Site icon Vistara News

DK Shivakumar: ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದ ಬಿಜೆಪಿ ಗೂಂಡಾಗಳಿಗೆ ಹೆದರಲ್ಲ: ಡಿಕೆಶಿ

Congress Protest

ಬೆಂಗಳೂರು: ಬಿಜೆಪಿ ಗೂಂಡಾಗಳು (BJP goons) ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸ್ಸಿಗ ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

ಅಸ್ಸಾಂನಲ್ಲಿ ರಾಹುಲ್ ಗಾಂಧಿ (Rahul Gandhi) ಅವರ ಭಾರತ ಜೋಡೋ ನ್ಯಾಯ ಯಾತ್ರೆ (Bharat Jodo Nyay Yatra) ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆ ಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ನಡುಕ

ರಾಹುಲ್ ಗಾಂಧಿ ಅವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

ಇದನ್ನೂ ಓದಿ: Ram Mandir: ನಾನು ಯಾವ ದೇವಾಲಯಕ್ಕೂ ಹೋಗಲ್ಲ, ನನಗೆ ಭಕ್ತಿ ಇಲ್ಲ ಏನು ಮಾಡಲಿ? ಪ್ರಿಯಾಂಕ್‌ ಖರ್ಗೆ

ಭಾರತ ಜೋಡೋ ನ್ಯಾಯ ಯಾತ್ರೆ ಕುರಿತು ಪಕ್ಷದ ಮುಖಂಡರು ಚರ್ಚೆ ಮಾಡುವಾಗ ನಾನು ಸಿದ್ದರಾಮಯ್ಯ ಅವರು ಇದ್ದೆವು. ಈ ಚಳಿ, ಬಿಸಿಲಿನಲ್ಲಿ ಹೆಜ್ಜೆ ಹಾಕಿ ಈ ದೇಶದ ಹೃದಯಗಳನ್ನು ಒಗ್ಗೂಡಿಸಬೇಕು, ಜನರ ಧ್ವನಿಯಾಗಿ, ಅವರ ಸಮಸ್ಯೆ ಬಗೆಹರಿಸಬೇಕು. ಆ ಮೂಲಕ ನ್ಯಾಯ ಒದಗಿಸಬೇಕು ಎಂಬ ನಿರ್ಣಯಕ್ಕೆ ರಾಹುಲ್ ಗಾಂಧಿ ಅವರು ಬದ್ಧರಾಗಿದ್ದಾರೆ. ಈ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಎಲ್ಲ ವಿರೋಧ ಪಕ್ಷಗಳಿಗೆ ಮಾದರಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ?

ದೇಶದ ಐಕ್ಯತೆ, ಸಮಗ್ರತೆ ಶಾಂತಿಗೆ ಸಾವಿರಾರು ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತನ್ನ ಅಜ್ಜಿಗೆ ಗುಂಡು ಹಾರಿಸಿ ಕೊಂದಿದ್ದನ್ನು, ಅವರ ಚಿಕ್ಕಪ್ಪ ಸಂಜಯ್ ಗಾಂಧಿ ಹತ್ಯೆಯನ್ನು, ತನ್ನ ತಂದೆ ರಾಜೀವ್ ಗಾಂಧಿ ಮೇಲೆ ಬಾಂಬ್ ದಾಳಿ ಮಾಡಿ ಹತ್ಯೆ ಮಾಡಿದ್ದನ್ನು ಚಿಕ್ಕ ವಯಸ್ಸಿನಲ್ಲೇ ಕಂಡಿದ್ದಾರೆ. ಇಷ್ಟು ದುಖಃ ಅನುಭವಿಸಿದ್ದರೂ ಅವರು ದೇಶದ ಒಗ್ಗಟ್ಟಿಗಾಗಿ ಯಾತ್ರೆ ಮಾಡುತ್ತಿದ್ದಾರೆ. ಅದನ್ನು ನೋಡಿ ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ? ಕಾಂಗ್ರೆಸ್ ಪಕ್ಷ ಮಾತ್ರ ಇಂತಹ ಯಾತ್ರೆ ಮಾಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಲವೇ ಗಂಟೆಗಳ ಸೂಚನೆಗೆ ಸ್ಪಂದಿಸಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಂದು ಭಾಗವಹಿಸಿದ್ದೀರಿ. ನೀವು ರಾಹುಲ್ ಗಾಂಧಿ ಅವರ ಬೆಂಬಲವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ಯಾತ್ರೆ ನಿಲ್ಲಿಸಲು ಬಿಜೆಪಿ ಮಾಡುತ್ತಿರುವ ಯಾವುದೇ ಷಡ್ಯಂತ್ರಕ್ಕೂ ನಾವು ಜಗ್ಗುವುದಿಲ್ಲ. ದೇಶದ ಒಗ್ಗಟ್ಟು, ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಧರ್ಮದ ವಿಚಾರದಲ್ಲಿ ಬಿಜೆಪಿ ರಾಜಕಾರಣ

ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಬೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದು ಧರ್ಮ ನಿಮ್ಮ ಮನೆ ಆಸ್ತಿಯೇ? ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ, ಪೂಜೆ ನೂರಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಕಲ್ಲು, ನೀರು, ಮರ, ಗಾಳಿಯಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಡಿಕೆಶಿ ವ್ಯಂಗ್ಯ

ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಹಜ್ ಸಮಿತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಇದೆ. ಸಂವಿಧಾನದ ಪರವಾಗಿ ನಾವು ಎಲ್ಲ ಧರ್ಮಕ್ಕೂ ಆದ್ಯತೆ ನೀಡುತ್ತಾ ಬಂದಿದ್ದೇವೆ. ಎಲ್ಲರಿಗೂ ಸಮಾನವಾಗಿ ಕಂಡು ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ. ನಿಮ್ಮ ಕೈಯಲ್ಲೂ ಅಧಿಕಾರ ಇತ್ತು. ಆಗ ಜನಪರ ಕಾರ್ಯಕ್ರಮ ಯಾಕೆ ಮಾಡಲಿಲ್ಲ. ಈಗ ಅಧಿಕಾರ ಹೋದ ನಂತರ ಸಂಕಟಪಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು.

ಐದು ಗ್ಯಾರಂಟಿ ಸೇರಿ ಕೈ ಬಲಿಷ್ಠವಾಯಿತು

ಈ ಸರ್ಕಾರ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಬಲಿಷ್ಠವಾಯಿತು. ಇದನ್ನು ಬಿಜೆಪಿ ಸಹಿಸಲು ಆಗುತ್ತಿಲ್ಲ. ನಾವೆಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದ ಭಾರತ ಜೋಡೋ ಯಾತ್ರೆ ವೇಳೆ ರಾಜ್ಯದಲ್ಲಿ ಚಾಮರಾಜನಗರದಿಂದ ರಾಯಚೂರಿನವರೆಗೂ ಹೆಜ್ಜೆ ಹಾಕಲಾಯಿತು. ಇದರ ಯಶಸ್ಸಿನಿಂದಾಗಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬಲಿಷ್ಠವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಸೇವೆ ಅವಕಾಶ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಹುಟ್ಟಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಾವು ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ಮಾಡಿದ್ದೆವು. ಆ ಸರ್ಕಾರವನ್ನು ಬೀಳಿಸಿದವರ ಜತೆಗೆ ಇಂದು ಜೆಡಿಎಸ್ ಸಖ್ಯ ಬೆಳೆಸಿದೆ. ಅನ್ಯಾಯ ಮಾಡಿದವರ ಜತೆ ಸೇರಿ ರಾಜಕಾರಣ ಮಾಡುತ್ತಿದ್ದಾರೆ. ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆಗಳು ಜನರಿಗೆ ನೆರವಾಗಿದೆ. ಅನ್ನಭಾಗ್ಯ ಯೋಜನೆ ಅಕ್ಕಿಯೇ ನಾವು ಜನರಿಗೆ ನೀಡುವ ಮಂತ್ರಾಕ್ಷತೆ. ನಾವು ಈ ಯೋಜನೆಗಳನ್ನು ಒಂದು ಜಾತಿ, ಧರ್ಮ, ಸಮುದಾಯ, ಪಕ್ಷದವರಿಗೆ ಮಾತ್ರ ನೀಡುತ್ತಿದ್ದೇವಾ? ಇದೇ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಶ್ರೀರಾಮ ಬಿಜೆಪಿಗರ ಮನೆಯ ಆಸ್ತಿಯೇ?

ನೀವು ಹಾಗೂ ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಎಂದು ಕೂಗಿದ್ದರ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಯನ್ನು ಮಾಧ್ಯಮದವರು ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಶ್ರೀರಾಮ ಬಿಜೆಪಿಯವರ ಮನೆಯ ಆಸ್ತಿಯೇ? ರಾಮ ಯಾರ ಮನೆ ಆಸ್ತಿಯೂ ಅಲ್ಲ. ಗಾಂಧೀಜಿ ಅವರು ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಮ್ ಎಂದು ಹೇಳಿದ್ದು, ಅಲ್ಲಿ ರಾಮ ಹಾಗೂ ಸೀತೆ ಇಬ್ಬರೂ ಇದ್ದಾರೆ. ಅವರು ನಮ್ಮನ್ನು ಹಿಂದು ವಿರೋಧಿ ಎಂದು ಬಿಂಬಿಸಲು ಈ ರೀತಿ ಟೀಕೆ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ರಾಮಲಿಂಗಾ ರೆಡ್ಡಿ ಅವರ ನೇತೃತ್ವದ ಧಾರ್ಮಿಕ ದತ್ತಿ ಇಲಾಖೆ ಮೂಲಕ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದೆ. ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಕಾಂಗ್ರೆಸ್ಸಿಗರು ಈ ಕೆಲಸ ಮಾಡುತ್ತಿದ್ದಾರೆ. ನಮಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ಅಸೂಯೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.

ಸದ್ಯದಲ್ಲೇ ಕಾರ್ಯಕರ್ತರ ಸಮಾವೇಶದ ದಿನ ಪ್ರಕಟ

ಇದೇ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 21ರಂದು ನಡೆಯಬೇಕಿದ್ದ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಲಾಗಿದ್ದು, ಪಕ್ಷದ ಅಧ್ಯಕ್ಷರ ಜತೆ ಮಾತನಾಡಿ ಶೀಘ್ರದಲ್ಲೇ ಸಮಾವೇಶದ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.

ಸಂಘಟನೆ ಸಾಮರ್ಥ್ಯ ನೋಡಿ ಪಾಲಿಕೆ ಚುನಾವಣೆಯಲ್ಲಿ ಆದ್ಯತೆ

ಈ ಬಾರಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಬೆಳಗ್ಗೆ 10.30ರ ನಂತರ ಕೆಪಿಸಿಸಿ ಕಚೇರಿ ಹಾಗೂ ಸರ್ಕಾರಿ ಗೃಹ ಕಚೇರಿ ಬಳಿ ನನ್ನನ್ನು ಬಂದು ಭೇಟಿ ಮಾಡಿ. ನಾವು ಕಾಂಗ್ರೆಸ್ ಪಕ್ಷದ ಕೆಲಸವನ್ನು ಮಾಡಬೇಕು. ನೀವು ನಾವೆಲ್ಲ ಸೇರಿ ಬೆಂಗಳೂರಿನ ನಾಲ್ಕು ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಪ್ರತಿ ಬೂತ್‌ನಲ್ಲಿ ಬಿಎಲ್ಎಗಳನ್ನು ನೇಮಿಸಿ ಮನೆ ಮನೆಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆ ನಂತರ ಪಾಲಿಕೆ ಹಾಗೂ ಇತರೆ ಚುನಾವಣೆ ನಡೆಯುತ್ತದೆ. ನಿಮ್ಮ ಸಂಘಟನೆ ನೋಡಿ ನಾವು ಪಾಲಿಕೆ ಚುನಾವಣೆಯಲ್ಲಿ ನಿಮಗೆ ಅವಕಾಶ ನೀಡುತ್ತೇವೆ. ನಿಮ್ಮನ್ನು ಶಕ್ತಿಶಾಲಿಯಾಗಿ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಮಧ್ಯೆ ಶಿಕ್ಷಕರ ಕ್ಷೇತ್ರದ ಚುನಾವಣೆ ಇದ್ದು, ಪುಟ್ಟಣ್ಣ ನಮ್ಮ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಅಭ್ಯರ್ಥಿ ಗೆಲ್ಲುವಂತೆ ಮಾಡಬೇಕು. ಇದು ನಿಮ್ಮ ಚುನಾವಣೆ. ಅಧಿಕಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರತಿ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು 18, ಜಿಲ್ಲಾ ಮಟ್ಟದಲ್ಲಿ 21 ಜನರನ್ನು ನೇಮಿಸಿ ನಿಮಗೆ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಮನೆ ಬಾಗಿಲಿಗೆ ಹೋಗಿ ಜನರ ಸಮಸ್ಯೆ ಆಲಿಸಿ ಅದನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಪರಿಷತ್ ಚುನಾವಣೆ ನಂತರ ಇತರ ಭಾಗಗಳಲ್ಲಿ ಈ ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ: Ram Mandir: ನಾನು ಯಾವ ದೇವಾಲಯಕ್ಕೂ ಹೋಗಲ್ಲ, ನನಗೆ ಭಕ್ತಿ ಇಲ್ಲ ಏನು ಮಾಡಲಿ? ಪ್ರಿಯಾಂಕ್‌ ಖರ್ಗೆ

ಎಲ್ಲರ ಅಭಿಪ್ರಾಯ ಸ್ವೀಕಾರ

ನಿಗಮ ಮಂಡಳಿ ನೇಮಕದಲ್ಲಿ ನಮ್ಮ ಅಭಿಪ್ರಾಯ ಪಡೆದಿಲ್ಲ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಎಲ್ಲರ ಅಭಿಪ್ರಾಯವನ್ನು ಪಡೆದು, ಮಾರ್ಗಸೂಚಿ ನಿಗದಿ ಮಾಡಿದ್ದು, ಅದರಂತೆ ಎಲ್ಲರಿಗೂ ಅಧಿಕಾರವನ್ನು ಹಂಚಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version