಯಕ್ತಿತ್ವ. ಆದರೆ, ತಾವು ಮಾಡಿದ್ದೇನು? ಮಾಡುತ್ತಿರುವುದೇನು? ತಮ್ಮ ಮೊದಲ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಭರವಸೆಗಳಲ್ಲಿ ಅರ್ಧ ಭಾಗವೂ ಈಡೇರಿಸಲಿಲ್ಲ. ಅದರ ಮೇಲೆ ನುಡಿದಂತೆ ನಡೆದ ಸರ್ಕಾರ ಎಂಬ ಮತ್ತೊಂದು ಸುಳ್ಳು. ಈಗ ಎರಡನೇ ಅವಧಿಯಲ್ಲಿ ತಾವು ಮಾಡುತ್ತಿರುವುದೇನು? ಎಲ್ಲರಿಗೂ 200 ಯೂನಿಟ್ ಕರೆಂಟ್ ಉಚಿತ ಅಂತ ಸುಳ್ಳು ಭರವಸೆ ನೀಡಿ ಕಡೆಗೆ ಸರಾಸರಿ ಎಂದು ವರಸೆ ಬದಲಿಸಿದ್ದೀರಿ. 10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದೀರಿ. ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪದವೀಧರರಿಗೆ ಯುವನಿಧಿ ಗ್ಯಾರಂಟಿ ಅಂತ ಸುಳ್ಳು ಹೇಳಿ ಈಗ ಕಂಡಿಷನ್ ಮೇಲೆ ಕಂಡಿಷನ್ ಹಾಕಿ ಕಡೆಗೆ 3,000 ಯುವಕರು ಮಾತ್ರ ಅರ್ಹರು ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ.
ತಾವು ರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದೇರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು.
ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ತಮ್ಮ ಪಕ್ಷಕ್ಕೆ ಶ್ರೀರಾಮನ ಬಗ್ಗೆ, ಕೊಟ್ಟ ಮಾತಿನಂತೆ ರಾಮನ ಮಂದಿರ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ.
ಇದನ್ನೂ ಓದಿ: Lok Sabha Election 2024: 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು!
ಸಿದ್ದರಾಮಯ್ಯ ಸೀಟಿಗೇ ಕಂಟಕ
ಕನ್ನಡಿಗರ ರಾಮಭಕ್ತಿ, ಹಿಂದುಗಳ ಒಗ್ಗಟ್ಟು ನೋಡಿ ತಮಗೆ ನಡುಕ ಉಂಟಾಗಿದೆ ಎಂದು ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲದಿದ್ದರೆ ಪಾಪ ತಮ್ಮ ಕುರ್ಚಿಗೇ ಕಂಟಕ. ಸಿದ್ದರಾಮಯ್ಯನವರೇ ತಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ. ಇನ್ನಾದರೂ ರಾಮನಿಗೆ ಶರಣಾಗಿ” ಎಂದು ಸಿಎಂ ವಿರುದ್ಧ ಆರ್. ಅಶೋಕ್ ಹರಿಹಾಯ್ದಿದ್ದಾರೆ.