Site icon Vistara News

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

R Ashok

ಬೆಳಗಾವಿ: ರಾಜ್ಯದಲ್ಲಿ ಭೀಕರ ಬರಗಾಲ (Karnataka Drought) ಇದೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನೂ ಸೇರಿಸಿ ಯಾವೊಬ್ಬ ಸಚಿವರೂ ಸಹ ರೈತರನ್ನು ಭೇಟಿ ಮಾಡುವ ಕೆಲಸ ಮಾಡಲಿಲ್ಲ. ಸಿಎಂ ಮತ್ತು ಸಚಿವರು ಎಲ್ಲ ಕಡೆ ಹೋಗಲು ಸಾಧ್ಯವಿಲ್ಲ ಎಂಬುದು ನಮಗೂ ಗೊತ್ತು. ಆದರೆ, ಕೆಲವು ಕಡೆಯಾದರೂ ಹೋಗಬೇಕಲ್ಲವೇ? ನೋಡಲ್ ಅಧಿಕಾರಿ ವಿಮಾನದಲ್ಲಿ ಹೋಗಿ ಮೀಟಿಂಗ್ ಮಾಡಿ ವಾಪಸ್ ಬರುತ್ತಾರೆ. ಕೊನೆಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ಕೊಡುತ್ತಾರೆ. ಸಿದ್ದರಾಮಯ್ಯ ಸಿದ್ದರಾಮಣ್ಣ ಮತ್ತು ನಮ್ಮ ಊರಲ್ಲೂ ಅದೇ ಕುರುಕ್ಷೇತ್ರ ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ (Opposition leader R Ashok) ಕಿಡಿಕಾರಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಬರದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌, ಬರ ಪರಿಸ್ಥಿತಿ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಕುಳಿತಲ್ಲೇ ವರದಿ ತಯಾರಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?

ಯಾವುದಾದರೂ ತಹಸೀಲ್ದಾರ್ ಎಷ್ಟು ಊರಿಗೆ ಹೋಗಿರುವುದಾಗಿ ಹೇಳಿದ್ದಾರೆ ಎಂಬುದನ್ನು ಯಾರಾದರೂ ಹೇಳಿ ನೋಡೋಣ? ಗ್ರಾಮ ಪಂಚಾಯಿತಿಯಲ್ಲಿ ಕುಳಿತುಕೊಂಡು ಅಧಿಕಾರಿಗಳಿಗೆ ಏನು ಕೆಲಸ? ಬೆಳೆ ಎಷ್ಟು ನಷ್ಟ ಆಗಿದೆ ಅಂತ ನೋಡಿ ಹೇಳಬೇಕಲ್ಲವೇ? ಎಂದು ಆರ್.‌ ಅಶೋಕ್‌ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಸಿಎಂ ಆಗಿ ಮುಂದೆ ಇರ್ತಾರೋ ಇಲ್ಲವೋ ಗೊತ್ತಿಲ್ಲ!

ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದ್ದಾರೆ. 2 ಬಾರಿ ಸಿಎಂ ಆಗಿದ್ದಾರೆ. 14 ಬಾರಿ ಅಲ್ವಾ ಒಂದು ಹೆಚ್ಚಾಗಿ ಹೇಳಿದ್ದೇನೆ. ಮುಂದೆಯೂ ನೀವೇ ಇರುತ್ತೀರಿ ಎಂದು ಹೇಳಿದ್ದೇನೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಮಂಡ್ಯ ಎಂಎಲ್‌ಎ ರವಿ ಗಣಿಗ ಅವರು ಮಂಡ್ಯದಲ್ಲಿ 2 ವರ್ಷ, 3 ವರ್ಷ ಆದ ಮೇಲೆ ಯಾರನ್ನೋ ತರುತ್ತೇವೆ ಎಂದು ಹೇಳಿದ್ದರು ಎಂಬುದಾಗಿ ಆರ್.‌ ಅಶೋಕ್‌ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆಯುತ್ತಿದ್ದಂತೆ ಎದ್ದುನಿಂತ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ, ನಿಮ್ಮ ಪಕ್ಷದ ಶಾಸಕರೊಬ್ಬರು ಮುಂದಿನ 10 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಅಂತ ಹೇಳಿದ್ದಾರೆ ಎಂದು ನೆನಪಿಸಿದರು. ಅದಕ್ಕೆ ಆರ್.‌ ಅಶೋಕ್‌, ಆಯ್ತು ಅಂತ ಹೇಳಿ ಸುಮ್ಮನಾದರು.

ಕೇರಳದಿಂದ ಟಿಸಿ ಖರೀದಿ ಏಕೆ? ಆರಗ ಜ್ಞಾನೇಂದ್ರ ಪ್ರಶ್ನೆ

ಕೇರಳದಿಂದ ನಾಲ್ಕು ಸಾವಿರ ಟಿಸಿಗಳನ್ನು ಏಕೆ ಖರೀದಿ ಮಾಡುತ್ತಿದ್ದೀರಿ? ನಮ್ಮ ರಾಜ್ಯದಲ್ಲಿ ಉತ್ತಮ ಸಂಸ್ಥೆಗಳು ಇದ್ದರೂ ಕೇರಳದ ಸಂಸ್ಥೆಗಳಿಂದ ಟ್ರಾನ್ಸ್‌ಫಾರ್ಮ್ ಅನ್ನು ಖರೀದಿ ಮಾಡಿದ್ದು ಏಕೆ? ಎಂದು ಆರಗ ಜ್ಞಾನೇಂದ್ರ ಸದನದಲ್ಲಿ ಇದೇ ವೇಳೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ನಮ್ಮ ರಾಜ್ಯದ ಸಂಸ್ಥೆಯಿಂದಲೂ ಟಿಸಿ ಕೂಡ ಖರೀದಿ ಮಾಡುತ್ತಿದ್ದೇವೆ. ಹೆಚ್ಚುವರಿ ಟಿಸಿಗೆ ಕೇರಳ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಿಂದ ಖರೀದಿ ಮಾಡುತ್ತಿದ್ದೇವೆ. ಇದೇನು ಹೊಸತಲ್ಲ, ಬೆಸ್ಕಾಂ ಮನವಿ ಮೇರೆಗೆ ಒಪ್ಪಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.

ಟಿಸಿ ಬದಲಾಯಿಸಲು ಹಣ ಕೇಳುತ್ತಿದ್ದಾರೆ!

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌, ರೈತರು ಹೇಳಿದ್ದನ್ನು ನಾನು ಹೇಳುತ್ತಿದ್ದೇನೆ. ಒಂದು ಟಿಸಿ ರಿಪೇರಿಗೆ ಹತ್ತರಿಂದ ಐದಿನೈದು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ಕಂಬ ಹಾಕಲು ಎಂಟು ಸಾವಿರ ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ. ಏಳೆಂಟು ಬೋರ್‌ವೆಲ್‌ಗಳಿಗೆ ಒಂದು ಟ್ರಾನ್ಸ್‌ಫಾರ್ಮರ್ ಇರುತ್ತದೆ. ಅದು ರಿಪೇರಿಯಾದರೆ ಎಲ್ಲರೂ ಎರಡು ಸಾವಿರ ರೂಪಾಯಿ ಹಾಕಬೇಕು. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಇದಕ್ಕೆ ಸಾಕ್ಷಿ ಕೇಳಿದ್ದರು. ಶಾಸಕ ಬಾಲಕೃಷ್ಣ ಅವರು ಹಿಂದೆಯೂ ಇತ್ತು, ಈಗಲೂ ಇದೆ ಎಂದು ಹೇಳುತ್ತಿದ್ದಾರೆ. ಸಾಕ್ಷಿಗೆ ಅವರ ಈ ಹೇಳಿಕೆಯೇ ಸಾಕು ಅನ್ನಿಸುತ್ತದೆ ಎಂದು ಹೇಳಿದರು.

ಹಣ ಕೇಳುವ ಅಧಿಕಾರಿ ಹೆಸರು ಹೇಳಿ; ಕ್ರಮ ತೆಗೆದುಕೊಳ್ಳುವೆ

ಶಾಸಕ ಸುನೀಲ್ ಕುಮಾರ್ ಮಾತನಾಡಿ, 24 ಗಂಟೆಯೊಳಗೆ ಟಿಸಿ ಸರಿ‌ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಂಡಿದ್ದರು. ಬರಗಾಲದ ಸಂದರ್ಭದಲ್ಲಿ ಟಿಸಿ ಬದಲಾವಣೆಗೆ ಹಣ ಕೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಜೆ. ಜಾರ್ಜ್‌, ಈಗ ಅಧಿಕಾರಿಗಳು ಹಣ ಕೇಳುತ್ತಾ ಇದ್ದಾರೆ ಎಂದು ವಿಪಕ್ಷ ನಾಯಕರು ಹೇಳುತ್ತಾ ಇದ್ದಾರೆ. ಯಾವ ಅಧಿಕಾರಿಗಳು ಎಂದು ನನ್ನ ಗಮನಕ್ಕೆ ತಂದರೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.

ಟಿಸಿಗೆ ಸಂಬಂಧಿಸಿ ಎಲ್ಲದಕ್ಕೂ ಹಣ ಕೊಡಬೇಕು: ಅಶೋಕ್‌ ಕಿಡಿ

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್, ಟಿಸಿಗಳನ್ನು ರಿಪೇರಿ ಮಾಡಲು ಹಣ ಕೊಡಬೇಕು. ರಿಪೇರಿಗೆ ತೆಗೆದುಕೊಂಡು ಹೋದ ಆಟೋ ಚಾರ್ಜ್ ಕೊಡಬೇಕು. ಟಿಸಿಗೆ ಆಯಿಲ್‌ ಅನ್ನು ಸ್ವತಃ ರೈತರೇ ಕೊಡಬೇಕು. ಉಪ್ಪು ಸಹ ಕೊಡಬೇಕು, ಸರ್ಕಾರಕ್ಕೆ ಉಪ್ಪು ಸಹ ಬರವೇ? ಎಂದು ಸದನದ ಗಮನಕ್ಕೆ ತಂದರು. ಆಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ಅಂತಹ ಯಾವ ಘಟನೆಗಳು ಆಗಿವೆ ಎಂಬ ಬಗ್ಗೆ ನಮಗೆ ವಿವರ ಕೊಡಿ. ಯಾರು ತಪ್ಪಿತಸ್ಥರು ಇದ್ದಾರೆ. ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇನ್ನೂ ಸ್ಟ್ರಾಂಗ್ ಆಗಿ ಮಾತಾಡಬೇಕು ಎಂದ ರಾಯರೆಡ್ಡಿ

ಬರದ ವಿಷಯದಲ್ಲಿ ಸರ್ಕಾರ ಅಧಿಕಾರಿಗಳ ಮಾತು ಕೇಳಿದರೆ ಆಗುವುದಿಲ್ಲ. ಜನರ ಬಳಿಯೇ ನೀವು ಹೋಗಿ, ಸತ್ಯ ಗೊತ್ತಾಗುತ್ತದೆ ಎಂದು ಆರ್.‌ ಅಶೋಕ್‌ ಹೇಳುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಶಾಸಕ ಬಸವರಾಜ್ ರಾಯರೆಡ್ಡಿ, ಅಶೋಕ್ ಅವರೇ ನಿಮ್ಮ ಬಳಿ ಇರುವ ಮಾಹಿತಿ ಕೊಟ್ಟು ಬಿಡಿ. ಆಡಳಿತಾತ್ಮಕವಾಗಿ ಒಳ್ಳೆಯದು ಆಗಲಿದೆ. ನೀವು ರೂಲಿಂಗ್ ಪಾರ್ಟಿಯವರು ಮಾತಾಡಿದಂತೆ ಮಾತಡುತ್ತೀರಿ. ನೀವು ವಿಪಕ್ಷ ನಾಯಕರು. ಇನ್ನೂ ಸ್ಟ್ರಾಂಗ್ ಆಗಿ ಮಾತಾಡಬೇಕು ಎಂದು ಸಲಹೆ ನೀಡಿದರು.

ಕರಡಿ ದಾಳಿಯಾದವರಿಗೆ ಪರಿಹಾರ ಕೊಡಿ

ಬಳಿಕ ಮಾತು ಮುಂದುವರಿಸಿದ ಆರ್. ಅಶೋಕ್, ಕರೆಂಟ್ ಬರೋದು ಬೆಳಗಿನ ಜಾವ ಮೂರು ಗಂಟೆ ಎಂದು ಹೇಳುತ್ತಾರೆ. ಆದರೆ ಅದೂ ಸಹ ಎರಡು ಗಂಟೆ ಬರುತ್ತದೆ. ಅದು ಸಹ ಟ್ರಿಪ್‌ ಆಗುತ್ತಿರುತ್ತದೆ. ಟಿಸಿಗಳು ಸುಟ್ಟು ಹೋಗುತ್ತವೆ. ರಾತ್ರಿ ಕರೆಂಟ್ ಕೊಡುತ್ತೇವೆ ಎಂದು ಹೇಳಿದರು. ರಾತ್ರಿ ಕರೆಂಟ್ ಹಾಕಲು ಹೋದವನಿಗೆ ಕರಡಿ ಕಚ್ಚಿದೆ. ಹಗಲು ಹೊತ್ತು ಕರೆಂಟ್ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು. ಕರಡಿ ಕಚ್ಚಿದರೆ ಅರಣ್ಯ ಇಲಾಖೆಯಿಂದ ಕಡಿಮೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಇಂಧನ ಕೆ.ಜೆ ಜಾರ್ಜ್, ನನಗೆ ಕೆಲ ರೈತರು ಮನವಿ ಮಾಡಿದ್ದಾರೆ. ನಿರಂತರವಾಗಿ ಕರೆಂಟ್ ಕೊಟ್ಟರೆ ಬೋರ್‌ವೆಲ್‌ ಅನ್ನು ನಿರಂತರವಾಗಿ ಬಳಕೆ‌ ಮಾಡಲು ಆಗಲ್ಲ. ಹಗಲು ಮತ್ತು ರಾತ್ರಿ ವೇಳೆ ಸಮಯ ಹಂಚಿಕೆ ವಿದ್ಯುತ್‌ ಕೊಡಿ ಎಂದು ಮನವಿ ಮಾಡಿದ್ದಾರೆ. ಕರಡಿ, ಆನೆ ಕಾಟ ಇರುವ ಕಡೆ ಹಗಲು ಹೊತ್ತು ಕರೆಂಟ್ ಕೊಡಲು ಆದೇಶ ಮಾಡಲಾಗಿದೆ. ರಾತ್ರಿ ಹೊತ್ತು ಬೋರ್‌ವೆಲ್ ಆನ್ ಮಾಡಲು ಹೋದಾಗ ಕರಡಿ ದಾಳಿಗೆ ತುತ್ತಾದವರಿಗೆ ನಮ್ಮ ಇಲಾಖೆಯಿಂದಲೇ ಪರಿಹಾರ ನೀಡಲಾಗುತ್ತದೆ. ಆದರೆ, ಇದು ಇದೊಂದು ಪ್ರಕರಣಕ್ಕೆ ಮಾತ್ರ ಎಂದು ಹೇಳಿದರು. ಎಲ್ಲರಿಗೂ ಅನ್ವಯ ಆಗಲಿ ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಅದಕ್ಕೆ ಇಲ್ಲ ಎಂದು ಕೆ.ಜೆ. ಜಾರ್ಜ್‌ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಅವರಿಗೆ ಹಣ ಹೊಂದಿಸುವ ಸಾಮರ್ಥ್ಯವಿದೆ

ರೈತರಿಗಾಗಿ ಹಗಲು ಹೊತ್ತು ಕರೆಂಟ್ ಕೊಡಿ. ಇದಕ್ಕೆ ಸಾವಿರ ಕೋಟಿ ರೂ. ಆಗಬಹುದು. ಸಿಎಂ ಸಿದ್ದರಾಮಯ್ಯ ಅವರಿಗೆ ಹಣ ಹೊಂದಿಸುವ ಸಾಮರ್ಥ್ಯವಿದೆ. ಮೇವು ಸಂಗ್ರಹ ಎಂಟರಿಂದ ಹತ್ತು ಆಗುತ್ತದೆ ಎಂದು ಹೇಳಿದ್ದಾರೆ. ಎಲ್ಲೂ ಸಂಗ್ರಹ ಮಾಡಿದ್ದು ಕಾಣಿಸಿಲ್ಲ. ನಮ್ಮ ಬಳಿ ಹಣವಿದೆ, ಆದರೆ ಮೇವು ಖರೀದಿಗೆ ಸರ್ಕಾರ ಆದೇಶ ಕೊಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂದೆ ಜನವರಿಯಲ್ಲಿ ಮೇವು ಎಲ್ಲಿಂದ ತರುತ್ತೀರ? ಇದುವರೆಗೆ ಒಂದು ಗೋ ಶಾಲೆಯನ್ನೂ ಮಾಡಿಲ್ಲ. ಸರ್ಕಾರ‌ ಮಾಡಿದ್ದನ್ನು ಸಹ ಕ್ಯಾನ್ಸಲ್ ಮಾಡಿದ್ದಾರೆ. ರೈತರಿಗೆ ಮೇವು ಕೊಡಬೇಕು. ದೇವರ ಹೆಸರಿನಲ್ಲಿ ಗೋವುಗಳನ್ನು ಬಿಟ್ಟಿರುತ್ತಾರೆ. ಈ ಬಗ್ಗೆ ಬಳ್ಳಾರಿ ಡಿಸಿ ಜತೆಗೆ ಮಾತನಾಡಿದ್ದೇನೆ. ಅವರು ನಮ್ಮ ಬಳಿ ಹಣ ಇದೆ ಎಂದು ಹೇಳುತ್ತಾರೆ. ಹಣ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಖರ್ಚು ಮಾಡುವ ಮನಸ್ಸು ಮಾಡುತ್ತಿಲ್ಲ. ಜಿಲ್ಲಾ‌ ಮಂತ್ರಿಗಳು ಪರಿಶೀಲನೆ ಸಭೆ ನಡೆಸಿ ಹಣ ಬಿಡುಗಡೆಗೆ ಆದೇಶ ಮಾಡಬೇಕಿತ್ತು. ಅಧಿಕಾರಿಗಳಿಗೆ ಬುದ್ಧಿ ಕಲಿಸಿದರೆ ಎಲ್ಲರೂ ದಾರಿಗೆ ಬರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: Belagavi Winter Session: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ; ತಿದ್ದುಪಡಿ ವಿಧೇಯಕ ಮಂಡನೆ

ಸಿಎಂ ಸಿದ್ದರಾಮಯ್ಯ ಜನತಾ ದರ್ಶನವನ್ನು ಪ್ರತಿ ತಿಂಗಳು ಮಾಡಬೇಕು ಎಂದು ಆರ್.‌ ಅಶೋಕ್ ಇದೇ ವೇಳೆ ಒತ್ತಾಯ ಮಾಡಿದರು.

Exit mobile version